ಲೇಖನ
– ಡಾ ಶಶಿಕಾಂತ ಪಟ್ಟಣ
ರಾಮದುರ್ಗ
ಮೊ: 9552002338
ಉದಯರಶ್ಮಿ ದಿನಪತ್ರಿಕೆ
ಹಡಪದ ಅಪ್ಪಣ್ಣನವರು 12ನೇ ಶತಮಾನದ ವಚನಕಾರರು ಮತ್ತು ಬಸವಣ್ಣನವರ ಆಪ್ತ ಕಾರ್ಯದರ್ಶಿ. ಇವರು ಬಸವಣ್ಣನವರ ಬಲಗೈ ಬಂಟರೆಂದು ಪ್ರಸಿದ್ಧರು. ‘ಅನುಭವ ಮಂಟಪದಲ್ಲಿ’ ಪ್ರಮುಖ ಪಾತ್ರ ವಹಿಸಿದ್ದರು. ಇವರು ‘ಬಸವಪ್ರಿಯ ಕೂಡಲ ಚೆನ್ನಬಸವಣ್ಣ’ ಎಂಬ ಅಂಕಿತನಾಮದಲ್ಲಿ 250ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಇವರ ಪತ್ನಿ ಲಿಂಗಮ್ಮನವರು ಕೂಡ ವಚನಗಾರ್ತಿಯಾಗಿದ್ದರು
ಅಪ್ಪಣ್ಣನ ಹೆಸರಿನ ಹಿಂದೆ ಸೇರಿದ ‘ಸಂಗಮೇಶ್ವರ’ (ಕೂಡಲಸಂಗಮ) ಈತನ ಸ್ಥಳವಾಗಿರಬೇಕು. ವಚನಗಳಲ್ಲಿ ಲಿಂಗ ತತ್ವ ಷಟಸ್ಥಲ ಬೋಧೆ ಕಾಯಕ ದಾಸೋಹದ ಮಹತ್ವ ಮುಂತಾದ ಅನೇಕ ವಿಷಯಗಳ ಮೇಲೆ ಭಿನ್ನ ಚಿಂತನೆ ನಡೆಸಿದವರು.
ಎಲ್ಲವೂ ತಾತ್ವಿಕವಾಗಿವೆ. ಅನ್ಯಮತ ಖಂಡನೆ, ಶಿವಪಾರಮ್ಯ ಸ್ಥಾಪನೆಗೆ ವಿಶೇಷ ಸ್ಥಾನ ಸಂದಿದೆ. ಶರಣಸ್ತುತಿ, ಶೂನ್ಯಸಿಂಹಾಸನ, ಅನುಭವ ಮಂಟಪಗಳ ಉಲ್ಲೇಖ, ಪ್ರಭುದೇವರು ಕಲ್ಯಾಣಕ್ಕೆ ಬಂದ ಪ್ರಸಂಗ ಮತ್ತು ಆರೋಗಣೆ ನಡೆಸಿದ ಸಂದರ್ಭಗಳನ್ನು ಪ್ರಸ್ತಾಪಿಸುವುದು ಮಹತ್ವದ ಅಂಶಗಳೆನಿಸಿವೆ. ತುಂಬ ದೀರ್ಘವಾಗಿದ್ದು ಗದ್ಯಲಕ್ಷಣವನ್ನು ಹೊಂದಿದ ರಚನೆಗಳ ಜೊತೆಗೆ ಮುಕ್ತಕ ರೂಪದ ವಚನಗಳೂ ಸಮಾವೇಶಗೊಂಡಿವೆ.
ಲಿಂಗತತ್ವ ಸಂಗಮೇಶ್ವರ ಅಪ್ಪಣ್ಣನಿಗೆ ಅಪಾರವಾಗಿದೆ. ತರ್ಕಶಕ್ತಿ ಅಗಾಧವಾಗಿದೆ. ಲಿಂಗಾಯತ ತತ್ತ್ವ ಪ್ರತಿಪಾದನೆ ವಿಶೇಷವಾಗಿ ಕಂಡು ಬರುತ್ತದೆ. ಶಿವಪಾರಮ್ಯ, ಅನ್ಯಮತ ಖಂಡನೆ, ಬ್ರಾಹ್ಮಣರ ಕರ್ಮಠತನದ ಖಂಡನೆ, ಅಷ್ಟಾವರಣ, ಪಂಚಾಚಾರಗಳ ವಿವರಣೆ ಇವನ ವಚನಗಳಲ್ಲಿ ಬಂದಿದೆ.
ಸಂಗಮೇಶ್ವರ ಅಪ್ಪಣ್ಣ ಮತ್ತು ಹಡಪದ ಅಪ್ಪಣ್ಣ ಇಬ್ಬರೂ ಒಬ್ಬರೇ
ಇತ್ತೀಚಿನ ನನ್ನ ಅಧ್ಯಯನ ಮತ್ತು ಸಂಶೋಧನೆಯಿಂದ ನಾನು ಸಂಗಮೇಶ್ವರ ಅಪ್ಪಣ್ಣ ಮತ್ತು ಹಡಪದ ಅಪ್ಪಣ್ಣ ಇಬ್ಬರೂ ಒಬ್ಬರೇ ಎಂದು ಖಚಿತಪಡಿಸಲು ಇಚ್ಛಿಸುತ್ತೇನೆ. ಇದಕ್ಕೆ ಕೆಲ ಪುರಾವೆಗಳನ್ನೂ ಇಲ್ಲಿ ನೀಡುತ್ತಿದ್ದೇನೆ.
1 ವಚನಾಂಕಿತ – ಬಸವಪ್ರಿಯ ಕೂಡಲ ಚೆನ್ನಸಂಗಮದೇವ -ಈ ವಚನಾಂಕಿತ ಸಂಗಮೇಶ್ವರ ಅಪ್ಪಣ್ಣ ಮತ್ತು ಹಡಪದ ಅಪ್ಪಣ್ಣನವರ ವಚನಾಂಕಿತವಾಗಿದ್ದು ಇಬ್ಬರೂ ಒಬ್ಬರೇ ಎನ್ನುವ ನಿರ್ಧಾರ ಬಲವಾಗುತ್ತದೆ.
2 ಇಬ್ಬರ ವಚನಗಳಲ್ಲಿ -ಲಿಂಗ ತತ್ವ ಷಟಸ್ಥಲ, ಸಿದ್ಧಾಂತ ಅಪಾರವಾಗಿ ಕಂಡು ಬರುತ್ತದೆ. ವಚನ ರಚನಾ ಕೌಶಲ್ಯ,ಭಾವ,ಚಿಂತನೆಗಳು ಒಂದೇ ರೀತಿಯಾಗಿ ಕಂಡು ಬರುತ್ತವೆ.
3 ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರ ಅಪ್ಪಣನವರ ವಚನಗಳಲ್ಲಿ ತಮ್ಮ ಬಸವಣ್ಣನವರ ಸಂಬಂಧವು ಎದ್ದು ಕಾಣುತ್ತದೆ,ಹೀಗಾಗಿ ಇಬ್ಬರೂ ಬೇರೆ ಬೇರೆ ಅಲ್ಲ ಒಬ್ಬರೇ ಎಂದು ನಿರ್ಧರಿಸಬಹುದು.
3 ಹಡಪದ ಅಪ್ಪಣ್ಣ ಬಾಗೇವಾಡಿಯ ಹತ್ತಿರದ ಮುಸುಬಿನಾಳ ಗ್ರಾಮದವನು, ಅವನ ಹೆಂಡತಿ ಲಿಂಗಮ್ಮ ಅದೇ ಊರಿನ ಹೂಗಾರ ನಾಗಪ್ಪನ ಮಗಳು ಎಂದು ಇತ್ತೀಚಿನ ಅಧ್ಯಯನ ಮತ್ತು ಸಂಶೋಧನೆಯಿಂದ ತಿಳಿದು ಬರುತ್ತದೆ. ಬಾಲಕ ಬಸವಣ್ಣ ಬಾಗೇವಾಡಿ ಅಗ್ರಹಾರದ ವಿರುದ್ಧ ಬಂಡೆದ್ದು ಮನೆ ಬಿಟ್ಟು ಹೋಗುವಾಗ ಅಕ್ಕ ಅಕ್ಕನಾಗಮ್ಮ ಪತಿ ಶಿವಸ್ವಾಮಿ ಜೊತೆಗೆ ಹಿರಿಯ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ಅವರ ಜೊತೆಗೆ ಕೂಡಲ ಸಂಗಮಕ್ಕೆ ಹೋಗಿರಬಹುದು. ಹನ್ನೆರಡು ವರುಷ ಕೂಡಲ ಸಂಗಮದಲ್ಲಿ ಇದ್ದು ತನ್ನ ಕಾಯಕ ಮಾಡುತ್ತಾ ಬಸವಣ್ಣನವರ ಅಧ್ಯಯನಕ್ಕೆ ಸಹಾಯ ಮಾಡುತ್ತ ಮುಂದೆ ಮಂಗಳವೆಡೆಗೆ ಹೋಗಿ ಬಸವಣ್ಣನವರ ನೆರಳಂತೆ ನಿಂತದ್ದು ಸ್ಪಷ್ಟವಾಗಿ ಕಂಡು ಬರುತ್ತದೆ.
4 ಮಾದಲಾಂಬಿಕೆಯ ತಾಯಿಯ ತವರು ಮನೆ ಕೂಡಲಸಂಗಮವಾಗಿದ್ದು ಬಾಗೇವಾಡಿ ಅಗ್ರಹಾರ ತೊರೆದ ಬಸವಣ್ಣನಿಗೆ ಆಶ್ರಯಕ್ಕೆ ಬಂದಿದ್ದು ಮಾದಲಾಂಬಿಕೆಯ ತಾಯಿಯ ತವರು ಮನೆ ಕೂಡಲ ಸಂಗಮ, ಸಹೋದರ ಮಾವ ಬಲದೇವನು ಸಹಾಯ ಮಾಡಿದ್ದೂ ಗಮನಾರ್ಹ, ಇದನ್ನು ಜಾನಪದ ಕವಿಗಳು ಹೇಳುತ್ತಾರೆ.
5 ಬಹಳ ವರ್ಷಗಳವರೆಗೆ ಹಡಪದ ಅಪ್ಪಣ್ಣ ಕೂಡಲ ಸಂಗಮದಲ್ಲಿ ಇದ್ದ ಕಾರಣ ಅವನನ್ನು ಕಲ್ಯಾಣದ ಶರಣರು ಆರಂಭದಲ್ಲಿ ಸಂಗಮೇಶ್ವರ ಅಪ್ಪಣ್ಣ ಎಂದು ಕರೆದಿರಬಹುದು, ಮುಂದೆ ಅಪ್ಪಣ್ಣ ಕಲ್ಯಾಣಕ್ಕೆ ಬಂದ ಮೇಲೆ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ನೇಮಕಗೊಂಡ ಮೇಲೆ ಆಡಳಿತದ ಆಸ್ಥಾನದ ಕಡತಗಳನ್ನು, ಕಚೇರಿ ಪತ್ರಗಳನ್ನು, ಮಂತ್ರಿಯ ಆದೇಶಗಳನ್ನು ಇಡಲು ಅಡಪ ( ಕಟ್ಟಿಗೆಯ ಡಬ್ಬಿ) ತನ್ನೊಂದಿಗೆ ಇಡುತ್ತಿದ್ದನು.
ಕಲ್ಯಾಣಕ್ರಾಂತಿಯಲ್ಲಿ ಹಡಪದ ಅಪ್ಪಣ್ಣನವರ ಪಾತ್ರ ಬಲು ದೊಡ್ಡದು, ಬಸವಣ್ಣನವರ ಯೋಜನೆ ಚಿಂತನಾಕ್ರಮದಲ್ಲಿ ಪಾಲ್ಗೊಂಡ ವೈಚಾರಿಕ ಶರಣ, ಬಸವಣ್ಣನವರ ಆಸೆಯಂತೆ ಹಡಪದ ಅಪ್ಪಣ್ಣನವರು ನೀಲಾಂಬಿಕೆಯನ್ನು ಕೂಡಲಸಂಗಮಕ್ಕೆ ಕರೆ ತರಲು ಹೇಳಿದಾಗ, ಅವರ ಆದೇಶದಂತೆ ಅಪ್ಪಣ್ಣನವರು ನೀಲಮ್ಮನನ್ನು ಕರೆದುಕೊಂಡು ಬರುವಾಗ ತಂಗಡಗಿಗೆ ಬಂದಾಗ ಬಸವಣ್ಣನವರ ಸಾವಿನ ಸುದ್ಧಿ ಕೇಳಿಬರುತ್ತದೆ, ಆಗ ನೀಲಮ್ಮ ಮತ್ತು ಅಪ್ಪಣ್ಣನವರು ಅಲ್ಲಿಯೇ ಐಕ್ಯವಾಗಿದ್ದು ನದಿಯ ದಡದಲ್ಲಿ ಇಬ್ಬರ ಸಮಾಧಿಯ ಕುರುಹು ಸ್ಮಾರಕಗಳು ಕಂಡು ಬರುತ್ತವೆ.
ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರ ಅಪ್ಪನವರ ವಚನಗಳಲ್ಲಿ ಸಾಮ್ಯತೆ
ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರ ಅಪ್ಪನವರ ವಚನಗಳಲ್ಲಿ ಸಾಮ್ಯತೆಯಿದೆ. ಬಹುತೇಕ ವಚನಗಳಲ್ಲಿ ಲಿಂಗ ತತ್ವ ಷಟಸ್ಥಲ ತಾತ್ವಿಕ ಚಿಂತೆಗಳಲ್ಲಿ ಸಾಮ್ಯತೆ ಎದ್ದು ಕಾಣುತ್ತದೆ. ಹೀಗಾಗಿ ಇವರಿಬ್ಬರೂ ಒಬ್ಬರೇ ಎನ್ನುವ ತೀರ್ಮಾನಕ್ಕೆ ಬರಲಾಗುವುದು.
ಹಡಪದ ಅಪ್ಪಣ್ಣ ಕ್ಷೌರಿಕ ವೃತ್ತಿಯವನೇ?
ಅಡಪ ಜನಬಳಕೆಯಲ್ಲಿ ಹಡಪ ಆಗಿದೆ. ಅಡಪವನ್ನು ಇಟ್ಟುಕೊಂಡವ ಅಡಪದವ ಅಥವಾ ಹಡಪದ ಎಂದು ಬಂದಿದೆ. ಕಲ್ಯಾಣದ ಚಾಲುಕ್ಯರ ಕಳಚೂರ್ಯರ ರಾಜ್ಯದ ವಿಸ್ತಾರ ಎಷ್ಟಿತ್ತಂದರೆ ಛಪ್ಪನ್ನೈವತ್ತಾರು ರಾಜ್ಯಗಳಿದ್ದವು ಎಂದು ಬಸವಣ್ಣನವರ ವಚನವೊಂದರಲ್ಲಿ ಕಾಣಬಹುದು. ಮಹಾರಾಷ್ಟ್ರದ ಮಂಗಳವೆಡೆ, ಉದ್ಗೀರ, ಲಾತೂರ, ಸೋಲಾಪುರ, ತುಳಜಾಪುರ, ಪಂಡರಾಪುರ ಜತ್ತ ಅಕ್ಕಲಕೋಟ ಮುಂತಾದ ಪ್ರದೇಶಗಳ ಭೂ ಪ್ರದೇಶವು ಆಂಧ್ರ ವೆಂಗಿಪಳು ಕರ್ನಾಟಕ ಮುಂತಾದ ಪ್ರದೇಶಗಳನ್ನು ಮುಂತಾದ ಕಡೆಗಳಲ್ಲಿ ಚಾಲುಕ್ಯ ರಾಜ್ಯರ ಆಡಳಿತದ ಶಿಲ್ಪ ಕಲೆ ಶಾಸನಗಳು ಮತ್ತು ಗುಡಿ ಗೋಪುರಗಳ ಶೈಲಿ ಚಾಲುಕ್ಯರದ್ದಾಗಿತ್ತು.
ಬಿಜ್ಜಳನೂ ಕ್ಷೌರಿಕ ಕುಲದ ಶೈವನೆಂದು ಕೆಲ ಸಂಶೋಧಕರು ತಮ್ಮ ಅಭಿಮತ ವ್ಯಕ್ತ ಪಡಿಸಿದ್ದಾರೆ. ಹಡಪದ ಅಪ್ಪಣ್ಣ ಅವನ ಹೆಂಡತಿ ಮುಸುಬಿನಾಳ ಹೂಗಾರ ನಾಗಪ್ಪನ ಮಗಳು ಲಿಂಗಮ್ಮ ಎಂದು ತಿಳಿದು ಬರುತ್ತದೆ. ಬಸವಣ್ಣ ಬಿಜ್ಜಳನ ಪ್ರಧಾನಿ ಅರ್ಥ ಸಚಿವ ದಂಡನಾಯಕನಾಗಿದ್ದನು. ಇವರ ಆಪ್ತ ಕಾರ್ಯದರ್ಶಿಯಾಗಿ ಹಡಪದ ಅಪ್ಪಣ್ಣ ಕಲ್ಯಾಣದಲ್ಲಿ ಕ್ಷೌರಿಕ ವೃತ್ತಿಯನ್ನು ಕೈಗೊಂಡಿದ್ದನು ಎಂದೆನ್ನುವುದು ನನ್ನ ದೃಷ್ಟಿಯಲ್ಲಿ ಸರಿ ಅನಿಸುವುದಿಲ್ಲ. ರಾಜ್ಯಾಡಳಿತ ದಾಖಲೆಗಳು ಕಾಗದ ಪಾತ್ರಗಳು ಬೇರೆ ಬೇರೆ ರಾಜರ ಸಾಮಂತರ ಒಲೆಗಳು ಮುಂತಾದ ಅನೇಕ ಮಹತ್ತರ ದಾಖಲೆಗಳನ್ನು ಸಂಗ್ರಹಿಸಿ ಇಡಲು ಕಟ್ಟಿಗೆಯಿಂದ ಮಾಡಿದೆ ಒಂದು ಡಬ್ಬಿ ಅದಕ್ಕೆ ಈಗಲೂ ಅಡಪ ಎಂದು ಉತ್ತರ ಕರ್ನಾಟಕದಲ್ಲಿ ಕರೆಯುತ್ತಾರೆ. ಮಹಾ ಮನೆಯಲ್ಲಿ ಪ್ರಸಾದವಾದ ಮೇಲೆ ತಾಂಬೂಲ ವಿತರಿಸುವ ರೇಚಣ್ಣನೂ ಅಡಪವನ್ನು ಹೊಂದಿದ್ದನ್ನು . ಅಡಪವನ್ನು ಹೊಂದಿದವ ಅಡಪದವ ಅಥವಾ ಹಡಪದ ಎಂಬ ತಪ್ಪು ಉಚ್ಚಾರಣೆಯಿಂದಾಗಿ ಹಡಪದ ಎಂದು ಹೆಸರು ಬಂತು. ಕ್ಷೌರಿಕ ಕಾರ್ಯವನ್ನು ಮಾಡುವವರು ಈಗಲೂ ಕೂಡ ಹಳ್ಳಿಯಲ್ಲಿ ಅಡಪವನ್ನು ಇಟ್ಟುಕೊಂಡು ಮನೆ ಮನೆಗೆ ಹೋಗಿ ಕ್ಷೌರಿಕ ಸೇವೆ ಮಾಡುತ್ತಾರೆ. ಹಡಪದ ಅಪ್ಪಣ್ಣನವರು ಕ್ಷೌರಿಕ ಕುಲದಲ್ಲಿ ಹುಟ್ಟಿದರೂ ಸಹಿತ ಅವರು ಪ್ರಧಾನಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ಮಾಡಿದರು ಎಂದು ತಿಳಿದು ಬರುತ್ತದೆ.
ಚೆನ್ನಬಸವಣ್ಣನವರ ಮೇಲೆ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮರ ಪ್ರಭಾವ
ಬಸವಣ್ಣನವರು ಬಾಗೇವಾಡಿ ಅಗ್ರಹಾರವನ್ನು ಬಿಟ್ಟು ಕೂಡಲ ಸಂಗಮಕ್ಕೆ ಹೋಗುವಾಗ ಅಕ್ಕನಾಗಮ್ಮ ಮತ್ತು ಅವಳ ಪತಿ ಶಿವಸ್ವಾಮಿಗಳ ಜೊತೆಗೆ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮನವರೂ ಹೋಗಿದ್ದರು. ಹಡಪದ ಅಪ್ಪಣ್ಣ ಕೂಡಲ ಸಂಗಮದಲ್ಲಿ ಮಾದಲಾಂಬಿಕೆಯ ತವರು ಮನೆಯಲ್ಲಿ ಕೃಷಿ ಮಾಡುತ್ತಿರಬಹುದು ಅಥವಾ ಬಸವಣ್ಣನವರು ತಮ್ಮ ಶಿಕ್ಷಣವನ್ನು 12 ವರುಷ ಕೂಡಲ ಸಂಗಮದಲ್ಲಿ ಮಾಡುತ್ತಿರುವಾಗ ಕ್ಷೌರಿಕ ವೃತ್ತಿಯನ್ನು ಮಾಡುತ್ತಿರಬಹುದು. ಬಲದೇವರ ಆಮಂತ್ರಣದ ಮೇರೆಗೆ ಬಸವಣ್ಣ ಅಕ್ಕನಾಗಮ್ಮ ಬಾಲಕ ಚೆನ್ನಬಸವಣ್ಣ ಮತ್ತು ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ಮಂಗಳವೇಡೆಗೆ ಹೋದರು.
ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ಅವರಿಗೆ ಮಕ್ಕಳಿರುವ ದಾಖಲೆಗಳು ಕಂಡು ಬಂದಿಲ್ಲ, ಹೀಗಾಗಿ ಬಾಲಕ ಚೆನ್ನಬಸವಣ್ಣ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮನವರ ಮಮತೆಯ ಮಡಿಲಿನಲ್ಲಿ ಬೆಳೆದಿರಲು ಸಾಧ್ಯವಿದೆ. ಹೀಗಾಗಿ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮರ ವಚನಗಳಲ್ಲಿ ಚೆನ್ನಬಸವಣ್ಣನವರ ಅಂಕಿತದ ಭಾಗ ಸೇರ್ಪಡೆಗೊಂಡಿದೆ. ಹಡಪದ ಅಪ್ಪಣ್ಣನವರ ಬಸವಪ್ರಿಯ ಬಸವಪ್ರಿಯ ಕೂಡಲ ಚೆನ್ನಬಸವಣ್ಣ ಎಂಬ ಅಂಕಿತ ದೊಂದಿಗೆ ಸುಮಾರು 250 ವಚನಗಳನ್ನು ರಚಿಸಿದ್ದಾರೆ. ಅದೇ ರೀತಿ ಸಂಗಮೇಶ್ವರದ ಅಪ್ಪಣ್ಣ ಎನ್ನುವ ಅಂಕಿತದೊಂದಿಗೆ 102 ವಚನಗಳನ್ನು ಸೇರಿಸಿದರೆ ಒಟ್ಟು 352 ವಚನಗಳು ಹಡಪದ ಅಪ್ಪಣ್ಣನವರು ರಚಿಸಿದ್ದಾರೆ ಎಂದು ತೀರ್ಮಾನಕ್ಕೆ ಬರಬಹುದು. ಅವರ ಪತ್ನಿ ಲಿಂಗಮ್ಮ ‘ಅಪ್ಪಣ್ಣಪ್ರಿಯ ಚೆನ್ನಬಸವಣ್ಣ’ ಅಂಕಿತದಲ್ಲಿ 114 ವಚನಗಳನ್ನು ರಚಿಸಿದ್ದಾರೆ.
ಹಡಪದ ಅಪ್ಪಣ್ಣನವರ ಒಂದೇ ಒಂದು ವಚನದಲ್ಲಿ ಹಡಪಿ ಎಂಬ ಪದ ಬಳಕೆಯಾಗಿದೆ ಹೊರತು ಕ್ಷೌರಿಕ ಕಾಯಕದ ಬಗ್ಗೆ ಎಲ್ಲಿಯೂ ಉಲ್ಲೇಖವಾಗಿಲ್ಲ. ಇವರಿಬ್ಬರ ಪ್ರಭಾವ ಚೆನ್ನಬಸವಣ್ಣನವರ ಮೇಲಾದ ಕಾರಣ ಚೆನ್ನಬಸವಣ್ಣನವರ ವಚನಗಳಲ್ಲಿ ಲಿಂಗ ತತ್ವ ಪ್ರಧಾನವಾಗಿ ಕಂಡು ಬರುತ್ತದೆ. ಚೆನ್ನಬಸವಣ್ಣನವರು ಷಟಸ್ಥಲ ಸಿದ್ದಾಂತಗಳ ಮೇಲೆಪ್ರಭುತ್ವವನ್ನು ಸಾಧಿಸಲು ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮರ ಪ್ರಭಾವವಿರ ಬಹುದು.
ಬಸವಣ್ಣನವರ ಪರಮಾಪ್ತ ಹಡಪದ ಅಪ್ಪಣ್ಣ
ಬಸವಣ್ಣನವರಿಗೆ ತಮ್ಮ ಬಾಲ್ಯದಿಂದಲೂ ಹಡಪದ ಅಪ್ಪಣ್ಣನವರ ಒಡನಾಟವಿತ್ತು. ಹಡಪದ ಅಪ್ಪಣ್ಣ ಬಸವಣ್ಣನವರಿಗಿಂತ ಹತ್ತು ವರುಷ ದೊಡ್ಡವರಿರಬಹುದು. ಬಸವಣ್ಣ ಕೂಡಲ ಸಂಗಮಕ್ಕೆ ಹೋಗುವಾಗ ಅವರ ನೆರಳಾಗಿ ಬಸವಣ್ಣನವರಿಗೆ ರಕ್ಷಣೆ ನೀಡಿದವರು ಹಡಪದ ಅಪ್ಪಣ್ಣನವರು. ಕೂಡಲಸಂಗಮದಲ್ಲಿ ಬಸವಣ್ಣನವರ ಶಿಕ್ಷಣ ಮುಗಿಸಿ ಸೋದರಮಾವ ಕಲ್ಯಾಣದ ಮಂತ್ರಿ ಬಲದೇವನವರ ಆಶಯದಂತೆ ಬಸವಣ್ಣನವರ ಜೊತೆಗೆ ಹಡಪದ ಅಪ್ಪಣ್ಣನವರು ಅಂಗರಕ್ಷಕರಾಗಿದ್ದರು. ಬಸವಣ್ಣನವರು ಕಲ್ಯಾಣವನ್ನು ತೊರೆದ ಮೇಲೆ ಅವರ ಜೊತೆಗೆ ಹಡಪದ ಅಪ್ಪಣ್ಣನವರು ಕೂಡಲಸಂಗಮಕ್ಕೆ ಹೋಗುವರು. ಬಸವಣ್ಣನವರು ತಮ್ಮ ವಿಚಾರ ಪತ್ನಿ ನೀಲಮ್ಮ ತಾಯಿಯನ್ನು ಕೂಡಲ ಸಂಗಮಕ್ಕೆ ಕರೆ ತರಲು ಹೇಳಿದಾಗ ಕಲ್ಯಾಣದಲ್ಲಿ ಬಸವಣ್ಣನಿಲ್ಲದ ವ್ಯಾಕುಲತೆ ಆತಂಕ ಭಯ ಭೀತಿ ಸ್ಥಿತಿಯನ್ನು ನಿವಾರಿಸಲು ನೀಲಮ್ಮ ಶರಣರಲ್ಲಿ ಧೈರ್ಯ ಸ್ಥೈರ್ಯ ತುಂಬುವ ಕಾರ್ಯದಲ್ಲಿ ನಿರತಳಾಗಿದ್ದಳು. ಬಸವಣ್ಣನವರ ಆದೇಶದಂತೆ ನೀಲಮ್ಮ ಹಡಪದ ಅಪ್ಪಣ್ಣನವರ ಜೊತೆಗೆ ಕೂಡಲ ಸಂಗಮಕ್ಕೆ ಬರುವ ಹಾದಿಯಲ್ಲಿ ತಂಗಡಗಿ ಎಂಬಲ್ಲಿ ಬಸವಣ್ಣನವರ ಬಯಲಾದ ಸುದ್ದಿ ಕೇಳಿ ಬಲು ನೊಂದು ತಂಗಡಗಿಯಲ್ಲಿಯೇ ಕೆಲಕಾಲ ತಂಗಿ ತನ್ನ ದುಃಖದ ನೋವಿನ ವಚನಗಳನ್ನು ರಚಿಸಿ ಅಲ್ಲಿಯೇ ಐಕ್ಯಳಾಗುತ್ತಾಳೆ. (ತಂಗಿ ಅಡಗಿದ ಊರು ತಂಗಡಗಿ )
ಹಡಪದ ಅಪ್ಪಣನವರೂ ಕೂಡ ತಂಗಡಗಿಯಲ್ಲಿ ಐಕ್ಯರಾಗುತ್ತಾರೆ.
ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಹಡಪದ ಅಪ್ಪಣ್ಣನವರ ಮತ್ತು ಲಿಂಗಮ್ಮನವರ ಕೊಡುಗೆ ಅಪಾರವಾಗಿದೆ .
ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರ ಅಪ್ಪಣ್ಣ ಇಬ್ಬರೂ ಒಬ್ಬರೇ ಎನ್ನಲು ಅನೇಕ ಪುಷ್ಟಿಗಳು ದೊರೆಯುತ್ತವೆ.

ಹಡಪದ ಅಪ್ಪಣ್ಣ ವಿವರ
ಕಾಲ – ಹನ್ನೆರಡನೆಯ ಶತಮಾನ ಬಸವ ಸಮಕಾಲೀನ ಶರಣ
ಒಟ್ಟು ವಚನಗಳು – 102
ಅಂಕಿತ: ಬಸವಪ್ರಿಯ ಕೂಡಲ ಚೆನ್ನಸಂಗಮದೇವ
ಊರು- ಕೂಡಲ ಸಂಗಮ, ಮುಸುಬಿನಾಳ

ಆಕರ
1.ಬಸವ ದರ್ಶನ ಪ್ರೊ.ದೇ.ಜ.ಗೌ ಜಗತ್ ಗುರು ಶ್ರೀ ಶಿವರಾತ್ರಿಶ್ವರ ಗ್ರಂಥಮಾಲೆ,ಮೈಸೂರು. 2004.
2.ಶರಣತತ್ವ ಚಿಂತನ ಸo. ಡಾ. ಎ. ಎಲ್. ಶಿವರುದ್ರಪ್ಪ
3.ವಚನ ಸಾಹಿತ್ಯ ಸಂಗ್ರಹ ಸo. ಶಿ .ಭೂಸನೂರಮಠ
4 ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ – ಡಾ ಶಾರದಾಮಣಿ ಹುನಶಾಳ
5 ಕನ್ನಡ ಜಾನಪದ ಗೀತೆಗಳು -ಡಾ ಬಿ ಎಸ ಗದ್ದಗಿಮಠ
6 ಕಣಜ
7 ವಚನ ಸಂಪುಟ
8 ವಚನ ಸಂಚಯ


