ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಡೋಣಿ ತೀರದ ಗ್ರಾಮಾಗಳಾದ ಯಾಳವಾರ, ಸಾತಿಹಾಳ, ಕೊಂಡಗೂಳಿ ಗ್ರಾಮಗಳಿಗೆ ತಹಶೀಲ್ದಾರ ಪ್ರಕಾಶ ಸಿಂದಗಿ ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕಿನ ಡೋಣಿ ತೀರದ ಗ್ರಾಮಗಳು ಡೋಣಿ ನದಿಯ ಪ್ರವಾಹಕ್ಕೆ ಒಳಗಾಗಿದ್ದು, ಗ್ರಾಮಗಳ ವ್ಯಾಪ್ತಿಯ ಜಮೀನುಗಳು ನೀರಿನಿಂದ ಆವೃತ್ತವಾಗಿವೆ. ಇದರಿಂದ ಜಮೀನುಗಳಲ್ಲಿನ ತೊಗರಿ ಸೇರಿದಂತೆ ಬಹುತೇಕ ಬೆಳೆಗಳು ಹಾಳಾಗಿವೆ ಎಂದು ಕೆಲವು ದಿನಗಳ ಹಿಂದೆ ಕೊಂಡಗೂಳಿ ಗ್ರಾಮಸ್ಥರು ತಹಶೀಲ್ದಾರರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ತಹಶೀಲ್ದಾರ ಸಾತಿಹಾಳ ಗ್ರಾಮದ ಸೇತುವೆ ಹಾಗೂ ಡೋಣಿ ತೀರದ ಎಲ್ಲ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಬೆಳೆಗಳ ವಾಸ್ತವಿಕ ಸ್ಥಿತಿಗತಿಗಳನ್ನು ವೀಕ್ಷಿಸಿದರು. ನಂತರ ಗ್ರಾಮಸ್ಥರೊಂದಿಗೆ ಮಾತನಾಡಿ, ನೀರು ನಿಂತು ಹಾಳಾದ ಬೆಳೆಗಳ ಕುರಿತು ಸರ್ಕಾರಕ್ಕೆ ಸಮಗ್ರ ಮಾಹಿತಿ ನೀಡಲಾಗುವುದು ಎಂದರು.
ಕಂದಾಯ ನಿರೀಕ್ಷಕ ಸಂಗಮೇಶ ಗ್ವಾಳೇದ, ಗ್ರಾಮಾಡಳಿತ ಅಧಿಕಾರಿಗಳಾದ ಅನೀಲಕುಮಾರ ರಾಠೋಡ, ಪ್ರಕಾಶ ಬನ್ನಟ್ಟಿ, ಸಿದ್ದು ನಾಯ್ಕೋಡಿ, ಕೃಷಿ ಇಲಾಖೆಯ ಪಾಟೀಲ ಹಾಗೂ ಗ್ರಾಮಸ್ಥರು ಇದ್ದರು.

