ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರಂಥ ಮಹಾನ ಚೇತನರ ತತ್ವ, ಸಿದ್ಧಾಂತಗಳು ಜನಮನದ ಹೃದಯದಲ್ಲಿ ನೆಲೆಸಿವೆ.ಅದರಲ್ಲೂ ಭಾರತೀಯರ ಧ್ರುವತಾರೆಯಾಗಿ ಮಿನುಗಿರುವ ಗಾಂಧೀಜಿಯವರ ಸತ್ಯ ಪ್ರೇಮ,ಅಹಿಂಸೆ ನೀತಿಭಾವ ಇಂದಿಗೂ ಪರಮಳಿಸಿವೆ. ಅವು ಸದಾಕಾಲವೂ ಪ್ರಸ್ತುತವಾಗಿವೆ. ಈ ಮಹಾತ್ಮರ ಜೀವನ ಎಂದೂ ಮರೆಯಲಾಗದು ಎಂದು ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪೂರ ನುಡಿದರು.
ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆ ವತಿಯಿಂದ ನಡೆಯುತ್ತಿರುವ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಬುಧವಾರ ಜರುಗಿದ ಗಾಂಧೀಜಿಯವರ 155 ನೇ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ 120 ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಭಾರ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ, ಗಾಂಧೀಜಿಯವರ ರಚನಾತ್ಮಕ ಕಾಯಕಗಳು,ಪರಿಕಲ್ಪನೆಗಳು ಸ್ಮರಣೀಯವಾಗಿವೆ. ಈ ಪುಣ್ಯ ಪುರುಷ ಭಾರತೀಯರಿಗಷ್ಟೇ ಅಲ್ಲ, ಜಗತ್ತಿನ ಸ್ಪೂರ್ತಿಯ ಮೂಲವಾಗಿದ್ದಾರೆ ಎಂದರು.
ಸಮಾಜ ವಿಜ್ಞಾನ ಶಿಕ್ಷಕಿ ಕವಿತಾ ಅಂಬಿ ಮಾತನಾಡಿ, ಮಹಾತ್ಮ ಗಾಂಧೀಜಿ ನಮಗೆಲ್ಲ ಆದರ್ಶಪ್ರಾಯವಾಗಿದ್ದಾರೆ. ಶಾಸ್ತ್ರೀಜಿಯವರ ಸರಳ, ಸಜ್ಜನಿಕೆಯೂ ಭಾರತೀಯರ ಹೃದಯ ತಟ್ಟಿವೆ. ಅವರ ಸ್ವಾಭಿಮಾನಯುತ ದೇಶಭಕ್ತಿ, ಬಡವರ ಪರ ಕಾಳಜಿ, ಆದರ್ಶ ರಾಜಕಾರಣ ದೇಶಿ ಸಂಸ್ಕೃತಿಗೆ ಮೆರಗು ತಂದಿವೆ. ಅತ್ಯಂತ ಸರಳತೆಯಿಂದ ಕೂಡಿದ ಈ ನಾಯಕರ ಸಾಧನೆ ಜೀವನ ನಮಗೆಲ್ಲ ಪ್ರೇರಣೆ ಎಂದರು.
ಶಿಕ್ಷಕ ಗುಲಾಬಚಂದ ಜಾಧವ, ಸದಾಶಿವ ಸಿದ್ದಾಪುರ ಮಾತನಾಡಿದರು.
ಗಾಂಧೀಜಿ, ಶಾಸ್ತ್ರೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜಿಸಲಾಯಿತು.
ಶಿಕ್ಷಕಿ ಸಹನಾ ಹತ್ತಳ್ಳಿ ರಘಪತಿ ರಾಘವ ರಾಜಾರಾಮ ಸ್ತುತಿಸಿದರು. ಬಸವರಾಜ ಅನಂತಪೂರ, ಲೋಹಿತ ಮಿಜಿ೯, ಈರಪ್ಪ ದೇಸಾಯಿ, ಸಹನಾ ಹತ್ತಳ್ಳಿ ಸೇರಿದಂತೆ ಅಡುಗೆ ಮಾತೆಯರು ಇತರರಿದ್ದರು. ಮಕ್ಕಳು ಶ್ರದ್ಧೆಯಿಂದ ಭಾಗಿಯಾಗಿದ್ದರು.

