ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಲ್ಲಿನ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯತ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಅ೪ ರಿಂದ ರಾಜ್ಯದಾದ್ಯಂತ ಗ್ರಾಮ ಪಂಚಾಯತ ಸೇವೆಗಳಾದ ಬಾಪೂಜಿ ಸೇವೆ ಹಾಗೂ ಕಚೇರಿಯ ಎಲ್ಲ ಕರ್ತವ್ಯಗಳನ್ನು ನಿರ್ವಹಿಸುವದನ್ನು ನಿಲ್ಲಿಸಿ ಬೆಂಗಳೂರಿನ ಫ್ರೀಡಂ ಪಾರ್ಕ ನಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸುವ ಕುರಿತು ಇಲ್ಲಿನ ತಾಲೂಕು ಪಂಚಾಯತ ನ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷರು ಆನಂದ ಹಿರೇಮಠ, ತಾಲೂಕು ಅಧ್ಯಕ್ಷ ಪಿ.ಎಸ್.ನಾಯ್ಕೋಡಿ. ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಸಂಗಮೇಶ ಕೂಡಗಿ. ಎಸ್.ಡಿ.ಎ ಸಂಘದ ಅಧ್ಯಕ್ಷ ಎಮ್.ಕೆ.ಗುಡಿಮನಿ, ಡಿಇಓ ಸಂಘದ ಅಧ್ಯಕ್ಷ ವೆಂಕಟೇಶ್ ಭಜಂತ್ರಿ, ಕರವಸೂಲಿ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ ತಮದಡ್ಡಿ, ಸದಸ್ಯರುಗಳ ಒಕ್ಕೂಟದ ಅಧ್ಯಕ್ಷ ರಮೇಶ್ ಇಂಗಳಗಿ ಇದ್ದರು. ಕಾರ್ಯನಿರ್ವಾಹಕ ಅಧಿಕಾರಿಗಳ ಪರವಾಗಿ ಖುಭಾಸಿಂಗ್ ಜಾಧವ ಮನವಿ ಸ್ವೀಕರಿಸಿದರು.

