ರಾಮಕೃಷ್ಣ ನಗರದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ರಾಮಕೃಷ್ಣ ನಗರದ ಶ್ರೀ ಗಜಾನನ್ ಮಿತ್ರ ಮಂಡಲದ ವತಿಯಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ ಬಹಾದ್ದೂರ ಶಾಸ್ತ್ರಿ ಜಯಂತಿ ಅಂಗವಾಗಿ ಬುಧವಾರ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಆರೋಜಿಸಲಾಗಿತ್ತು.
ಶ್ರೀ ಗಜಾನನ ಮಿತ್ರ ಮಂಡಲದ ಸಂಚಾಲಕ ಸಂಜೀವ ನಾನಾಗೌಡ ಪಾಟೀಲ ಸ್ವಯಂ ರಕ್ತದಾನ ಮಾಡುವುದರ ಮೂಲಕ ರಕ್ತದಾನ ಮತ್ತು ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಂಜೀವ ಪಾಟೀಲ, ರಕ್ತದಾನವು ದಾನಗಳಲ್ಲಿಯೇ ಅತ್ಯಂತ ಶ್ರೇಷ್ಠ ದಾನವಾಗಿದ್ದು, ಓರ್ವ ವ್ಯಕ್ತಿಯ ರಕ್ತದಾನದಿಂದ ಮೂರು ಜನರ ಪ್ರಾಣ ಉಳಿಸಬಹುದಾಗಿದೆ. ಕಾರಣ ಪ್ರತಿಯೊಬ್ಬರೂ ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಮಹಾತ್ಮ ಗಾಂಧೀಜಿ ಮತ್ತು ಲಾಲ ಬಹಾದ್ದೂರ ಶಾಸ್ತ್ರೀಜಿಯವರು ದೇಶಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಗಾಂಧೀಜಿಯವರು ಸ್ವಚ್ಛತೆಗೆ ಬಹಳ ಮಹತ್ವ ನೀಡಿದ್ದರು. ನಾವೆಲ್ಲ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುವುದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದು ಸಂಜೀವ ಪಾಟೀಲ ಸಲಹೆ ನೀಡಿದರು.
ರಾಮಕೃಷ್ಣ ನಗರ ಬಡಾವಣೆ ಮಾಲೀಕ ಹಾಗೂ ಆಯೋಜಕ ಸಿದ್ದರಾಮ ಅಂಜಿಕಾನೆ ಮಾತನಾಡಿ, ಬಡಾವಣೆಯ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಅ.೧ರಿಂದ ಅನಿರ್ದಿಷ್ಟಾವಧಿವರೆಗೆ ಪ್ರತಿದಿನ ಬೆಳಗ್ಗೆ ಪತಂಜಲಿ ಯೋಗ ಸಮೀತಿಯ ಯೋಗ ಶಿಕ್ಷಕರಿಂದ ಯೋಗ ಶಿಬಿರ ಹಮ್ಮಿಕೊಂಡಿದ್ದು, ಶಿಬಿರ ಬಳಿಕ ಶಿಬಿರಾರ್ಥಿಗಳಿಗೆ ನಿತ್ಯ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ಮಾಡಲಾಗುತ್ತಿದೆ. ಬಡಾವಣೆ ನಿವಾಸಿಗಳು ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.
ಕಾಲೋನಿಯ ನಾಗರಿಕರಾದ
ರಾಜಶೇಖರ್ ಹುನ್ನೂರ, ವೀರೇಂದ್ರ ಬೆಳಮಗಿ, ವಿಶ್ವನಾಥ ಕೋಟೀನ್, ರಘುವೀರ್ ರಜಪೂತ, ಮಲ್ಲನಗೌಡ ಕನಕರೆಡ್ಡಿ, ಮಲ್ಲನಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ಬಿಎಲ್ಡಿಇ ಸಂಸ್ಥೆಯ ತುರ್ತು ಮತ್ತು ಅಪಘಾತ ಘಟಕದ ಅಧಿಕಾರಿ ಡಾ.ಈರಣ್ಣ ಎಸ್ ಧಾರವಾಡಕರ ಮತ್ತು ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿದರು.

ರಕ್ತದಾನಿಗಳಿಗೆ ಪ್ರಮಾಣ ಪತ್ರ
ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ಮಹಿಳಾ ರಕ್ತದಾನಿ ಶ್ರೀಮತಿ ಶೈಲಜಾ ಸಂಜೀವ್ ಪಾಟೀಲ್ ಸೇರಿದಂತೆ ಸುಮಾರು 15 ಜನ ರಕ್ತದಾನಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಸುಮಾರು ೨೦೦ ಕ್ಕೂ ಅಧಿಕ ಜನರು ಉಚಿತ ಆರೋಗ್ಯ ತಪಾಸಣೆಯ ಲಾಭ ಪಡೆದರು.
ಯೋಗ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಉಚಿತವಾಗಿ ರಕ್ತ ಮತ್ತು ರಕ್ತದೊತ್ತಡ ತಪಾಸಣೆ ಮಾಡಲಾಯಿತು

