ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಇಂದಿರಾ ನಗರದ ನಿವಾಸಿಗಳು ತಮ್ಮ ತಗಡಿನ ಮನೆಗಳನ್ನು ತೆರವು ಮಾಡುವುದನ್ನು ತಡೆಹಿಡಿಯಬೇಕೆಂದು ಒತ್ತಾಯಿಸಿ ತಹಶೀಲ್ದಾರ ಕಚೇರಿಯ ಎದುರು, ಕೊಳಗೇರಿ ಅಭಿವೃದ್ಧಿ ಮಂಡಳಿ ನೀಡಿದ ಹಕ್ಕುಪತ್ರ ಹಿಡಿದು ದಿಢೀರ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ವೇಳೆ ನಿವಾಸಿಗಳಾದ ರಾಮು ದಳವಾಯಿ ಮಾತನಾಡಿ, ಕೊಳಗೇರಿ ಅಭಿವೃದ್ದಿ ಮಂಡಳಿಯವರು ಮತ್ತು ಪುರಸಭೆಯವರು ಜಂಟಿಯಾಗಿ ಸರ್ವೇ ಮಾಡಿ ನಮಗೆ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆಗಳನ್ನು ನೀಡಲಾಗಿದೆ. ಸುಮಾರು ವರ್ಷಗಳಿಂದ ನಾವು ಇಲ್ಲಿ ವಾಸವಿದ್ದೇವೆ. ಸಧ್ಯ ಪುರಸಭೆ ಮುಖ್ಯಾಧಿಕಾರಿಗಳು ದಿಢೀರನೆ ಬಂದು ಮಂಡಳಿ ನೀಡಿದ ಹಕ್ಕು ಪತ್ರಗಳನ್ನೂ ಸಹ ಗಮನಿಸಿದೇ ನಿಮ್ಮ ತಗಡಿನ ಮನೆಗಳು ಅನಧಿಕೃತವಾಗಿವೆ. ಕೂಡಲೇ ಖಾಲಿ ಮಾಡಿ ಇಲ್ಲದಿದ್ರೆ ತೆರವುಗೊಳಿಸುವದಾಗಿ ತಿಳಿಸಿದ್ದಾರೆ. ಈ ನಡೆಯನ್ನು ನಾವು ಖಂಡಿಸುತ್ತೇವೆ. ಕೊಳಗೇರಿ ಅಭಿವೃದ್ಧಿ ಮಂಡಳಿ ನೀಡಿದ ಹಕ್ಕುಪತ್ರವನ್ನು ಗಮನಿಸದೇ, ಯಾವ ನೊಟೀಸನ್ನೂ ನೀಡದೇ ನಮ್ಮ ಮನೆಗಳನ್ನು ತೆರವುಗೊಳಿಸಲು ಹುನ್ನಾರ ನಡೆಸಿರುತ್ತಾರೆ. ಕೂಡಲೇ ಈ ದಬ್ಬಾಳಿಕೆಯನ್ನು ಕೈಬಿಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ನಾವೆಲ್ಲರೂ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತೇವೆ ಎಂದರು.
ಈ ವೇಳೆ ಪರಶುರಾಮ ದಳವಾಯಿ, ಸಿದ್ದು ಬಂಟನೂರ ಮಾತನಾಡಿ ಪುರಸಭೆ ಮುಖ್ಯಾಧಿಕಾರಿಗಳು ದಿಢೀರನೆ ಬಂದು ನಮ್ಮ ತಗಡಿನ ಮನೆಗಳನ್ನು ತೆರವುಗೊಳಿಸುವದಾಗಿ ತಿಳಿಸಿರುತ್ತಾರೆ. ಇದರಿಂದ ನಮ್ಮ ಮನೆಯ ಹೆಣ್ಣುಮಕ್ಕಳು ಕಂಗಾಲಾಗಿ ಊಟ ನೀರು ಬಿಟ್ಟು ಕುಳಿತಿದ್ದಾರೆ. ಮುಖ್ಯಾಧಿಕಾರಿಗಳನ್ನು ಬೇಟಿ ಮಾಡಲು ಪುರಸಭೆಗೆ ತೆರಳಿದ್ದೆವು. ಅವರಿಲ್ಲದ ಕಾರಣ ತಹಶೀಲ್ದಾರ ಕಚೇರಿಯ ಎದುರು ಹೋರಾಟ ನಡೆಸಿ ಮನವಿ ಸಲ್ಲಿಸುತ್ತಿದ್ದೇವೆ. ನಮಗೆ ವಾಸಕ್ಕೆ ಈ ಮನೆಗಳನ್ನು ಬಿಟ್ಟರೇ ಬೇರೆ ಯಾವುದೇ ಮನೆಯಿಲ್ಲ. ಕಡುಬಡವರಾದ ನಮ್ಮ ಕಷ್ಟಕ್ಕೆ ಹಿರಿಯ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು ಎಂದರು.
೨೦೨೧ ರಲ್ಲಿ ಸ್ಲಂ ಬೋರ್ಡ ಅಧಿಕಾರಿಗಳು ಮತ್ತು ಪುರಸಭೆ ಅಧಿಕಾರಿಗಳೂ ಜಂಟಿ ಸರ್ವೇ ಕೈಗೊಂಡು ಕರ್ನಾಟಕ ಸರಕಾರದ ಸಚಿವಾಲಯ ನಗರಾಭಿವೃದ್ಧಿ ಇಲಾಖೆಯ ಆದೇಶದಂತೆ ಸಂಖ್ಯೆ: ನಇ ೭೩ ಜೆಇಎಲ್-೨೦೨೦ ದಿನಾಂಕ ೧೮-೦೨-೨೦೨೧ ರ ಆದೇಶಂತೆ ನಮ್ಮಿಂದ ಹಣವನ್ನು ಭರಣೆ ಮಾಡಿಕೊಂಡು ನಮಗೆ ಹಕ್ಕು ಪತ್ರ ವಿತರಿಸಿದ್ದು ಮತ್ತು ನೋಂದಣಿ ಪತ್ರವನ್ನು ನೀಡಿದ್ದು ಉತಾರಾ ನೀಡಲು ಅರ್ಜಿ ಸಹ ನೀಡಿರುತ್ತೇವೆ. ಕೂಲಿ ನಾಲಿ ಮಾಡಿ ಬದುಕುವ ಪರೀಸ್ಥಿತಿ ನಮ್ಮದಾಗಿದ್ದು ಈ ಮನೆಗಳನ್ನು ತೆರವುಗೊಳಿಸಿದರೆ ನಮಗೆ ವಾಸಿಸಲು ಯಾವುದೇ ಸೂರುಗಳಿಲ್ಲ. ಕಾರಣ ಹಕ್ಕು ಪತ್ರಗಳನ್ನು ಪರಿಶೀಲಿಸಿ ನಮಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ವಿನಂತಿಸುತ್ತೇವೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿಭಟನೆಯಲ್ಲಿ ಎಂ.ಡಿ.ಉಪ್ಪಲದಿನ್ನಿ, ಸೀತಾರಾಮ ತಳ್ಳಿ, ಎಚ್.ಆರ್.ಕುಂಟೋಜಿ, ಸೂರೆ ಮುರಾಳ, ಪಿ.ಎಂ.ಚಲವಾದಿ, ಫರಜಾನ, ಎಸ್.ಬಿ.ಬೂದಿಹಾಳ, ನಿಂಗವ್ವ, ಅಶ್ವಿನಿ ಚಲವಾದಿ, ಭಾಗಮ್ಮ ಬಿರಾದಾರ, ಮಲ್ಲಮ್ಮ ಇಸ್ಲಾಂಪೂರ, ರವಿ ಚಲವಾದಿ, ಶಂಕ್ರಪ್ಪ ಮಾದರ, ಅಶೋಕ ಬಿರಾದಾರ, ಹನೀಫ ಮುಲ್ಲಾ, ಶಂಕ್ರಪ್ಪ ಮಾದರ, ಬಾಬರ ಶಹಾಪೂರ, ಆಸೀಫ ಕುಂಟೋಜಿ ಸೇರಿದಂತೆ ಮತ್ತೀತರರು ಇದ್ದರು.

