ಅಂಕಿ ಸಂಖ್ಯೆ ಇಲಾಖೆಗೆ ಬೀಗ ಜಡಿದ ರೈತರು | ರೈತರ ಹೋರಾಟಕ್ಕೆ ಮಣಿದ ಅಧಿಕಾರಿಗಳು | ಬೆಳೆ ಕಟಾವಿನ ಮಾಹಿತಿ ನೀಡಲು ಒಪ್ಪಿಗೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಫಸಲ್ ಭೀಮಾ ಯೋಜನೆಯಡಿ ಅವ್ಯವಹಾರ ಆಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಮಂಗಳವಾರ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿತು.
ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮಾತನಾಡಿ, ೨೦೨೩-೨೪ ರಲ್ಲಿ ಜಿಲ್ಲೆಯಲ್ಲಿ ನಷ್ಟಗೊಂಡ ಎಲ್ಲಾ ರೈತರಿಗೂ ಬೆಳೆ ವಿಮೆಯ ಪರಿಹಾರ ನೀಡಬೇಕು. ವಿಮೆಯಲ್ಲಿ ಆಗಿರುವ ಮೋಸವನ್ನು ಸರಿಪಡಿಸಬೇಕು. ಫಸಲ್ ಭೀಮಾ ಯೋಜನೆ ಅನ್ನುವುದು ಅವೈಜ್ಞಾನಿಕ ಹಾಗೂ ಅಪಾರದರ್ಶಕವಾಗಿದೆ ಇವುಗಳ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಕೋಲಾರ ತಾಲೂಕಾ ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ಫಸಲ್ ಭೀಮಾ ಯೋಜನೆಯಡಿ ೧೩೧ ಕೋಟಿ ವಿಮೆ ಪರಿಹಾರ ಕೊಟ್ಟು ಕೈತೊಳೆದುಕೊಂಡಿದ್ದಾರೆ, ಬರಗಾಲದಿಂದ ತತ್ತರಿಸಿರುವ ಜಿಲ್ಲೆಗೆ ಸುಮಾರು ೧೦೦೦ ಕೋಟಿ ಪರಿಹಾರ ಬರಬೇಕಿತ್ತು ಆದರೆ ಅಧಿಕಾರಿಗಳು ಶಾಮೀಲಾಗಿರುವುದರಿಂದ ಪರಿಹಾರ ಬಾರದೇ ಪರಿತಪಿಸುವಂತಾಗಿದೆ ಎಂದರು.
ದೇವರ ಹಿಪ್ಪರಗಿ ಅಧ್ಯಕ್ಷ ಈರಪ್ಪ ಕುಳೆಕುಮಟಗಿ ಮಾತನಾಡಿ, ಕೂಡಲೇ ವಿಜಯಪುರ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಬೆಳೆ ವಿಮೆ ಅಡಿಯಲ್ಲಿ ಕೈಗೊಂಡಿರುವ ರೈತರ ಜಮೀನಿನ ಸರ್ವೇ ನಂಬರ ಆಯ್ಕೆಯ ದಿನಾಂಕ ಹಾಗೂ ವಿವರ, ಬೆಳೆ ಸಮೀಕ್ಷೆ ಹಾಗೂ ಬೆಳೆ ಕಟಾವು ಮಾಡಿರುವ ಪೋಟೋ ಹಾಗೂ ವಿಡಿಯೋ ವಿವರ ಹಾಗೂ ಅಧಿಕಾರಿಗಳ ವಿವರ, ವಿಮೆ ಇತ್ಯರ್ಥ ಪಡಿಸಿದ ವಿವರ, ಶೀಘ್ರದಲ್ಲಿ ನೀಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಸೋಮಲಿಂಗಯ್ಯ ಗೆಣ್ಣೂರ, ತೋಟಗಾರಿಕಾ ಸಹಾಯಕ ನಿರ್ದೇಶಕ ರಾಹುಲ ಬಾವಿದೊಡ್ಡಿ, ಜಂಟಿ ಕೃಷಿ ಇಲಾಖೆ ಸಿಬ್ಬಂದಿ, ಹಾಗೂ ಜಿಲ್ಲಾ ಪ್ರಭಾರಿ ಸಂಖ್ಯಾ ಸಂಗ್ರಣಾಧಿಕಾರಿ ಅಲ್ತಾಫ ಮಣಿಯಾರ ಅವರು ಜಿಲ್ಲಾಧಿಕಾರಿಗಳು ಹಾಗೂ ವಿಮೆಗೆ ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಮುಖಂಡರೊಡನೆ ಸಭೆ ಮಾಡಿ ನಷ್ಟಗೊಂಡ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ಒಪ್ಪಿಕೊಂಡ ನಂತರ ಹೋರಾಟ ಹಿಂಪಡೆಯಲಾಯಿತು.
ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ಹೋರಾಟಗಾರರಾದ ಸತೀಶ ಪಾಟೀಲ, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಅಕ್ಷಯಕುಮಾರ ಅಜಮನಿ, ರೈತ ಮುಖಂಡರಾದ ರಘುನಾಥ ಖಾಡೆ, ಜಕರಾಯ ಪೂಜಾರಿ ಮಾತನಾಡಿದರು.
ಈ ವೇಳೆ ಮಹಾಂತೇಶ ಮಮದಾಪುರ, ವಿಜಯಪುರ ತಾಲೂಕಾ ಅಧ್ಯಕ್ಷ ಮಹಾದೇವಪ್ಪ ತೇಲಿ, ತಾಳಿಕೋಟಿ ಅಧ್ಯಕ್ಷ ಶ್ರೀಶೈಲ ವಾಲಿಕಾರ, ಬಬಲೇಶ್ವರ ಅಧ್ಯಕ್ಷ ಮಕಬುಲ್ ಕೀಜಿ, ತಿಕೋಟಾ ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ, ಚಡಚಣ ಅಧ್ಯಕ್ಷ ಮಹಾದೇವ ಬನಸೋಡೆ, ಇಂಡಿ ಅಧ್ಯಕ್ಷ ಎಂ.ಹೆಚ್. ಪೂಜಾರ, ತಾಳಿಕೋಟಿ ಮಹಿಳಾ ಅಧ್ಯಕ್ಷೆ ಸುಜಾತಾ ಅವಟಿ, ವಿಜಯಪುರ ಅಧ್ಯಕ್ಷೆ ಸವಿತಾ ವಾಲಿಕಾರ, ತಿಕೋಟಾ ಅಧ್ಯಕ್ಷ ಸಂಗೀತಾ ರಾಠೋಡ, ಮಹಾದೇವ ಕದಂ, ಗೌಡಪ್ಪಗೌಡ ಹಳಿಮನಿ, ಬಸವರಾಜ ಮಸೂತಿ, ಅನವೇಶ ಜಮಖಂಡಿ, ಶಾನೂರ ನಂದರಗಿ, ಆತ್ಮಾನಂದ ಭೈರೊಡಗಿ, ಶಶಿಕಾಂತ ಬಿರಾದಾರ, ಸತ್ಯಾಪ್ಪ ಕಲ್ಲೋಳ್ಳಿ, ಕುಮಾರ ಕಾಪ್ಸೆ, ಸೇರಿದಂತೆ ನೂರಾರು ಜನ ಇದ್ದರು.

