ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಇ.ಸಿ.ಎಸ್- ೯೫ ಸಿಂಚಣಿದಾರರು, ರಾಷ್ಟ್ರೀಯ ಸಂಘರ್ಷ ಸಮಿತಿಯ ಕರೆಯ ಮೇರೆಗೆ ವಿಜಯಪುರದ ಭವಿಷ್ಯ ನಿಧಿ ಕಛೇರಿ ಎದುರು ಸುಮಾರು ೫೦೦ ಕ್ಕಿಂತ ಹೆಚ್ಚು ಜನ ಸೇರಿ ಕನಿಷ್ಠ ಪಿಂಚನ ಹೆಚ್ಚಳಕ್ಕಾಗಿ ಬೃಹತ್ ಪ್ರತಿಭಟನೆ ನಡೆಸಿದರು. ಇ.ಪಿ.ಎಸ್-೯೫ ಪಿಂಚಣಿದಾರರು ಕಳೆದ ೧೦ -೧೨ ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಮಹಾರಾಷ್ಟ್ರದ ಬುಲ್ಡಾನಾದಲ್ಲಿ ಸರತಿ ಉಪವಾಸ ಸತ್ಯಾಗ್ರಹ ಇಂದಿಗೆ ೨೦೯೮ ದಿನಕ್ಕೆ ಕಾಲಿಟ್ಟರೂ ಕೇಂದ್ರ ಸರ್ಕಾರ ಹುಸಿ ಭರವಸೆಗಳನ್ನು ಕೊಡುತ್ತಾ ಕಾಲಹರಣ ಮಾಡುತ್ತಿದೆ ಎಂದು ಎನ್.ಎ.ಸಿ. ವಿಜಯಪುರ ಅಧ್ಯಕ್ಷ ಎಸ್.ಜೆ.ಗೌಡರ ಮಾತನಾಡಿದರು.
ಇದುವರೆಗೆ ಕನಿಷ್ಠ ಪಿಂಚಣಿ ರೂ.೭೫೦೦+ಡಿ. ಹಾಗೂ ಉಚಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಬೇಡಿಕೆಯನ್ನು ಸರ್ಕಾರ ಇ.ಪಿ.ಎಫ್.ಓ, ಈಡೇರಿಸುತ್ತಿಲ್ಲ . ಪಿಂಚಣಿದಾರರ ಬವಣೆ ಹೇಳತೀರದ್ದು ಆಗಿದೆ. ಸೇವಾವಧಿಯಲ್ಲಿ ವಂತಿಗೆ ಕೊಟ್ಟು ಯೋಗ್ಯ ಪಿಂಚನೆ ಇಲ್ಲದೇ ಪಿಂಚಣಿದಾರ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸರ್ಕಾರ ಬೇಗನೆ ಬೇಡಿಕೆಯನ್ನು ಈಡೇರಿಸಿ ವೃದ್ಧರನ್ನು ಗೌರವಯುತ ಜೀವನವನ್ನು ನಡೆಸಲು ಅನುಕೂಲ ಮಾಡಿಕೊಡಬೇಕೆಂದು ನ್ಯಾಮ್ಸ್ ನೇತಾರ ಎಂ.ಎ.ಮುಲ್ಲಾ ಹೇಳಿದರು.
ರಾಷ್ಟ್ರೀಯ ಸಂಘರ್ಷ ಸಮಿತಿಯ ಕರ್ನಾಟಕ ರಾಜ್ಯದ ಉಪಾಧ್ಯಕ್ಷ ವೀರಕುಮಾರ ಗಡಾದ ಮಾತಾನಾಡುತ್ತಾ, ಮೋದಿಯವರ ಸರ್ಕಾರ ಈಗಲಾದರೂ ಎಚ್ಚೆತ್ತು ವೃದ್ಧ ಪಿಂಚಣಿದಾರರ ಬೇಡಿಕೆಯನ್ನು ಈಡೇರಿಸಲೆಂದು ಆಗ್ರಹಿಸಿದರು.
ಎನ್.ಇ.ಸಿ. ಕಾರ್ಯದರ್ಶಿ ಆರ್.ಎ.ಪನಿಬಂಧ, ಎ.ಆಯ್.ಟಿ.ಯು.ಸಿ.ಮುಖಂಡ ಗೋಪಾಲ ಬಿರಾದಾರ ಮಾತನಾಡಿದರು.
ಬಳಿಕ ಇ.ಪಿ.ಎಫ್.ಓ.ಕಛೇರಿಯಲ್ಲಿ ಅಧಿಕಾರಿಗಳ ಮುಖಾಂತರ ಕೇಂದ್ರ ಕಾರ್ಮಿಕ ಕಲ್ಯಾಣ ಮಂತ್ರಿ ಮನಸುಖ ಮಾಂಡವಿಯಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

