ಉದಯರಶ್ಮಿ ದಿನಪತ್ರಿಕೆ
ಚಡಚಣ: ಗಡಿಭಾಗದ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಹಾಗೂ ಶೈಕ್ಷಣಿಕ ಪ್ರಗತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಕರ್ನಾಟಕ ಗಡಿ ಪ್ರದೇಶ ಅಭೀವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರ ಹೇಳಿದರು.
ಸ್ಥಳಿಯ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಜರುಗಿದ ಗುರುವಂದನೆ ಹಾಗೂ ಜಿಲ್ಲಾ,ತಾಲ್ಲೂಕು ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗಡಿ ಭಾಗದ ಶಿಕ್ಷಣ ಸಂಸ್ಥಗೆಳಿಗೆ ಸಾಕಷ್ಟು ಅನುದಾನ ಒದಗಿಸಲಾಗುತ್ತಿದೆ. ಕರ್ನಾಟಕ, ಮಹಾರಾಷ್ಟ್ರ, ಆಂದ್ರ, ಕೇರಳ ಹಾಗೂ ಗೋವಾ ರಾಜ್ಯಗಳಿಗೆ ಹೊಂದಿಕೊಂಡಿರುವ ಕನ್ನಡ ಭಾಷಾ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿದುಕೊಂಡು ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಆ ಭಾಗದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವದು ಎಂದ ಅವರು, ಶಿಕ್ಷಕ ವೃತ್ತಿ ಪವಿತ್ರವಾದುದು, ವಿದ್ಯೆ,ಸಂಸ್ಕಾರ ಕೊಟ್ಟು, ಉತ್ತಮ ಪ್ರಜೆಗಳ ನಿರ್ಮಾಣ ಮಾಡುವ ಶಿಕ್ಷಕರಿಗೆ ಸಮಾಜದಲ್ಲಿ ಉನ್ನತ ಸ್ಥಾನವಿದೆ ಎಂದರು
ಕೃಪಾ ಸಂಘಟನೆಯ ರಾಜ್ಯಾಧ್ಯಕ್ಷ ಲೋಕೇಶ ತಾಳಿಕಟ್ಟಿ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ, ಆದರೂ ಸರ್ಕಾರ ಈ ಶಿಕ್ಷಣ ಸಂಸ್ಥೆಗಳೊಂದಿಗೆ ಮಲತಾಯಿ ಧೋರಣೆ ಹೊಂದಿದೆ,ವ್ಯವಸ್ಥಿತವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರ ಮುಚ್ಚಲು ಮುಂದಾಗಿದೆ. ಆರ್‌ಟಿಈ ಅಡಿ ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಿದ್ದ ಅನುದಾನವನ್ನು ರದ್ದುಗೊಳಿಸಿದೆ. ಇದರಿಂದ 2020-2021 ನೇ ಸಾಲಿನಲ್ಲಿ ರಾಜ್ಯದಲ್ಲಿದ್ದ ಸುಮಾರು 22 ಸಾವಿರ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಪೈಕಿ 6 ಸಾವಿರ ಶಿಕ್ಷಣ ಶಿಕ್ಷಣ ಸಂಸ್ಥೆಗಳು ಮುಚ್ಚಿಹೋಗಿವೆ. ಸುಮಾರು 15 ಸಾವಿರದಷ್ಟಿದ್ದ ಅನುದಾನಿತ ಶಿಕ್ಷಣ ಸಂಸ್ಥೆಗಳ ಮುಚ್ಚಿ ಹೋಗಿದ್ದು, ಈಗ ರಾಜ್ಯದಲ್ಲಿ 6700 ಅನುದಾನಿತ ಶಿಕ್ಷಣ ಸಂಸ್ಥೆಗಳು ಇವೆ. ಶಿಕ್ಷಕರಿಗೆ ಸೇವಾ ಭದ್ರತೆಯಿಲ್ಲ, ಕನಿಷ್ಟ ವೇತನವೂ ಇಲ್ಲ.ಅದಕ್ಕಾಗಿ ಈ ಮೋದಲು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್‌ಟಿ ಇ ಅಡಿ ನೀಡಲಾಗುತ್ತಿರುವ ಅನುದಾನಕ್ಕಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತಿದ್ದೇವೆ. ಶಿಕ್ಷಕರ ಕಲ್ಯಾಣ ನಿದಿಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಭರಿಸುತ್ತಿದ್ದರೂ ಅವರಿಗೆ ಅದರ ಸೌಲಭ್ಯ ನೀಡುತ್ತಿಲ್ಲ.ಖಾಸಗಿ ಶಿಕ್ಷಣ ಸಂಸ್ಥೆಗಳ ಗಟ್ಟಿ ಸಂಘಟನೆ ಹಾಗೂ ಹೋರಾಟದಿಂದ ನಮ್ಮ ಬೇಡಿಕೆಗಳನ್ನು ಪಡೆಯಲು ಸಾಧ್ಯ ಎಂದರು.
ಪ್ರಸ್ತಾವಿಕವಾಗಿ ಚಡಚಣ ತಾಲ್ಲೂಕು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶಂಕರ ಹಾವಿನಾಳ, ಮುಖಂಡ ಬಿ, .ಎಂ.ಕೋರೆ, ಅನುದಾನ ರಹಿತಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿದರು.
ಸಾನಿಧ್ಯ ವಹಿಸಿದ ತದ್ದೇವಾಡಿಯ ಶ್ರೀ ಗುರು ಚಂದ್ರಶೇಖರ ಸಂಸ್ಥಾನ ಮಠದ ಮಹಾಂತೇಶ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಜಿಲ್ಲೆಯ ಸುಮಾರು 14 ಜನ ಶಿಕ್ಷಕರಿಗೆ ಹಾಗೂ ತಾಲ್ಲೂಕಿನ 41 ಜನ ಶಿಕ್ಷಕರಿಗೆ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಕರ್ನಾಟಕ ಗಡಿ ಪ್ರದೇಶ ಅಭೀವೃದ್ಧಿ ಪ್ರಾಧಿಕಾರ,ಕಾರ್ಯದರ್ಶಿ ಪ್ರಕಾಶ ಮತ್ತಳ್ಳಿ,ಎಸ್.ಕೆ ಪಾಟೀಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಎಸ್.ಪಾಟೀಲ, ಜೈ ಗುರುದೇವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಯಂಕಂಚಿ, ಮುಖಂಡ ಸಿದ್ದಣ್ಣ ಬಿರಾದಾರ ಸೇರಿದಂತೆ ತಾಲ್ಲೂಕು, ಜಿಲ್ಲಾ ಹಂತದ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ, ಪದಾಧಿಕಾರಿಗಳು,ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ಶಿಕ್ಷಕರು ಇದ್ದರು.

