ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ವಿಜಯದಶಮಿ ಉತ್ಸವದಲ್ಲಿ ಪ್ರಾಂತ ಸಂಪರ್ಕ ಪ್ರಮುಖ ಸುಧೀರಸಿಂಗ್ ಘೋರ್ಪಡೆ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರೋಲೆಕ್ಸ, ಹುಬ್ಲಾಟ್ ಮೊದಲಾದ ವಿದೇಶಿಗರ ಬ್ರ್ಯಾಂಡ್ ಗಳನ್ನೇ ಪ್ರತಿಷ್ಠೆಯಾಗಿಸುವ ಮನೋಭಾವದಿಂದ ಹೊರಬಂದು ಸ್ವದೇಶಿ ಭಾವ ಜಾಗೃತವಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಂಪರ್ಕ ಪ್ರಮುಖ ಸುಧೀರಸಿಂಗ್ ಘೋರ್ಪಡೆ ಹೇಳಿದರು.
ವಿಜಯಪುರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ವತಿಯಿಂದ ನಡೆದ ವಿಜಯದಶಮಿ ಉತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಘ ನೂರು ವಸಂತಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಪಂಚ ಪರಿವರ್ತನೆ ಸೂತ್ರದೊಂದಿಗೆ ಬದಲಾವಣೆಗೆ ಸಂಕಲ್ಪ ಮಾಡಿದೆ ಎಂದರು.
ಸ್ವದೇಶಿ ಬಟ್ಟೆ ಒಂದೇ ದಿನದ ಆಚರಣೆಯಾಗಬಾರದು, ಗೋ ಆಧಾರಿತ ಕೃಷಿ ಕೇಂದ್ರಿತ ಸ್ವದೇಶಿ ಚಿಂತನೆ, ವಿದೇಶಿ ವಸ್ತುಗಳ ವ್ಯಾಮೋಹದಿಂದ ದೂರವಾಗಬೇಕಿದೆ ಎಂದರು.
ಪರಿಸರದಲ್ಲಿ ಪರಿವರ್ತನೆ ಹಾಗೂ ಸಂರಕ್ಷಣೆ, ಸಾತ್ವಿಕ ಆಹಾರ ಪದ್ದತಿ, ಕುಟುಂಬ ವ್ಯವಸ್ಥೆ ಹಾಗೂ ಶಿಕ್ಷಣ ವ್ಯವಸ್ಥೆಗೆ ಸನಾತನ ಸಂಸ್ಕೃತಿಯ ಸ್ಪರ್ಶ ಹೀಗೆ ಅನೇಕ ಪರಿವರ್ತನೆಯ ಸಂಕಲ್ಪವನ್ನು ಸಂಘ ಮಾಡಿದೆ ಎಂದರು.
ನಿವೃತ್ತ ಪೊಲೀಸ್ ಉಪ ಅಧೀಕ್ಷಕ ಶಂಕರ ಜೀರಗಾಳ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಆರ್.ಎಸ್. ಎಸ್. ವಿಜಯಪುರ ವಿಭಾಗ ಸಂಘ ಚಾಲಕ ಚಿದಂಬರ ಕರಮರಕರ ಉಪಸ್ಥಿತರಿದ್ದರು.
ಸಮಾವೇಶಕ್ಕೂ ಮುನ್ನ ಗಣವೇಷಧಾರಿಗಳಿಂದ ಆತ್ಮ ರಕ್ಷಣಾ ಕಲೆಯ ಪ್ರದರ್ಶನ, ವಿವಿಧ ಯೋಗಾಸನಗಳ ಪ್ರದರ್ಶನ ನಡೆಯಿತು. ಶಿಸ್ತು ಹಾಗೂ ಏಕತೆ ಪ್ರತಿಬಿಂಬಿಸುವ ಸಮತಾ ಪ್ರಯೋಗವನ್ನು ಗಣವೇಷಧಾರಿಗಳು ಪ್ರದರ್ಶಿಸಿದರು.
ವಿದೇಶಿ ಮತಾಂಧ ಶಕ್ತಿಗಳ ಬಲ
ಕೆಲವೊಂದು ಸಮಾಜ ಘಾತುಕ ಶಕ್ತಿಗಳಿಗೆ ವಿದೇಶಿ ಮತಾಂಧ ಶಕ್ತಿಗಳು ಬಲ ತುಂಬುತ್ತಿವೆ, ಗಣಪತಿಯ ಮೆರವಣಿಗೆ ಅಲ್ಲಿ ಹಾದು ಹೋಗಬಾರದು ಎಂದರೆ ಇದೇನು ಪಾಕಿಸ್ತಾನವೇ? ಭಾರತ ಮಾತಾ ಕೀ ಜೈ ಎಂದು ಘೋಷಣೆ ಕೂಗಿದವರನ್ನು ಬಂಧಿಸಿದ ದೊಡ್ಡ ದುರ್ದೈವ ನಡೆದು ಹೋಯಿತು. ಲವ್ ಜಿಹಾದ್ ದೊಡ್ಡ ಸವಾಲು, ವಿದೇಶಿ ಶಕ್ತಿಗಳು ಇದಕ್ಕೆ ಕುಮ್ಮಕ್ಕು ನೀಡುತ್ತಿವೆ. ರಾಷ್ಟ್ರೀಯತೆಯ ಚಿಂತನೆ ನಮ್ಮ ನರ ನಾಡಿಗಳಲ್ಲಿ ಪಸರಿಸಬೇಕಿದೆ ಎಂದರು.
ಮುಸಲ್ಮಾನರು ಹಿಂದೂಗಳೇ
ಹಿಂದೂ ಎಂದರೆ ಜಾತಿ ಸೂಚಕವಲ್ಲ, ಇಲ್ಲಿನ ಗಾಳಿ, ಬೆಳಕು ಸ್ವೀಕರಿಸುತ್ತಿರುವ ಪ್ರತಿಯೊಬ್ಬರು ಹಿಂದೂಗಳು, ಈ ಚಿಂತನೆ ಸಮಾಜದಲ್ಲಿ ಬೇರೂರಬೇಕಿದೆ. ಮುಸಲ್ಮಾನರು ಸಹ ಹಿಂದೂಗಳೇ, ಘೋರಿ, ಆದಿಲ್ ಷಾಹಿ ಮೊದಲಾದವರಿಂದ ಹೆದರಿಯೋ, ಒತ್ತಾಯದಿಂದಲೋ ಅವರು ಮುಸಲ್ಮಾನರಾಗಿದ್ದಾರೆ ಎಂದರು.
ವಿದೇಶದಲ್ಲೂ ಸಂಘ ಕ್ರೀಯಾಶೀಲ
ಡಾ.ಕೇಶವ ಹೆಗಡೆವಾರ ಅವರು ಅಂದು ಮನಸ್ಸು ಮಾಡಿದರೆ ವೈದ್ಯರಾಗಿ ದೊಡ್ಡ ಪ್ರಮಾಣದಲ್ಲಿ ದುಡ್ಡು ಗಳಿಸಬಹುದಿತ್ತು,
ಆದರೆ ಮುಂದೆ ಯಾವತ್ತೂ ಭಾರತ ಪರಕೀಯರ ಆಳ್ವಿಕೆಗೆ ಒಳಪಡದೇ ಸ್ವಾಭಿಮಾನಿಯಾಗಬೇಕು, ಹಿಂದೂ ಸಮಾಜ ಜಾಗೃತವಾದರೆ ಮಾತ್ರ ಇದು ಸಾಧ್ಯ ಎಂದು ಅರಿತು ಮಹಾರಾಣಾ ಪ್ರತಾಪ್ ಸಿಂಹ್ ಅವರ ಜೀವನದಿಂದ ಸ್ಪೂರ್ತಿ ಪಡೆದು ಸಂಘವನ್ನು ರೂಪಿಸಿದರು. ಆಗಲೂ ಟೀಕೆಗೊಳಗಾದರೂ ಸಹ ಡಾ.ಹೆಗಡೆ ಅವರು ಕುಗ್ಗಲಿಲ್ಲ, ಪರಿಣಾಮವಾಗಿ ಕೋಟ್ಯಂತರ ಸ್ವಯಂಸೇವಕರು ಇಂದು ಸಂಘದಲ್ಲಿ ತೊಡಗಿ ಸಂಸ್ಕಾರ ಪಡೆಯುವಂತಾಗಿದೆ, ೫೩ ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸಂಘ ಕ್ರೀಯಾಶೀಲವಾಗಿದೆ ಎಂದರು.

