ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ನವರಾತ್ರಿ ಮಹೋತ್ಸವದ ಅಂಗವಾಗಿ ನಾಡದೇವಿಯನ್ನು ನಾಡಿನ ವಿವಿಧ ಕಲಾ ತಂಡಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆಯ ಮೂಲಕ ಶ್ರದ್ಧಾ, ಭಕ್ತಿಯಿಂದ ಪ್ರತಿಷ್ಠಾಪಿಸಲಾಯಿತು.
ಪಟ್ಟಣದಲ್ಲಿ ಗುರುವಾರ ಬೇವಿನಕಟ್ಟಿ ಗೌಡರಓಣಿಯ ನಾಡದೇವಿ ಉತ್ಸವ ಕಮೀಟಿಯಿಂದ ಪ್ರತಿಷ್ಠಾಪಿಸುತ್ತಿರುವ ನಾಡದೇವಿಯ ಉತ್ಸವ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಬೆಳಗ್ಗೆ ಇಂಡಿ ರಸ್ತೆಯ ರೇಣುಕಾಚಾರ್ಯ ದೇವಸ್ಥಾನದಿಂದ ಡೊಳ್ಳು ವಾದ್ಯಗಳು ಹಾಗೂ ಅಬ್ಬರದ ಡಿಜೆ ಸಂಗೀತದೊಂದಿಗೆ ಪ್ರಾರಂಭವಾದ ಭವ್ಯ ಮೆರವಣಿಗೆ ಕೆಇಬಿ, ಅಂಬೇಡ್ಕರ್ ವೃತ್ತ, ಮೊಹರೆ ವೃತ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಬಜಾರ, ಪತ್ತಾರಕಟ್ಟೆ ಮಾರ್ಗವಾಗಿ ಹಳೆಯ ಶಾಲೆಯ ಹತ್ತಿರದ ಪ್ರತಿಷ್ಠಾಪನಾ ಸ್ಥಳ ತಲುಪಿತು.
ಮೆರವಣಿಗೆಯಲ್ಲಿ ಗುರುವೀರ ಮಹಿಳಾ ವೀರಗಾಸೆ ಕಲಾತಂಡ, ಪುನಾ ಹಾಗೂ ನಾಸಿಕದ ಡೋಲ ತಂಡಗಳು, ಕೇರಳದ ಚಂಡಿಕಾ ವಾದ್ಯ, ದೇವಿ ಮಹಾತ್ಮೆ, ಗೊಂಬೆಮೇಳ, ವೀರಗಾಸೆ, ವೀರಭದ್ರಕುಣಿತ, ಧ್ವಜಾಕುಣಿತ, ಕೀಲುಗುದುರೆ ಮಹಿಳಾ ವೀರಗಾಸೆ, ಸೌದತ್ತಿ ಯಲ್ಲಮ್ಮನ ಜೋಗತಿಯರ ತಂಡಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಾಂಸ್ಕೃತಿಕ ಕಲಾ ತಂಡಗಳು ನೋಡುಗರ ಗಮನ ಸೆಳೆದವು.
ನಾಡದೇವಿ ಉತ್ಸವ ಕಮೀಟಿಯ ಅಧ್ಯಕ್ಷ ಸುರೇಶಗೌಡ ಪಾಟೀಲ, ಸೋಮಶೇಖರ ಹಿರೇಮಠ, ಶ್ರೀಶೈಲ ದಾನಗೊಂಡ, ರವಿ ರಾಮಗೊಂಡ, ರಾಘವೇಂದ್ರ ಅವಟಿ, ಬಸನಗೌಡ ಪಾಟೀಲ, ಜಗು ಸೌದಿ, ಮಂಜುನಾಥ ಗವುಳಿ, ಅಕ್ಷಯ ಬಿರಾದಾರ, ಮಾಂತೇಶ ಅವಟಿ, ಸಚೀನ ದೇವಣಗಾಂವ ನಾಗಯ್ಯ ಪಂಚಾಳಮಠ, ಗೊಲ್ಲಾಳ ಬಿರಾದಾರ, ರಾಜು ಮೆಟಗಾರ ಮೆರವಣಿಗೆಯ ನೇತೃತ್ವ ವಹಿಸಿದ್ದರು.

