ಉದಯರಶ್ಮಿ ದಿನಪತ್ರಿಕೆ
ಚಡಚಣ: ಮಹಾರಾಷ್ಟ್ರದ ತುಳಜಾಪುರ ನಗರದ ಅಂಬಾಭವಾನಿ ದೇವಸ್ಥಾನದಲ್ಲಿ ದೀಪವನ್ನು ಹೊತ್ತಿಸಿಕೊಂಡು, ಅದನ್ನು ರೇವತಗಾಂವ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಿರುವ ದೇವಿಯ ಮೂರ್ತಿಯ ಮುಂದೆ ಹಚ್ಚುವುದು ವಾಡಿಕೆ.
ನವರಾತ್ರಿಯ ಘಟಸ್ಥಾಪನೆಯ ಮುನ್ನಾ ದಿನ ರೇವತಗಾಂವ ಗ್ರಾಮದ ಅಂಬಾಭವಾನಿ ಯುವಕ ಮಂಡಳಿಯ ನೂರಾರು ಜನ ಯುವಕರು ತುಳಜಾಪುರಕ್ಕೆ ಹೋಗಿ, ತುಳಜಾಭವಾನಿ ಮಂದಿರದಲ್ಲಿ ದೀಪ ಹೊತ್ತಿಸಿಕೊಂಡು ಅದು ಆರದಂತೆ ನೂರಾರು ಕಿ.ಮೀ ಕಾಲ್ನಡಿಗೆ ಮೂಲಕ ತರಲಾಯಿತು.
ಈ ದೀಪ ಗುರುವಾರದಂದು ಬೆಳಗ್ಗೆ ಗ್ರಾಮಕ್ಕೆ ತರಲಾಯಿತು. ಈ ವೇಳೆ ಗ್ರಾಮದ ಮುತೈದೆಯರು ಅದಕ್ಕೆ ಪೂಜೆ ಸಲ್ಲಿಸಿ ಜ್ಯೋತಿಗೆ ಸ್ವಾಗತ ಮಾಡಿಕೊಂಡರು. ನಂತರ ಅಂಬಾಭವಾನಿ ದೇವಾಸ್ಥಾನದಲ್ಲಿ ಪ್ರತಿಷ್ಠಾಪಿಸಿದ ಅಂಬಾಭವಾನಿಯ ಮುಂದೆ ಜ್ಯೋತಿ ಹಚ್ಚಲಾಯಿತು. ತದನಂತರ ದೇವಾಸ್ಥಾನದ ಮುಂಭಾಗ ಜ್ಯೋತಿಯನ್ನು ಪ್ರತಿಷ್ಠಾಪಿಸಲಾಯಿತು.
ಗುರುವಾರದಿಂದ ೯ ದಿನ ಅಂಬಾಭವಾನಿಗೆ ನಿತ್ಯ ಪೂಜೆ ಸಲ್ಲಿಸಲಾಗುವುದು. ಈ ಅಂಬಾಭವಾನಿಗೆ ದುರ್ಗಾ ಪರಮೇಶ್ವರಿ, ಭುವನೇಶ್ವರಿ, ನಾಡದೇವತೆ ಎಂದು ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.
ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಅಂಬಾಭವಾನಿಯ ಮುಂದೆ ಪ್ರತಿದಿನ ಭಕ್ತರು ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ದೇವಾಸ್ಥಾನವು ದೀಪಾಲಂಕಾರದಿಂದ ಝಗಮಗಿಸುತ್ತಿತ್ತು. ಈ ಉತ್ಸವಕ್ಕೆ ದಿನನಿತ್ಯ ನೂರಾರು ಭಕ್ತರು ತಮ್ಮ ಹರಕೆ ಸಲ್ಲಿಸುವುದು, ಪೂಜೆ ಮಾಡುವುದು ವಾಡಿಕೆ.

