ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಗಡಿಭಾಗದಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುವ ಜೊತೆಗೆ ಪ್ರೋತ್ಸಾಹಿಸುವ ಕೆಲಸವನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿರಂತರವಾಗಿ ಮಾಡುತ್ತಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ, ಬೀದರಿನ ಡಾ.ಸಂಜೀವಕುಮಾರ ಅತಿವಾಳೆ ಹೇಳಿದರು.
ಪಟ್ಟಣದ ಮಾರ್ಗವಾಗಿ ಗುಡ್ಡಾಪುರಕ್ಕೆ ತೆರಳುವ ಸಂದರ್ಭದಲ್ಲಿ ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ನಿವಾಸದಲ್ಲಿ ಭಾನುವಾರ ಸಂಜೆ ಸನ್ಮಾನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಒಂದಾಗಿ ಕನ್ನಡ ಕಟ್ಟುವ ಕೆಲಸವನ್ನು ಮಾಡಬೇಕಿದೆ. ಗಡಿ ಪ್ರದೇಶದಲ್ಲಿ ಕನ್ನಡ ಬೆಳವಣಿಗೆಗೆ ಇನ್ನೂ ಹೆಚ್ಚು ಒತ್ತು ನೀಡಬೇಕಾಗಿದೆ. ಗಡಿ ಪ್ರದೇಶದಲ್ಲಿರುವ ಕನ್ನಡ ಶಾಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅವಶ್ಯಕತೆ ಇಂದು ಹೆಚ್ಚಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕೊಡಮಾಡುವ ಗಡಿನಾಡ ಚೇತನ ಪ್ರಶಸ್ತಿಗೆ ಭಾಜನರಾದ ಬೀದರ ಖ್ಯಾತ ಸಾಹಿತಿ, ಕನ್ನಡಪರ ಹೋರಾಟಗಾರ ಪಂಚಾಕ್ಷರಿ ಪುಣ್ಯಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಂಗರಗಿಯ ಚನ್ನಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ ವಿವೇಕಾನಂದ ಕಲ್ಯಾಣಶೆಟ್ಟಿ, ತಾಲೂಕು ಶರಣ ಸಾಹಿತ್ಯ ಅಧ್ಯಕ್ಷ ವೀರಣ್ಣ ಮರ್ತುರ, ಕದಳಿ ವೇದಿಕೆಯ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಆರ್.ಜಿ.ಅಳ್ಳಗಿ, ನಂದಿ ಸಾಹಿತ್ಯ ವೇದಿಕೆಯ ಅಧ್ಯಕ್ಷ ಮಹಾಂತೇಶ ಸಂಗಮ, ಮಲ್ಲಿಕಾರ್ಜುನ ಮುರಾಳ, ರಾಜಶೇಖರ ಚಿಂಚೋಳಿ, ಬೀದರದ ನಾಗಶೆಟ್ಟಿ, ಜ್ಯೋತೆಪ್ಪನವರ, ಸಂಗಪ್ಪ ಬಶೆಟ್ಟಿ ಇತರರು ಇದ್ದರು. ಇದಕ್ಕೂ ಮೊದಲು ಐತಿಹಾಸಿಕ ಬಸವೇಶ್ವರ ದೇವಸ್ಥಾನಕ್ಕೆ, ಬಸವ ಜನ್ಮಸ್ಮಾರಕಕ್ಕೆ ಡಾ.ಸಂಜೀವಕುಮಾರ ಅತಿವಾಳೆ, ಪಂಚಾಕ್ಷರಿ ಪುಣ್ಯಶೆಟ್ಟಿ ಭೇಟಿ ನೀಡಿದರು.

