ಬಸವನಬಾಗೇವಾಡಿಯಲ್ಲಿ ತಾಜ್ ಸೋಶಿಯಲ್ ಗ್ರುಫ್ ನಿಂದ ಸೌಹಾರ್ದ ಸಮಾವೇಶ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ದೇಶದ ಸಂವಿಧಾನವು ಎಲ್ಲ ಸಮಸ್ಯೆಗಳಿಗೆ, ಜನರ ನೋವುಗಳಿಗೆ ಸರಿಪಡಿಸುವ ಶಕ್ತಿಯಿದೆ. ದೇಶದ ಸಂವಿಧಾನವನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರದಾಗಿದೆ. ಪ್ರತಿಯೊಬ್ಬರೂ ಕಾನೂನುಗಳನ್ನು ಪಾಲಿಸುವ ಮೂಲಕ ದೇಶದಲ್ಲಿ ಎಲ್ಲರೂ ಪ್ರೀತಿ, ವಿಶ್ವಾಸ, ಸಹಬಾಳ್ವೆಯೊಂದಿಗೆ ಜೀವನ ಮಾಡಿದರೆ ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ತಾಜ್ ಸೋಶಿಯಲ್ ಗ್ರುಫ್ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಸೌಹಾರ್ದ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ವಾಸಿಸುವ ಎಲ್ಲ ಜನರು ಸಹೋದರತೆ, ಸಹಬಾಳ್ವೆ, ಮಾನವೀಯತೆ ಮೌಲ್ಯ ಗುಣಗಳನ್ನು ಅಳವಡಿಸಿಕೊಂಡು ಜೀವನ ಮಾಡುವಂತಾಗಬೇಕು. ಸೌಹಾರ್ದ ಸಮಾವೇಶಗಳಿಂದ ಇಂತಹ ಗುಣಗಳನ್ನು ಮೈಗೂಡಿಸಿಕೊಂಡರೆ ಸಮಾವೇಶ ಮಾಡಿದ್ದು ಸಾರ್ಥಕವಾಗುತ್ತದೆ. ಸಮಾಜಕ್ಕೆ ಯಾವುದೇ ಕಂಟಕವಾಗದ ರೀತಿಯಲ್ಲಿ ಜೀವನ ಮಾಡಬೇಕು. ಸಮಾಜಕ್ಕೆ ಪೂರಕವಾದ ಜೀವನ ಮಾಡಿದರೆ ಸಮಾಜದಲ್ಲಿ ಯಾವುದೇ ಕಂಟಕಗಳು ಬಾರದೇ ಎಲ್ಲರೂ ಸೌಹಾರ್ದತೆಯಿಂದ ಇರಲು ಸಾಧ್ಯವಿದೆ ಎಂದರು.
ಕೆಪಿಸಿಸಿ ವಕ್ತಾರ ನಿಕಿತರಾಜ ಮೌರ್ಯ ಮಾತನಾಡಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕಾರ್ಯ ನಡೆಯಬಾರದು. ದ್ವೇಷದಿಂದ ದ್ವೇಷ ಮಾಡಿದರೆ ಎಂದಿಗೂ ಸಮಸ್ಯೆ ಪರಿಹಾರ ಕಾಣುವುದಿಲ್ಲ. ಪ್ರೀತಿ, ವಿಶ್ವಾಸ ಬಹು ಮುಖ್ಯವಾಗಿದೆ. ಸಿದ್ದಗಂಗಾ ಮಠದ ಲಿಂ. ಶಿವಕುಮಾರ ಸ್ವಾಮೀಜಿಯವರು ತಮ್ಮ ಜೀವನದಲ್ಲಿ ಎಂದಿಗೂ ಧರ್ಮದ ಬಗ್ಗೆ ಮಾತನಾಡಲಿಲ್ಲ. ಅವರು ಎಲ್ಲ ಧರ್ಮದ ಮಕ್ಕಳಿಗೂ ಶಿಕ್ಷಣ, ದಾಸೋಹ ನೀಡಿದರು. ಇದು ದೇಶದ ಸೌಹಾರ್ದತೆಕ್ಕೆ ಬಹುದೊಡ್ಡ ಉದಾಹರಣೆಯಾಗಿ ನಮ್ಮ ಮುಂದಿದೆ. ಇಂತಹ ಸೌಹಾರ್ದ ವಾತಾವರಣ ಎಲ್ಲೆಡೆ ಬರುವಂತಾಗಬೇಕು. ಅನೇಕ ಮುಸ್ಲಿಂ ಬಾಂಧವರು ಹಿಂದು ದೇವಸ್ಥಾನ ಕಟ್ಟಿಸಿದ್ದಾರೆ. ಅನೇಕ ಹಿಂದು ಬಾಂಧವರು ಮುಸ್ಲಿಂ ಬಾಂಧವರಿಗೆ ನೆರವಾಗಿದ್ದಾರೆ ಎಂಬುವದನ್ನು ನಾವು ಇತಿಹಾಸದಿಂದ ತಿಳಿದುಕೊಳ್ಳುತ್ತೇವೆ. ಇದನ್ನು ಅರಿತುಕೊಂಡು ಎಲ್ಲರೂ ಸೌಹಾರ್ದತೆಯಿಂದ ಜೀವನ ಮಾಡುವದು ಅಗತ್ಯವಿದೆ ಎಂದರು.
ಕರ್ನಾಟಕ ಯುನಿಪ ಅಧ್ಯಕ್ಷ ರಫೀಕ್ ಕುದ್ರೋಳಿ, ನಂದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜೀತ ಪಾಟೀಲ, ಸಾನಿಧ್ಯ ವಹಿಸಿದ್ದ ಶಿರೂರಿನ ಡಾ.ಬಸವಲಿಂಗ ಸ್ವಾಮೀಜಿ ಮಾತನಾಡಿದರು.
ವೇದಿಕೆಯಲ್ಲಿ ಹಾಫೀಜ ಮಹ್ಮದಅಲಿ ಮಿಲಿ, ಐ.ಸಿ.ಪಟ್ಟಣಶೆಟ್ಟಿ, ಸುರೇಶ ಹಾರಿವಾಳ, ಚಂದ್ರಶೇಖರಗೌಡ ಪಾಟೀಲ, ಎಂ.ಕೆ.ಬಿರಾದಾರ, ಮುಕ್ತಿಅಬ್ದುಲ ಅಜೀಜ್ ಇತರರು ಇದ್ದರು. -ಜ್ ಅವಟಿ ಸ್ವಾಗತಿಸಿದರು. ನಜೀರ ದಡ್ಡಿ ನಿರೂಪಿಸಿದರು. ರೆಹಾನ್ ಕೆರೂರ ವಂದಿಸಿದರು.
ಕೇವಲ ಭಾಷಣದಲ್ಲಿ ದೇಶಭಕ್ತಿಯನ್ನು ತೋರಿಸದೇ ದೇಶ, ಸಮಾಜದ ಒಳಿತಿಗಾಗಿ ದುಡಿಯುವದೇ ನಿಜವಾದ ದೇಶಭಕ್ತಿಯಾಗಿದೆ. ಪ್ರತಿಯೊಬ್ಬರಲ್ಲೂ ಕ್ಷಮಿಸುವ ಗುಣ ಬರಬೇಕು. ಬೇರೆಯವರ ಕೊಂಕು ನುಡಿಗಳಿಗೆ ಕಿವಿಗೊಡದೇ ತಮ್ಮನ್ನು ತಾವು ಹಿಡಿತದಲ್ಲಿಟ್ಟುಕೊಂಡು ಮುನ್ನಡೆಯಬೇಕು. ಸಮಾಜಕ್ಕೆ ಮಾದರಿಯಾಗುವ ಗುಣವನ್ನು ಪ್ರತಿಯೊಬ್ಬರಿಗೂ ದೇವರು ನೀಡಿದ್ದಾನೆ. ದೇವರು ನಮಗೆ ನೀಡಿದ ಆಯುಷ್ಯವನ್ನು ಒಳ್ಳೆಯದಕ್ಕೆ ಬಳಕೆ ಮಾಡಿಕೊಳ್ಳಬೇಕು.”
ಯು.ಟಿ.ಖಾದರ್
ಸಭಾಧ್ಯಕ್ಷರು, ವಿಧಾನಸಭೆ
“ಮಾತುಗಳು ಭಾಷಣವಾಗದೇ ಅದು ಸಾಧನೆಯಾಗಬೇಕು. ಕೆಲವರ ಮಾತಿನಿಂದ ಸಮಾಜದಲ್ಲಿ ಅಹಿತಕರ ಘಟನೆಗಳು ಸಂಭವಿಸುತ್ತವೆ. ಒಳ್ಳೆಯ ಸಂದೇಶಗಳನ್ನು ಅರಿತುಕೊಂಡು ಜೀವನ ಮಾಡಿದರೆ ಬದುಕಿಗೆ ಒಂದು ಅರ್ಥ ಬರಲು ಸಾಧ್ಯ. ಶಾಂತಿ ಸಂದೇಶವನ್ನು ಕುರಾನ್ ನೀಡಿದೆ. ಶೇ.೯೯ ರಷ್ಟು ಇಸ್ಲಾಂ ಧರ್ಮದವರು ಒಳ್ಳೆಯವರಾಗಿದ್ದಾರೆ. ಶೇ. ೧ ರಷ್ಟು ದುಷ್ಟ ಶಕ್ತಿಯನ್ನು ಹೊಂದಿರುವ ಬಾಂಧವರಿಂದ ಇಡೀ ಇಸ್ಲಾಂ ಧರ್ಮ ಬಾಂಧವರಿಗೆ ಕೆಟ್ಟು ಹೆಸರು ಬರುತ್ತಿದೆ. ಇದನ್ನು ಅರಿತುಕೊಂಡು ಇಸ್ಲಾಂ ಬಾಂಧವರು ಈ ದುಷ್ಟ ಶಕ್ತಿಯನ್ನು ಹೊಂದಿರುವವರನ್ನು ಖಂಡಿಸಿ ಅದನ್ನು ಮಟ್ಟ ಹಾಕಲು ಮುಂದಾದರೆ ನಾವು ನಿಮ್ಮ ಜೊತೆಗೆ ಬರಲು ಸಿದ್ಧ. ಹಿಂದುಗಳಿಗೆ ಪವಿತ್ರವಾದ ಗೋಮಾತೆಯನ್ನು ಯಾವ ಕಾರಣಕ್ಕೂ ಇಸ್ಲಾಂ ಬಾಂಧವರು ಸೇವಿಸಬಾರದು. ಕಾನೂನು ಪಾಲಿಸಬೇಕಿದೆ. ಸಾಮರಸ್ಯಕ್ಕೆ ಹೆಸರಾಗಿದ್ದ ಸಂತ ಶಿಶುನಾಳ ಷರೀಫ, ಡಾ.ಎಪಿಜೆ ಅಬ್ದುಲ್ ಕಲಾಂ ರಂತಹ ಇಸ್ಲಾಮೀಯರು ಸಮಾಜಕ್ಕೆ ಬೇಕು. ಎಲ್ಲರೂ ಧರ್ಮದ ಹಾದಿಯಲ್ಲಿ ನಡೆಯುವಂತಾಗಬೇಕು.”
– ಶಿವಪ್ರಕಾಶ ಶಿವಾಚಾರ್ಯರು
ಹಿರೇಮಠ, ಬಸವನ ಬಾಗೇವಾಡಿ

