ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದಲ್ಲಿ ಪುರಸಭೆಯಿಂದ ನಿರ್ಮಾಣಗೊಂಡಿರುವ ಮೆಗಾಮಾರುಕಟ್ಟೆಯಲ್ಲಿರುವ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಮಂಗಳವಾರ ಸಚಿವ ಶಿವಾನಂದ ಪಾಟೀಲ ಅವರ ಸಮ್ಮುಖದಲ್ಲಿ ಆರಂಭವಾಯಿತು.
ಮೆಗಾಮಾರುಕಟ್ಟೆಯಲ್ಲಿ ಒಟ್ಟು ೧೩೪ ವಾಣಿಜ್ಯ ಮಳಿಗೆಗಳಿದ್ದು. ಈಗಾಗಲೇ ಇದರಲ್ಲಿ ೩೫ ವಾಣಿಜ್ಯ ಮಳಿಗೆಗಳು ಈಗಾಗಲೇ ಮೊದಲು ಜರುಗಿದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಹರಾಜು ಆಗಿವೆ. ಉಳಿದ ೯೯ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಅಕ್ಟೋಬರ್ ೧ ಮತ್ತು ೩ ರಂದು ನಡೆಸಲು ಪುರಸಭೆ ಮುಂದಾಗಿದೆ. ಇಂದು ಜರುಗಿದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ೭ ವಾಣಿಜ್ಯ ಮಳಿಗೆಗಳು ಬಹಿರಂಗ ಹರಾಜು ಆಗುವ ಮೂಲಕ ಒಟ್ಟು ರೂ.೯೮ ಲಕ್ಷ ಠೇವಣಿ ಮೊತ್ತ ಆಗಿದೆ.
ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ೧೫ ಜನರು ಭಾಗವಹಿಸಿದ್ದರು. ಅತಿ ಹೆಚ್ಚು ಮೊತ್ತಕ್ಕೆ ವಾಣಿಜ್ಯ ಮಳಿಗೆ ಸಂಖ್ಯೆ ಜಿ-೫ ಇದನ್ನು ಸುನೀಲಕುಮಾರ ಆದಿಗೊಂಡ ಎಂಬುವವರು ರೂ. ೩೦ ಲಕ್ಷ ಠೇವಣಿ ಮೊತ್ತಕ್ಕೆ ಹರಾಜು ಮೂಲಕ ಪಡೆದುಕೊಂಡರು. ಇನ್ನೂ ೯೨ ವಾಣಿಜ್ಯ ಮಳಿಗೆಗಳು ಉಳಿದುಕೊಂಡಿವೆ. ಅ.೩ ರಂದು ಗುರುವಾರ ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ವ್ಯಾಪಾರಸ್ಥರು, ಜನರು ಪಡೆದುಕೊಳ್ಳಬಹುದು ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಹೇಳಿದರು.
ವಾಣಿಜ್ಯ ಮಳಿಗೆ ಸಂಖ್ಯೆ ಜಿ.೫೪ ರಿಂದ ೬೧ ರವರೆಗೆ ರೂ. ೧.೧ ಕೋಟಿಯವರೆಗೂ ಠೇವಣಿ ಮೊತ್ತದವರೆಗೂ ಹರಾಜು ನಡೆದರೂ ನಿರೀಕ್ಷಿತ ಠೇವಣಿ ಮೊತ್ತ ಬಾರದೇ ಇರುವದರಿಂದಾಗಿ ಇದನ್ನು ಗುರುವಾರ ನಡೆಯುವ ಹರಾಜು ಪ್ರಕ್ರಿಯೆಯವರೆಗೂ ಕಾಯ್ದಿರಿಸಲಾಯಿತು.
ಇಂದು ಜರುಗಿದ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ.ಸೌದಾಗರ, ಜಿಲ್ಲಾ ಪಂಚಾಯತಿಯ ಎಇಇ ವಸಂತ ರಾಠೋಡ, ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿ, ಪುರಸಭೆ ಕಂದಾಯ ನಿರೀಕ್ಷಕ ಗೀತಾಂಜಲಿ ದಾಸರ, ಪುರಸಭೆ ಆರೋಗ್ಯ ನಿರೀಕ್ಷಕರಾದ ವಿಜಯ ವಂದಾಲ, ಬಸವರಾಜ ಬೋಳಶೆಟ್ಟಿ, ಪುರಸಭೆ ಅಭಿಯಂತರ ಮಹಾದೇವ ಜಂಬಗಿ, ಪುರಸಭೆ ಸದಸ್ಯರಾದ ನೀಲಪ್ಪ ನಾಯಕ, ಪ್ರವೀಣ ಪೂಜಾರಿ, ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಅನಿಲ ಅಗರವಾಲ, ಶೇಖರ ಗೊಳಸಂಗಿ, ರವಿ ರಾಠೋಡ, ಮತಾಬ ಬಮ್ಮನಳ್ಳಿ, ಚಂದ್ರಶೇಖರಗೌಡ ಪಾಟೀಲ, ಸಂಕನಗೌಡ ಪಾಟೀಲ ಇತರರು ಇದ್ದರು.

