೨ದಿನ ಕಾಲ ಜರುಗಿದ ಮೆಗಾಮಾರುಕಟ್ಟೆಯ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದಲ್ಲಿ ಪುರಸಭೆಯಿಂದ ನಿರ್ಮಾಣಗೊಂಡಿರುವ ಮೆಗಾಮಾರುಕಟ್ಟೆಯಲ್ಲಿರುವ ವಾಣಿಜ್ಯ ಮಳಿಗೆಗಳ ಮುಂದುವರಿದ ಬಹಿರಂಗ ಹರಾಜು ಪ್ರಕ್ರಿಯೆ ಮಂಗಳವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಸಕ್ಕರೆ, ಕೃಷಿ ಮಾರುಕಟ್ಟೆ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ ಅವರ ಸಮ್ಮುಖದಲ್ಲಿ ಜರುಗಿತು. ಎರಡು ದಿನಗಳ ಕಾಲ ಜರುಗಿದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ೧೭ ವಾಣಿಜ್ಯ ಮಳಿಗೆಗಳು ಬಹಿರಂಗ ಹರಾಜುಗೊಂಡು ಒಟ್ಟು ರೂ. ೨೭೩.೭೦ ಲಕ್ಷ ಠೇವಣಿ ಮೊತ್ತ ಆಯಿತು.
ಮೆಗಾಮಾರುಕಟ್ಟೆಯಲ್ಲಿ ಒಟ್ಟು ೧೩೪ ವಾಣಿಜ್ಯ ಮಳಿಗೆಗಳಿದ್ದು. ಇದರಲ್ಲಿ ೩೫ ವಾಣಿಜ್ಯ ಮಳಿಗೆಗಳು ಹಿಂದೆ ಎರಡು ಸಲ ಜರುಗಿದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಹರಾಜು ಆಗಿವೆ. ಉಳಿದ ೯೯ ವಾಣಿಜ್ಯ ಮಳಿಗೆಗಳ ಮುಂದುವರಿದ ಬಹಿರಂಗ ಹರಾಜು ಪ್ರಕ್ರಿಯೆ ಮಂಗಳವಾರ, ಗುರುವಾರ ಎರಡು ದಿನಗಳ ಕಾಲ ಪುರಸಭೆ ಜರುಗಿಸಿತು.
ಮಂಗಳವಾರ ಜರುಗಿದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ೭ ವಾಣಿಜ್ಯ ಮಳಿಗೆಗಳು ಬಹಿರಂಗ ಹರಾಜು ಆಗುವ ಮೂಲಕ ಒಟ್ಟು ರೂ. ೯೮ ಲಕ್ಷ ಠೇವಣಿ ಮೊತ್ತ ಆಗಿತ್ತು. ಮಂಗಳವಾರ ಜರುಗಿದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ೧೫ ಜನರು ಭಾಗವಹಿಸಿದ್ದರು. ಮಂಗಳವಾರ ಜರುಗಿದ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮೊತ್ತಕ್ಕೆ ವಾಣಿಜ್ಯ ಮಳಿಗೆ ಸಂಖ್ಯೆ ಜಿ-೫ ಅನ್ನು ಸುನೀಲಕುಮಾರ ಆದಿಗೊಂಡ ಎಂಬುವವರು ರೂ. ೩೦ ಲಕ್ಷ ಠೇವಣಿ ಮೊತ್ತಕ್ಕೆ ಹರಾಜು ಮೂಲಕ ಪಡೆದುಕೊಂಡರು.
ಉಳಿದ ೯೨ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಗುರುವಾರ ಮುಂದುವರಿದು ಒಟ್ಟು ೧೦ ವಾಣಿಜ್ಯ ಮಳಿಗೆಗಳು ಹರಾಜು ಆಗುವ ಮೂಲಕ ಒಟ್ಟು ರೂ. ೧೭೫.೭೦ ಲಕ್ಷ ಠೇವಣಿ ಮೊತ್ತ ಆಯಿತು. ವಾಣಿಜ್ಯ ಮಳಿಗೆ ಸಂಖ್ಯೆ ಜಿ-೫೪ ರಿಂದ ಜಿ.೬೧ ರವರೆಗೆ ಒಟ್ಟು ೮ ವಾಣಿಜ್ಯ ಮಳಿಗೆಗಳನ್ನು ಜಿತೇಂದ್ರ ಅಗರವಾಲ ಅವರು ೧೩೬.೫೦ ಲಕ್ಷ ರೂ.ಠೇವಣಿ ಮೊತ್ತಕ್ಕೆ ಹಿಡಿದರೆ, ಜಿ.೫೧ ಅನ್ನು ಗಾಯತ್ರಿ ಬಡಿಗೇರ ಅವರು ರೂ. ೧೩ ಲಕ್ಷ ಠೇವಣಿ ಮೊತ್ತಕ್ಕೆ, ಜಿ-೬ ಅನ್ನು ವೀರಭದ್ರೇಶ್ವರ ಇಲೆಕ್ಟ್ರಾನಿಕ್ ಅಂಗಡಿಯ ಮಾಲೀಕರು ರೂ. ೨೬.೨೦ ಲಕ್ಷ ಠೇವಣಿ ಮೊತ್ತಕ್ಕೆ ವಾಣಿಜ್ಯ ಮಳಿಗೆಯನ್ನು ಪಡೆದುಕೊಂಡರು. ಇಂದು ೨೭ ಜನರು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಮೆಗಾಮಾರುಕಟ್ಟೆಯಲ್ಲಿ ಉಳಿದ ೮೨ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಯಿತು.
ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ.ಸೌದಾಗರ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಜಿಲ್ಲಾ ಪಂಚಾಯಿತಿಯ ಎಇಇ ವಿಲಾಸ ರಾಠೋಡ, ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿ,ಪುರಸಭೆ ಕಂದಾಯ ನಿರೀಕ್ಷಕಿ ಗೀತಾಂಜಲಿ ದಾಸರ, ಪುರಸಭೆ ಆರೋಗ್ಯ ನಿರೀಕ್ಷಕರಾದ ವಿಜಯ ವಂದಾಲ, ಬಸವರಾಜ ಬೋಳಶೆಟ್ಟಿ, ಪುರಸಭೆ ಅಭಿಯಂತರರಾದ ಮಹಾದೇವ ಜಂಬಗಿ, ಸಂತೋಷ ಗಿಡ್ಡಸಣ್ಣನವರ, ಪುರಸಭೆ ಸದಸ್ಯರಾದ ಜಗದೇವಿ ಗುಂಡಳ್ಳಿ, ನಜೀರ ಗಣಿ, ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಅನಿಲ ಅಗರವಾಲ, ಸಂಗನಗೌಡ ಚಿಕ್ಕೊಂಡ,ಶೇಖರ ಗೊಳಸಂಗಿ, ಕಮಲಸಾಬ ಕೊರಬು, ರಮೇಶ ಯಳಮೇಲಿ, ಮಲ್ಲೇಶಿ ಕಡಕೋಳ, ಶಂಕರಗೌಡ ಚಿಕ್ಕೊಂಡ, ಬಸಣ್ಣ ದೇಸಾಯಿ, ಸಿದ್ದಣ್ಣ ಮೋದಿ, ಬಸವರಾಜ ಚೌರಿ, ಇತರರು ಇದ್ದರು.

