ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಜ್ಜನಸಿರಿ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿವೇಕ ಸಜ್ಜನ ಹಾಗೂ ತಮ್ಮ ಪತಿಯ ಕಾರ್ಯಗಳನ್ನು ಪ್ರೋತ್ಸಾಹಿಸಿ ಬೆಂಬಲವಾಗಿ ನಿಂತ ಅವರ ಧರ್ಮಪತ್ನಿ ನಾಗವೇಣಿ ಸಜ್ಜನ ಅವರನ್ನು ಸ್ವಾಮಿ ವಿವೇಕಾನಂದ ಸೇನೆಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿವೇಕ ಸಜ್ಜನ ಅವರು, ಒಂದು ಸೌಹಾರ್ದವು ಪ್ರಗತಿ ಹೊಂದಬೇಕಾದರೆ ಪಾರದರ್ಶಕತೆ, ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕಾರ್ಯ ಮಾಡುವುದರ ಜೊತೆಗೆ ಆಡಳಿತ ಮಂಡಳಿಯ ಸದಸ್ಯರು ಹಾಗೂ ಷೇರುದಾರರ ಅಭಿಪ್ರಾಯವನ್ನು ಆಲಿಸಿ ಒಟ್ಟಾಗಿ ಮುನ್ನಡೆದಾಗ ಮಾತ್ರ ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು.
ಸಿದ್ದಸಿರಿ ಸೌಹಾರ್ದ ಸಹಕಾರಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ್ ಅಣ್ಣಿಗೇರಿ ಮಾತನಾಡಿ, ರಾಜ್ಯದಲ್ಲಿ ೬೫೦೦ ವಿವಿಧ ಸೌಹಾರ್ದ ಸಹಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಜನತೆಯ ವಿಶ್ವಾಸ ಗಳಿಸುವುದರೊಂದಿಗೆ ಗ್ರಾಹಕ ಸ್ನೇಹಿಯಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಅನೇಕ ರಾಷ್ಟ್ರೀಕೃತ, ಖಾಸಗಿ ಬ್ಯಾಂಕುಗಳ ಮಧ್ಯದಲ್ಲಿಯೂ ಕೂಡ ಜನತೆ ಸೌಹಾರ್ದ ಸಹಕಾರಿಗಳಲ್ಲಿ ಹೆಚ್ಚಿನ ವ್ಯವಹಾರಗಳನ್ನು ಮಾಡುತ್ತಿದ್ದು ಸಹಕಾರಿಗಳ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಜನತೆಯ ವಿಶ್ವಾಸಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವ ಜವಾಬ್ದಾರಿ ಎಲ್ಲ ಸಹಕಾರಿಗಳ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಸಿದ್ದಸಿರಿ ಸೌಹಾರ್ದ ಸಹಕಾರಿಯ ಜನರಲ್ ಮ್ಯಾನೇಜರ ದೇವಿ ಹಿರೇಮಠ, ವಲಯ ಅಧಿಕಾರಿ ಈಶ್ವರ ಮುಂಜಣ್ಣಿ, ವ್ಯಾಪಾರಸ್ಥರಾದ ಮಂಜುನಾಥ ಹಿರೇಮಠ, ನಾಗವೇಣಿ ಸಜ್ಜನ, ರಚನಾ ಅಣ್ಣಿಗೇರಿ ಉಪಸ್ಥಿತರಿದ್ದರು.

