ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಐಶ್ವರ್ಯ ನಗರದಲ್ಲಿನ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಅ.3 ರಂದು ಮೊಟ್ಟ ಮೊದಲ ಬಾರಿಗೆ ದಸರಾ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿ ಜಂಬುಸವಾರಿ ಮೆರವಣಿಗೆ ನಡೆಯಲಿದೆ ಎಂದು ದೇವಸ್ಥಾನ ಕಮಿಟಿ ಅಧ್ಯಕ್ಷ ವಿವೇಕ ಹುಂಡೈಕರ ಹೇಳಿದರು.
ನಗರದಲ್ಲಿ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 8:30 ಕ್ಕೆ ಶ್ರೀ ಚಾಮುಂಡೇಶ್ವರಿ ದೇವಿಯ ಜಂಬುಸವಾರಿಯ ಭವ್ಯ ಮೆರವಣಿಗೆಯು ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆಶ್ರಮ ರಸ್ತೆ, ಐಶ್ವರ್ಯ ನಗರದ ಮುಖ್ಯ ರಸ್ತೆಗಳ ಮೂಲಕ ಸಾಗಲಿದೆ. ಕುಂಭ ಮೇಳದೊಂದಿಗೆ ಒಂಟೆ, ಕುದುರೆ, ಗೊಂಬೆ ಕುಣಿತ, ಕರಡಿ ಮಜಲು ಸೇರಿದಂತೆ ಕೊಂಬುಕಹಳೆ ಭವ್ಯ ಮೆರವಣಿಗೆ ನಡೆಯಲಿದ್ದು, ಜಂಬುಸವಾರಿ ಆಕರ್ಷಣೆ ಕೇಂದ್ರ ಬಿಂದುವಾಗಲಿದೆ ಎಂದು ವಿವರಿಸಿದರು.
ಕಾರ್ಯದರ್ಶಿ ನಾನಾಗೌಡ ಬಿರಾದಾರ ಮಾತನಾಡಿ, ಒಂಬತ್ತು ದಿನಗಳ ಕಾಲ ನಿರಂತರ ಪೂಜೆ ಕಾರ್ಯಕ್ರಮಗಳು ನಡೆಯಲಿವೆ. 9 ದಿನಗಳ ಕಾಲ ಚಾಮುಂಡೇಶ್ವರಿ ಪುರಾಣ ಪ್ರವಚನ ನಡೆಯಲಿದ್ದು 9 ನೇ ದಿನ ಬನ್ನಿ ಮೂಡಿಯುವ ಕಾರ್ಯಕ್ರಮ ನಡೆಯಲಿದೆ. ಜಂಬುಸವಾರಿಗೆ ಆನೆ ತರಲು ಸರ್ಕಾರದ ಅನುಮತಿ ಪಡೆದುಕೊಂಡಿದ್ದೇವೆ. ಹಾಗಾಗಿ ಸರ್ವರೂ ಈ ವಿಶೇಷ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಬಸವರಾಜ ಕೋರಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಸವರಾಜ್ ಇಳಿಗೆರ, ರಾಜುಗೌಡ ಪಾಟೀಲ, ಭೀಮನಗೌಡ ಬಿರಾದಾರ, ಅಶೋಕ ತಿಮಶೆಟ್ಟಿ, ಬಸವರಾಜ ಕೋರಿ, ಸದಾಶಿವ ಚಿಕರೆಡ್ಡಿ, ಮೃತ್ಯುಂಜಯ ಶಿರೂರ ಉಪಸ್ಥಿತರಿದ್ದರು.

