ಅದ್ಧೂರಿ-ವಿಜೃಂಭಣೆಯಿಂದ ಜರುಗಿದ ಕರ್ನಾಟಕ ಸಂಭ್ರಮ-೫೦ ಆಚರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜಯಪುರ ಜಿಲ್ಲಾಡಳಿತದ ಸಹಯೋಗದಲ್ಲಿ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆ, ಜತ್ತ ತಾಲ್ಲೂಕಿನ ಗುಡ್ಡಾಪುರ ಶ್ರೀ ದಾನಮ್ಮ ದೇವಿ ಸುಕ್ಷೇತ್ರದಲ್ಲಿ ಸೆಪ್ಟೆಂಬರ್ ೩೦ ರಂದು ಕರ್ನಾಟಕ ಸಂಭ್ರಮ-೫೦’ರ ಆಚರಣೆಯ ಜೊತೆಯಲ್ಲಿ ಶ್ರೀಮತಿ ಡಾ.ಜಯದೇವಿ ತಾಯಿ ಲಿಗಾಡೆ” “ನಾಡೋಜ ಡಾ.ಕಯ್ಯಾರ ಕಿಂಞ್ಞಣ್ಣ ರೈ ಮತ್ತು “ಡಾ. ಚನ್ನಬಸವ ಪಟ್ಟದ್ದೇವರು ಇವರ ಹೆಸರಿನಲ್ಲಿ ಗಡಿ ಪ್ರಾಧಿಕಾರದಿಂದ ನೀಡುತ್ತಿರುವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಹೊರನಾಡ ಗಡಿ ಕನ್ನಡಿಗರ ಸಮಾವೇಶ ನಡೆಯಿತು.
ಬರಗೂರು ರಾಮಚಂದ್ರಪ್ಪ ಅವರ ಸಮಿತಿಯ ಆಯ್ಕೆ ಮಾಡಿರುವ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು.
೨೦೨೩-೨೪ನೇ ಸಾಲಿಗೆ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರು ಗಡಿನಾಡಿನ ಚೇತನ ಪ್ರಶಸ್ತಿಗೆ ಕಾಸರಗೋಡಿನ ರಾಧಾಕೃಷ್ಣ ಕೆ. ಉಳಿಯತ್ತಡ, ಡಾ.ಜಯದೇವಿ ತಾಯಿ ಲಿಗಾಡೆ ಗಡಿನಾಡ ಚೇತನ ಪ್ರಶಸ್ತಿಗೆ ಬೀದರದ ಪಂಚಾಕ್ಷರಿ ಪುಣ್ಯ ಶೆಟ್ಟಿ, ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಗಡಿನಾಡ ಚೇತನ ಪ್ರಶಸ್ತಿಯನ್ನು ಬೆಳಗಾವಿಯ ಬಿ.ಎಸ್. ಗವಿಮಠ ಹಾಗೂ ೨೦೨೪-೨೫ನೇ ಸಾಲಿನ ಡಾ. ಚನ್ನಬಸವ ಪಟ್ಟದ್ದೇವರು ಗಡಿನಾಡ ಚೇತನ ಪ್ರಶಸ್ತಿಯನ್ನು ಗುಜರಾತಿನ ಅಹ್ಮದಾಬಾದ್‌ನ ಕರ್ನಾಟಕ ಸಂಘ, ಜಯದೇವಿ ತಾಯಿ ಲಿಗಾಡೆ ಗಡಿನಾಡಿನ ಚೇತನ ಪ್ರಶಸ್ತಿಯನ್ನು ಮಹಾರಾಷ್ಟ್ರ ರಾಜ್ಯದ ಸಂಖದ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಉಮದಿಯ ಸರ್ವೋದಯ ಶಿಕ್ಷಣ ಸಂಸ್ಥೆಯನ್ನು, ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಗಡಿನಾಡ ಚೇತನ ಪ್ರಶಸ್ತಿಯನ್ನಹ ಕೇರಳ ರಾಜ್ಯದ ಕಾಸರಗೋಡಿನ ಪೆರಡಾಲ ನೀರ್ಚಾಲು, ಕುಂಬಳೆ (ದಾರಿ) ಮಹಾಜನ ವಿದ್ಯಾಭಿವರ್ಧಕ ಸಂಘಕ್ಕೆ ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಹಲ್ಮಿಡಿ ಶಾಸನದ ಮಾದರಿಯ ಸ್ಮರಣಿಕೆ, ಪ್ರಮಾಣ ಪತ್ರ ಹಾಗೂ ಒಂದು ಲಕ್ಷ ರೂ. ನಗದು ಒಳಗೊಂಡಿದೆ.
ಇದಕ್ಕೂ ಮೊದಲು ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನದಿಂದ ವೇದಿಕೆಯವರೆಗೆ ಡೊಳ್ಳು ಕುಣಿತ, ಕರಡಿ ಮಜಲು, ವೀರಗಾಸೆ, ತಾಸೆ ವಾದನ, ಜಗ್ಗಲಗಿ, ನಂದಿ ಕೋಲು, ಹಾಲಕ್ಕಿ ಸುಗ್ಗಿ ಕುಣಿತ, ಸತ್ತಿಗೆ ಕುಣಿತ, ಗೊಂಬೆ ಕುಣಿತದ ವಿವಿಧ ಜಾನಪದ ಕಲಾ ತಂಡಗಳಿಂದ ಮೆರವಣಿಗೆ ನಡೆಯಿತು.
ಮಹಾರಾಷ್ಟ್ರ ರಾಜ್ಯದ ಕನ್ನಡ ಶಾಲೆಗಳಿಗೆ ಕನ್ನಡ ಭಾಷೆಯ ‘ನಲಿ-ಕಲಿ’ ಕಲಿಕಾ ಸಾಮಗ್ರಿಗಳು ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ “ಲಾಂಛನ” ಸಾಕ್ಷ್ಯ ಚಿತ್ರ ಹಾಗೂ ಪ್ರಶಸ್ತಿ ಪುರಸ್ಕೃತರ ಪರಿಚಯಾತ್ಮಕ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ಗಡಿನಾಡಲ್ಲಿ ಕನ್ನಡ ಡಿಂಡಿಮ-ರಾಜ್ಯದ ವಿವಿಧ ಕಲಾ ಪ್ರಕಾರಗಳ ಅನಾವರಣ
ವಿಜಯಪುರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜಯಪುರ ಜಿಲ್ಲಾಡಳಿತದ ಸಹಯೋಗದಲ್ಲಿ ಹಮ್ಮಿಕೊಂಡ ಕರ್ನಾಟಕ ಸಂಭ್ರಮ -೫೦ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಸಾಂಸ್ಕೃತಿಕ ಕಾರ್ಯಕ್ರಮ, ಗಡಿನಾಡ ಕನ್ನಡಿಗರ ಸಮಾವೇಶ ಹಾಗೂ ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವು ಅತ್ಯಂತ ಸಂಭ್ರಮ ಸಡಗರದಿಂದ ನಡೆಯಿತು.
ಕರ್ನಾಟಕ ಸಂಭ್ರಮ-೫೦ರ ಕಾರ್ಯಕ್ರಮದಲ್ಲಿ ಹಬ್ಬದ ಸಡಗರ ಮನೆ ಮಾಡಿತ್ತು. ಅನೇಕ ಭಕ್ತರ ಆರಾಧ್ಯ ದೈವ ಸುಕ್ಷೇತ್ರ ಶ್ರೀ ದಾನಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಸಂಭ್ರಮದ ಅಂಗವಾಗಿ ನಡೆದ ಕಾರ್ಯಕ್ರಮ ವಾತಾವರಣ ನಿರ್ಮಾಣವಾಗಿತ್ತು. ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ ವಿವಿಧ ಕಲಾಪ್ರಕಾರಗಳು ಇಲ್ಲಿ ಅನಾವರಣಗೊಂಡು ಪ್ರೇಕ್ಷಕರ ಮನಮುಟ್ಟಿದವು.
ಸಮಾವೇಶದಲ್ಲಿ ಹಲವಾರು ಕಲಾ ಪ್ರಕಾರದ ಸಾಂಸ್ಕೃತಿಕ, ಜಾನಪದ ಕಲೆಗಳ ಅನಾವರಣಗೊಂಡವು. ಸಂಪೂರ್ಣ ಕರ್ನಾಟಕದ ಕಲೆ, ಇತಿಹಾಸ, ಸಾಂಸ್ಕೃತಿಕ ಪರಿಚಯ ಮಾಡಿಸಿತು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಪ್ರೇಕ್ಷಕರ ಮನಗೆದ್ದವು. ವಿವಿಧ ಅಕಾಡೆಮಿಗಳ ಸಹಯೋಗದಲ್ಲಿ ಹೊನ್ನ ಬಿತ್ತೆವು ನೃತ್ಯ ರೂಪಕ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಹಾಗೂ ಕರ್ನಾಟಕ ಶಿಲ್ಪ ಕಲಾ ಅಕಾಡೆಮಿ ವತಿಯಿಂದ ದೃಶ್ಯಯಾನ ರೂಪಕ ಮತ್ತು ಶಿಲ್ಪಕಲಾ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕನ್ನಡ ನೃತ್ಯ ರೂಪಕ, ಕಾಸರಗೋಡಿನ ಕೆ.ವಿ. ರಮೇಶ ತಂಡದವರಿಂದ ಯಕ್ಷಗಾನ ಗೊಂಬೆಯಾಟ, ಜತ್ತ ಮತ್ತು ಅಕ್ಕಲಕೋಟೆಯ ವಿವಿಧ ಸ್ಥಳೀಯ ಕಲಾವಿದರಿಂದ ಕನ್ನಡ ಗೀತೆ ಹಾಗೂ ಭಾವಗೀತೆಗಳು, ವಿಜಯಪುರದ ರಂಗನಾಥ ಬತಾಸೆ ತಂಡದವರಿಂದ ನೃತ್ಯರೂಪಕ, ಶ್ರೀಮತಿ ಸಂಗೀತಾ ಕಟ್ಟಿ ಅವರಿಂದ ಕನ್ನಡ ಗೀತಗಾಯನ, ಪ್ರಕಾಶ ಮಲ್ಲಿಗವಾಡ ಮತ್ತು ಲಲಿತಾ ಚಾಕಲಬ್ಬಿ ತಂಡದವರಿಂದ ಜಾನಪದ ನೃತ್ಯಗಳು, ಶ್ರೀಮತಿ ಹೇಮಾ ಪಾಟೀಲ ಅವರಿಂದ ದಾರದಿಂದ ಬರೆಯುವ ಚಿತ್ರ ಪ್ರದರ್ಶನ, ಗಂಗಾವತಿ ಪ್ರಾಣೇಶ್ ಅವರ ತಂಡದಿಂದ ಕನ್ನಡ ನಗೆ ಹಬ್ಬ ಸೇರಿದಂತೆ ಅನೇಕ ಕನ್ನಡ ಕಲೆಯ ಅನಾವರಣಗೊಂಡವು. ನಾಡಿನ ವಿವಿಧ ಮೂಲೆ ಮೂಲೆಗಳಿಂದ ಆಗಮಿಸಿದ ಕಲಾವಿದರು ತಮ್ಮ ಕಲೆಯ ಪ್ರದರ್ಶನ ನೀಡಿದರು.

