ಉದಯರಶ್ಮಿ ದಿನಪತ್ರಿಕೆ.
ಮುದ್ದೇಬಿಹಾಳ: ಮೊಟ್ಟೆ ಕೊಟ್ಟಿಲ್ಲ ಅಂತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಸೋಮುವಾರ ತಾಲೂಕಿನ ಗುಡಿಹಾಳ ಗ್ರಾಮದಲ್ಲಿ ನಡೆದಿದೆ.
ಪ್ರಭಾರ ಮುಖ್ಯ ಶಿಕ್ಷಕನ ವಿರುದ್ಧ ಆರೋಪಗಳ ಸುರಿಮಳೆಗೈದ ವಿದ್ಯಾರ್ಥಿಗಳು, ಶಾಲೆಗೆ ನಿಗದಿತ ಅವಧಿಯಲ್ಲಿ ಬರುವದಿಲ್ಲ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಮಧ್ಯಾಹ್ನ ೧೨ಗಂಟೆಗೆ ಬಂದು ೩ ಗಂಟೆಗೆ ತೆರಳುತ್ತಾರೆ. ಕೇಳಿದರೆ ಮೀಟಿಂಗ್ ಅಂತಾ ಸುಳ್ಳು ಹೇಳುತ್ತಾರೆ. ಅಲ್ಲದೇ ಅತಿಥಿ ಶಿಕ್ಷಕರಿಗೆ ಹೆದರಿಸುತ್ತಾರೆ. ಸರಿಯಾಗಿ ಮೊಟ್ಟೆ ಕೊಡುವದಿಲ್ಲ. ಬಹಳ ಕೇಳಿದರೆ ಮೊಟ್ಟೆ ಬದಲಾಗಿ ಶೇಂಗಾ ಚಿಕ್ಕಿ ಕೊಡುತ್ತಾರೆ ಎಂದೆಲ್ಲ ಆರೋಪಿಸಿದರು.
ವಿದ್ಯಾರ್ಥಿಗಳ ದೂರಿನ ಹಿನ್ನೆಲೆ ಪಾಲಕರು ಶಾಲೆಗೆ ಪ್ರಭಾರ ಮುಖ್ಯ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡರು.
ಈ ಶಾಲೆ ನಮಗೆ ಬೇಡವೇ ಬೇಡ, ಮುಚ್ಚಿ ಬಿಡೋಣ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಈ ಬಗ್ಗೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶಾಂತಗೌಡ ಮಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡಿಲ್ಲ ಎಂಬ ಬಗ್ಗೆ ಹಲವು ಬಾರಿ ದೂರುಗಳು ಬಂದಿದ್ದು ಕೊಡುವಂತೆ ಪ್ರಭಾರ ಮುಖ್ಯಗುರು ಸಂಗಮೇಶ ಶಾಂತಪ್ಪ ನವಲಿ ಅವರಿಗೆ ತಿಳಿಸಿದರೆ, ಕೊಡೋಣ ತೊಗೋರಿ ಎನ್ನುವ ಹಾರಿಕೆ ಉತ್ತರ ನೀಡುತ್ತಾರೆ. ಶಾಲೆಯ ಕೆಲವು ಚಟುವಟಿಕೆಗಳನ್ನು ನಮ್ಮ ಗಮನಕ್ಕೆ ತರದೇ ನಡೆಸುತ್ತಾರೆ. ಶಿಕ್ಷಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

