ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಗಾಂಧೀಜಿ ಅವರ ಪಾನಮುಕ್ತ ವಿಚಾರಗಳು ಜಗತ್ತಿಗೆ ಮಾದರಿಯಾಗಿವೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿಬಿರದಲ್ಲಿ ಪಾನಮುಕ್ತರಾದ 48 ಜನ ಶಿಬಿರಾರ್ಥಿಗಳು ಇಂದು ಬದಲಾವಣೆ ಆಗುವುದರ ಮುಖಾಂತರ ಗಾಂಧೀಜಿಯವರ ಕನಸನ್ನು ನನಸು ಮಾಡಿದ್ದಾರೆ ಎಂದು ಜೆಡಿಎಸ್ ಧುರೀಣ, ಜಿಲ್ಲಾ ಜಲ ಜಾಗೃತಿ ವೇದಿಕೆ ಅಧ್ಯಕ್ಷ ಅಪ್ಪುಗೌಡ ಪಾಟೀಲ ಮನಗೂಳಿ ಹೇಳಿದರು.
ತಾಲೂಕಿನ ಯರನಾಳ ಗ್ರಾಮದ ವಿರಕ್ತಮಠದಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್, ವಿಜಯಪುರದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಾಂಧಿ ಸ್ಮೃತಿ ಹಾಗೂ ಪಾನಮುಕ್ತರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿಯವರ ಆಶಯದಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಮದ್ಯವರ್ಜನ ಶಿಬಿರ ಆಯೋಜನೆಗೊಳ್ಳುವ ಮೂಲಕ ಹಲವಾರು ಕುಟುಂಬಗಳ ನೆಮ್ಮದಿಗೆ ಕಾರಣವಾಗಿದೆ.
ಕದಳಿ ವೇದಿಕೆ ಸಂಚಾಲಕಿ ಸಾವಿತ್ರಿ ಕಲ್ಯಾಣಶೆಟ್ಟಿ ಮಾತನಾಡಿ, ಗಾಂಧೀಜಿಯವರ ವಿಚಾರಗಳು ಸಾರ್ವಕಾಲಿಕ ಮೌಲ್ಯಗಳಾಗಿವೆ. ಮಹಾತ್ಮರ ಜೀವನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸಾಹಿತಿ ಸಿದ್ಧರಾಮ ಬಿರಾದಾರ ಮಾತನಾಡಿ, ಗಾಂಧಿ ಎಂದರೆ ಸತ್ಯ, ಅಹಿಂಸೆ, ಸಹೋದರತ್ವ ಭಾವ ಬರುತ್ತದೆ. ಅವರು ಜಗತ್ತು ಕಂಡ ಶಾಂತಿದೂತರು ಎಂದು ಹೇಳಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತವ್ವ ಕೋಲಕಾರ, ಮದ್ಯವರ್ಜನ ಶಿಬಿರದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಬಸವರಾಜ ಬ್ಯಾಕೋಡ, ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ಉಪಾಧ್ಯಕ್ಷ ಗುಂಡಪ್ಪಗೌಡ ಬಿರಾದಾರ, ಪರಸುರಾಮ ಜಮಖಂಡಿ , ಸಿದ್ದಪ್ಪ ಬಾಲಗೊಂಡ, ದುಂಡಪ್ಪ ಬಳೂತಿ ಇದ್ದರು.
ಧರ್ಮಸ್ಥಳದ ಯೋಜನಾಧಿಕಾರಿ ಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬಿಕಾ ಪಾಟೀಲ ಸ್ವಾಗತಿಸಿದರು. ಶ್ರೀದೇವಿ ಪಾಟೀಲ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ವಿರಕ್ತಮಠದಿಂದ ಮರಗಮ್ಮದೇವಿ ದೇವಸ್ಥಾನದವರಗೂ ಜಾಥಾ ಜರುಗಿತು.

