ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಳಿಕೋಟೆ ತಾಲೂಕು ಆದ ಬಳಿಕ ನಡೆಯುತ್ತಿರುವ ಪ್ರಥಮ ತಾಳಿಕೋಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲ ಸಾಹಿತಿಗಳು, ಕನ್ನಡಾಭಿಮಾನಿಗಳು ಭಾಗಿಯಾಗಿ ಕನ್ನಡದ ತೇರನ್ನು ಎಳೆಯುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸೋಣ ಎಂದು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅ.೧ ರಂದು ಸಮ್ಮೇಳನ ನಿಗದಿಯಾಗಿದ್ದು ಅಂದು ಬೆಳಿಗ್ಗೆ ಸಮ್ಮೇಳನಕ್ಕೆ ತೆರಳಲು ಮತ್ತು ಸಂಜೆ ಅಲ್ಲಿಂದ ಮರಳಲು ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಿಕೊಳ್ಳೋಣ. ನಮ್ಮ ತಾಲೂಕಿನ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾದಲ್ಲಿ ಸಮ್ಮೇಳನ ಯಶಸ್ವಿ ಸಾಧ್ಯತೆ ಹೆಚ್ಚಿರುವದರಿಂದ ಶಾಲೆಗಳಿಗೆ ರಜೆ ಕೊಡಿಸುವ ಪ್ರಯತ್ನ ಮಾಡುವೆ ಎಂದರು.
ಸಾಹಿತಿಗಳಾದ ಅಶೋಕ ಮಣಿ, ಪಿ.ಎಚ್.ಉಪ್ಪಲದಿನ್ನಿ, ಶಿವಕುಮಾರ ಹಡಪದ, ಪ್ರಭುಗೌಡ ರಾಯರೆಡ್ಡಿ, ಬಿ.ವಿ.ಕೋರಿ, ಎಂ.ಬಿ.ಪಾಟೀಲ ಮತ್ತೀತರರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು.
ಈ ವೇಳೆ ಎಪಿಎಂಸಿ ನಿರ್ದೇಶಕ ವಾಯ್.ಎಚ್.ವಿಜಯಕರ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ರಾಜುಗೌಡ ತುಂಬಗಿ, ರಹೆಮಾನ ಬಿದರಕುಂದಿ, ಪರಶುರಾಮ ಚೌಡಕೇರ, ಟಿ.ಭಾಸ್ಕರ, ಹುಸೇನ ಮುಲ್ಲಾ, ಸದಾಶಿವ ಮಠ, ಅಮರೇಶ ಗೂಳಿ, ಹುಸೇನ ಕಾಳಗಿ, ಸಂಗಣ್ಣ ಮೇಲಿನಮನಿ, ಸೋಮು ಮೇಟಿ, ಸಿದ್ದು ಹಡಲಗೇರಿ ಸೇರಿದಂತೆ ಮತ್ತೀತರರು ಇದ್ದರು.
ಸಮ್ಮೇಳನಕ್ಕೆ ಮುದ್ದೇಬಿಹಾಳ ತಾಲೂಕಿನ ಸಾಹಿತಿಗಳಿಗೆ, ಕನ್ನಡಾಭಿಮಾನಿಗಳಿಗೆ ಆವ್ಹಾನಿಸದಿರುವದು ಹಲವು ಸಾಹಿತಿಗಳ ಪತ್ರಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು. ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಕಾವೇರಿದ ಚರ್ಚೆಗಳು ನಡೆದವು. ಹಲವು ಸಾಹಿತಿಗಳು ಮತ್ತು ಪತ್ರಕರ್ತರು ನೇರವಾಗಿ ತಾಳೀಕೋಟೆ ಕಸಾಪ ಅಧ್ಯಕ್ಷರಿಗೆ ಮತ್ತು ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅವರಿಗೆ ಇನ್ನೊಮ್ಮೆ ಈ ರೀತಿಯಾಗದಂತೆ ನೋಡಿಕೊಳ್ಳುವಂತೆ ಎಚ್ಚರಿಕೆ ಸಂದೇಶ ರವಾಸಿದರೆ, ಇನ್ನೂ ಕೆಲವರು ಕನ್ನಡದ ತೇರನ್ನು ಎಳೆಯುವ ಉದ್ದೇಶದಿಂದ ಆಗಿರುವ ತಪ್ಪನ್ನು ಮನ್ನಿಸಿ ಸಮ್ಮೇಳನದಲ್ಲಿ ಭಾಗಿಯಾಗೋಣ ಎನ್ನುವ ಮಾತುಗಳನ್ನಾಡಿದರು.

