ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಾರ್ವಜನಿಕರ, ಸಂಘ-ಸಂಸ್ಥೆಗಳ ಆಸ್ತಿಗಳನ್ನು ಹಾಗೂ ಮಹಾನಗರ ಪಾಲಿಕೆ, ನಗರಾಭಿವೃದ್ಧಿ, ಕಂದಾಯ ಇಲಾಖೆಗೆ ಒಳಪಟ್ಟ ಸರ್ಕಾರಿ ಆಸ್ತಿಯನ್ನು ವಕ್ಫ್ ಆಸ್ತಿಯನ್ನಾಗಿ ಮಾಡಲು ಹೊರಟಿರುವ ಕ್ರಮದ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ವಿನಂತಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು, ಇದೇ ಸೋಮವಾರ (ಅ.೮) ದಂದು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ವಿಜಯಪುರ ಜಿಲ್ಲೆಯ ಮುತ್ತಾವಲ್ಲಿಗಳ ಸಮ್ಮೇಳನ ಮತ್ತು ವಕ್ಫ್ ಅದಾಲತ್ ನಡೆಸಿ ಹಾಗೂ ಮಂಗಳವಾರ (ಅ.೯ ರಂದು) ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ, ವಿಜಯಪುರ ಜಿಲ್ಲೆಯಾದ್ಯಂತ ಅತೀ ಕಡಿಮೆ ವಿಸ್ತೀರ್ಣದಲ್ಲಿ ಸಣ್ಣದಾದ ಸ್ಮಾರಕ, ಹಳೆಯ ಕಾಲದ ಬಿಳುವ ಹಂತದಲ್ಲಿರುವ ಸಣ್ಣ ಕಟ್ಟಡಗಳಿರುವ ಸರ್ವೆ ನಂಬರ್ಗೆ ಒಳಪಟ್ಟ ಸಂಪೂರ್ಣ ಆಸ್ತಿಯನ್ನು ವಕ್ಫ್ ಆಸ್ತಿಯನ್ನಾಗಿ ದಾಖಲು ಮಾಡಲಾಗುತ್ತಿದೆ ಎಂಬ ವಿಷಯ ತಿಳಿದು ಬಂದಿದೆ.
ವಿಜಯಪುರ ತಾಲ್ಲೂಕು ವ್ಯಾಪ್ತಿಯಲ್ಲೇ ಸುಮಾರು ೨,೪೯೫ ಎಕರೆ ವಿಸ್ತೀರ್ಣದ ಸುಮಾರು ೨೦೩ ಆಸ್ತಿಗಳನ್ನು ಹಾಗೂ ಭೂಪರಿವರ್ತನೆಗೊಂಡ ಸುಮಾರು ೧೩೯ ನಿವೇಶನಗಳನ್ನು ವಕ್ಫ್ ಆಸ್ತಿಯನ್ನಾಗಿ ಮಾಡುವ ಹುನ್ನಾರ ನಡೆದಿದೆ. ಇಡೀ ಜಿಲ್ಲೆಯಾದ್ಯಂತ ಇದೇ ರೀತಿ ಸಾವಿರಾರು ಎಕರೆ ವಿಸ್ತೀರ್ಣದ ಆಸ್ತಿಗಳು ಮತ್ತು ನಿವೇಶನಗಳನ್ನು ವಕ್ಫ್ ಆಸ್ತಿಯನ್ನಾಗಿ ಮಾಡಲಿದ್ದು, ನಂತರ ಇದನ್ನು ನ್ಯಾಯಾಲಯದಲ್ಲಿಯೂ ಸಹ ಪ್ರಶ್ನಿಸಲು ಅವಕಾಶವಿಲ್ಲ. ಖಾಸಗಿ ವ್ಯಕ್ತಿಗಳು, ಸಂಘ-ಸಂಸ್ಥೆಗಳಿಗೆ ಒಳಪಟ್ಟ ಆಸ್ತಿಗಳು ಕೂಡ ಪಟ್ಟಿಯಲ್ಲಿವೆ.
ಕಾರಣ ಸಾರ್ವಜನಿಕರು ತಮ್ಮ ತಮ್ಮ ಆಸ್ತಿಗಳನ್ನು ಉಳಿಸಿಕೊಳ್ಳಲು ಹಾಗೂ ಸರ್ಕಾರಿ ಆಸ್ತಿಗಳು ವಕ್ಪ್ ಗೆ ಪಾಲಾಗದಂತೆ ತಡೆಯಲು ಸಂಬಂಧಿತ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ, ಉಪವಿಭಾಗಾಧಿಕಾರಿಗಳಿಗೆ, ತಹಶೀಲ್ದಾರರಿಗೆ, ಡಿಡಿಎಲ್‌ಆರ್, ಎಡಿಎಲ್‌ಆರ್ ಅವರಿಗೆ ಆಕ್ಷೇಪಣೆ ಸಲ್ಲಿಸುವ ಮೂಲಕ ಸಚಿವರ ಗಮನಸೆಳೆದು, ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ನಮೂದು ಮಾಡದೆ, ಸಣ್ಣ ಸ್ಮಾರಕಗಳು, ಹಳೆಯ ಕಾಲದ ಬಿಳುವ ಹಂತದಲ್ಲಿರುವ ಸಣ್ಣ ಕಟ್ಟಡಗಳಿರುವ ನಿರ್ದಿಷ್ಟ ಸ್ಥಳವನ್ನು ಬಿಟ್ಟು ಉಳಿದ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳುವಂತೆ ಶಾಸಕರು ವಿನಂತಿಸಿದ್ದಾರೆ.

