ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅವಿನಾಭಾವ ಬಾಂಧವ್ಯ ಇರುತ್ತದೆ. ಶಿಕ್ಷಕರ ಸ್ಥಾನ ಜವಾಬ್ದಾರಿಯುತ ಆಗಿದ್ದು, ವಿದ್ಯಾರ್ಥಿಗಳು ಸಮಾಜದ ಪ್ರಗತಿಗೆ ಸೇವೆ ಸಲ್ಲಿಸಿದಾಗ ಶಿಕ್ಷಕನ ಸೇವೆ ಸಾರ್ಥಕವಾಗುತ್ತದೆ. ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಿ.ಎಲ್.ಚವ್ಹಾಣ್‌ರವರು ಹೇಳಿದರು.
ಬಂಜಾರಾ ಶಿಕ್ಷಣ ಸಂಸ್ಥೆಯಲ್ಲಿ ಸುರ್ದಿರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ನೆರವೇರಿಸಿ ಮಾತನಾಡಿದ ಅವರು. ಶಿಕ್ಷಕ ವಿದ್ಯಾರ್ಥಿಗಳಿಗೆ ಬರೀ ಜೌಪಚಾರಿಕ ಶಿಕ್ಷಣ ಮಾತ್ರ ನೀಡದೇ ಸಂಸ್ಕಾರಯುತ ಬೋಧನೆಯೊಂದಿಗೆ ಬದುಕಿನ ಸವಾಲುಗಳನ್ನು ಎದುರಿಸಲು ಕೌಶಲಗಳನ್ನು ಕರಗತ ಮಾಡಿಕೊಡುತ್ತಾನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದೀರ್ಘ ಸೇವೆ ಸಲ್ಲಿಸಿ ತಮ್ಮ ಇಳಿ ಪ್ರಾಯದಲ್ಲೂ ವಿವಿಧ ಕ್ಷೆತ್ರಗಳಲ್ಲಿ ನಿಸ್ಪೃಹ ಸೇವೆ ಸಲ್ಲಿಸುತ್ತಿರುವ ನಿವೃತ್ತ ಶಿಕ್ಷಕರಾಗಿರುವ ಬಿ.ಡಿ.ಚವ್ಹಾಣ್, ಬಿ.ಎಸ್.ಕುಂಬಾರ, ಎ.ಪಿ.ಕಳಸರಡ್ಡಿ, ಎಸ್.ವ್ಹಿ.ಬುರ್ಲಿ, ಎಸ್.ವ್ಹಿ.ದೇಶಪಾಂಡೆ ಹಾಗೂ ಜಿ.ಎ.ಉಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆಯಲ್ಲಿ ತಿಡಗುಂದಿ, ಜಾಲಗೇರಿ, ಕಳಬಳಗಿ ಹಾಗೂ ನಗರದ ಬಂಜಾರಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮುಖ್ಯ ಗುರುಗಳು ಸೇರಿದಂತೆ ಶಿಕ್ಷಕ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

