ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ವಾರ್ಡ ನಂ.೨೭, ೨೮ ಹಾಗೂ ೩೧ರ ವ್ಯಾಪ್ತಿಯಲ್ಲಿ ಬರುವ ನವಭಾಗ ರಸ್ತೆ, ಒಳಚರಂಡಿ ಮೇಲೆ ಅತಿಕ್ರಮಣ ಮಾಡಿಕೊಂಡು ನಿರ್ಮಿಸಿಕೊಂಡ ಕಟ್ಟಡಗಳನ್ನು ಮಹಾನಗರ ಪಾಲಿಕೆ ವತಿಯಿಂದ ತೆರವುಗೊಳಿಸಲಾಯಿತು.
ಸೆ.೩೦ರಂದು ತೆರವು ಕಾರ್ಯಾಚರಣೆ ಸ್ಥಳಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಭೇಟಿ ನೀಡಿ, ತೆರವು ಕಾರ್ಯಾಚರಣೆಯನ್ನು ಪರಿಶೀಲಿಸಿದ ಅವರು, ಮುಂಬರುವ ದಿನಗಳಲ್ಲಿ ನಗರದ ವಿವಿಧೆಡೆ ಒತ್ತುವರಿಯಾಗಿರುವ ಸಾರ್ವಜನಿಕ ರಸ್ತೆಗಳನ್ನು ಗುರುತಿಸಿಕೊಂಡು ತೆರವುಗೊಳಿಸಲು ಕ್ರಮ ವಹಿಸಬೇಕು. ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳಬೇಕು. ರಾಜ್‌ಕಾಲುವೆಗಳ ಮೂಲಕ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಕ್ರಮ ವಹಿಸುವಂತೆ ಅವರು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ನಗರದ ನವಭಾಗ ರಸ್ತೆಯು ನಗರದ ಮಾಸ್ಟರ್ ಪ್ಲಾನ್‌ನಡಿ ೬೦ ಅಡಿ ಮುಖ್ಯ ರಸ್ತೆಯಾಗಿದ್ದು, ಜನ-ವಾಹನ ಸಂಚಾರಕ್ಕೆ ಅನಾನೂಕುಲವಾಗುತ್ತಿರುವ ಹಿನ್ನಲೆಯಲ್ಲಿ ಹಾಗೂ ಇತ್ತೀಚೆಗೆ ನಗರದಲ್ಲಿ ಸುರಿದ ಮಳೆಯ ನೀರು ಸಂಗ್ರಹಣೆಯಾಗಿ ಅನಾನೂಕೂಲವಾಗಿರುವುದರಿಂದ ರಸ್ತೆ ಅಗಲೀಕರಣ ಕಾರ್ಯ ಕೈಗೊಂಡು ನಗರದ ಅಭಿವೃದ್ದಿ ಉದ್ದೇಶದಿಂದ ಅತಿಕ್ರಮಣ ಮಾಡಿಕೊಂಡ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಿ ತೆರವುಗೊಳಿಸುವಂತೆ ಸೂಚಿಸಲಾಗಿತ್ತಾದ್ದರೂ ಸಹ, ಅನೇಕ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಒತ್ತುವರಿಯಾದ ಕಟ್ಟಡದ ಭಾಗಗಳನ್ನು ತೆರವುಗೊಳಿಸಿಕೊಂಡಿದ್ದರು. ನೋಟಿಸ್ ನೀಡಿದರೂ ಸಹ ತೆರವುಗೊಳಿಸದೇ ಇರುವ ಇಂತಹ ಕಟ್ಟಡಗಳ ಭಾಗ-ರಚನೆಗಳನ್ನು ಪಾಲಿಕೆ ವತಿಯಿಂದ ಸೆ.೩೦ ರಂದು ಕೈಗೊಳ್ಳಲಾಯಿತು.
ತೆರವು ಕಾರ್ಯಾಚರಣೆಯನ್ನು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ ಮೆಕ್ಕಳಕಿ ಅವರ ನೇತೃತ್ವದಲ್ಲಿ ಜರುಗಿದ್ದು, ಪಾಲಿಕೆಯ ಉಪ ಆಯುಕ್ತ ವಿಠ್ಠಲ ಹೊನ್ನಳ್ಳಿ, ಮಹಾವೀರ ಬೋರಣ್ಣವರ, ವಲಯ ಆಯುಕ್ತರಾದ ಶಿವಪ್ಪ ಅಂಬಿಗೇರ, ಸುನೀಲ ಪಾಟೀಲ, ಕಾರ್ಯಪಾಲಕ ಅಬಿಯಂತರ ವಿದ್ಯಾಧರ ನ್ಯಾಮಗೊಂಡ, ಎಸ್.ಎ.ಇನಾಮದಾರ, ಸಹಾಯಕ ಕಾರ್ಯಪಾಲಕ ಅಭಿಯಂತರ ಯಲ್ಲಪ್ಪ ಹಳ್ಳಿ ಸೇರಿದಂತೆ ಪಾಲಿಕೆಯ ವಿವಿಧ ಸಿಬ್ಬಂದಿಗಳು ಉಪಸ್ಥಿತರಿದ್ದರು.

