ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ನಡೆದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ(ಯತ್ನಾಳ) ಭಾಷಣ ಮಾಡುತ್ತಾ ಹಜರತ್ ಟಿಪ್ಪು ಸುಲ್ತಾನ್ ಅವರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ್ದನ್ನು ವಿರೋಧಿಸಿ ಪ್ರತಿಭಟಿಸಿದ ಟಿಪ್ಪು ಸುಲ್ತಾನ ಯೂಥ್ ಕಮಿಟಿ ಮತ್ತು ಮುಸ್ಲಿಂ ಸಮಾಜದ ಮುಖಂಡರು ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ತಹಶೀಲ್ದಾರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಆಲಮೇಲ ಪ.ಪಂ ಅಧ್ಯಕ್ಷ ಮತ್ತು ಕಾಂಗ್ರೇಸ ಮುಖಂಡ ಸಾಧೀಕ ಸುಂಬಡ ಮಾತನಾಡಿ, ವಿಜಯಪೂರ ನಗರ ಶಾಸಕ ಬಸವನಗೌಡ ಪಾಟೀಲ(ಯತ್ನಾಳ) 2012ರಲ್ಲಿ ಆಲಮೇಲದಲ್ಲಿ ನಡೆದ ಟಿಪ್ಪು ಸುಲ್ತಾನ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದರು ಆ ಸಂದರ್ಭದಲ್ಲಿ ಟಿಪ್ಪು ಪ್ರೇಮಿಯಾಗಿದ್ದರು, ಈಗ ಟಿಪ್ಪು ಸುಲ್ತಾನ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಭಾರತ ಹಲವಾರು ಜಾತಿ ಧರ್ಮಗಳಿಂದ ಕೂಡಿದ ದೇಶವಾಗಿದೆ. ನೀವು ಜಿಲ್ಲೆಯ ಹಿರಿಯ ರಾಜಕಾರಣಿಯಾಗಿದ್ದೀರಿ, ನಿಮ್ಮ ಮಾತಿನಲ್ಲಿ ನಾಲಿಗೆ ಮತ್ತು ಮೆದುಳಿಗೆ ಸಂಪರ್ಕವಿರಲಿ. ಮಾನಸಿಕ ರೋಗಿಯಂತೆ ವರ್ತಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್.ಡಿ.ಪಿ.ಐ ಮುಖಂಡ ಅಲಿ ಲಾಲಬಂದ ಮಾತನಾಡಿ, ಶಾಸಕ ಪ್ರಚೋದನಕಾರಿಯಾಗಿ ಮಾತನಾಡುತ್ತಾ ದೇಶದ ಶಾಂತಿಗೆ ಭಂಗ ತರುತ್ತಿದ್ದಾರೆ. ಶೀಘ್ರದಲ್ಲಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಸೈಫನ ಜಮಾದಾರ, ಸೈಫನ ಮುಲ್ಲಾ, ಜಹಾಗೀರ ಅಪಘಾನ, ವಹಾಬ್ ಸುಂಬಡ, ಬಾಬು ಕೊತ್ತಂಬರಿ, ಮಕ್ಸೂದ್ ಚೌಧರಿ, ಜಬ್ಬಾರ ಸುಂಬಡ, ಅಬ್ಬಾಸಲಿ ಕಮಲಾಪೂರ, ಮುರ್ತುಜ್ ಮರ್ತೂರ, ಸಾಧೀಕ ಗೌಂಡಿ, ವಸೀಮ್ ಮಳ್ಳಿ, ಯೂನುಸ ಚೌಧರಿ ಸೇರಿದಂತೆ ಅನೇಕರಿದ್ದರು.
” ಮುಂಬರುವ ದಿನಗಳಲ್ಲಿ ಜಿಲ್ಲೆಯ ಮುಸ್ಲಿಂ ಪರ ಮತ್ತು ಕನ್ನಡ ಪರ ಸಂಘಟನೆಯವರು ಸೇರಿ ಆಲಮೇಲ ಪಟ್ಟಣದಿಂದ ರ್ಯಾಲಿ ಮೂಲಕ ವಿಜಯಪೂರ ನಗರ ಶಾಸಕ ಬಸವನಗೌಡ ಪಾಟೀಲ ಅವರ ಕಚೇರಿಗೆ ಹೋಗಿ ಟಿಪ್ಪು ಸುಲ್ತಾನ ಅವರ ಭಾವಚಿತ್ರವನ್ನು ಕಾಣಿಕೆಯಾಗಿ ನೀಡುತ್ತೇವೆ.”
– ಸಾಧೀಕ ಸುಂಬಡ
ಕಾಂಗ್ರೇಸ್ ಮುಖಂಡ, ಆಲಮೇಲ

