ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ೧೨ ನೇ ಶತಮಾನದ ಬಸವಾದಿ ಶರಣರ ಸಂಸ್ಕ್ರತಿಯನ್ನು ನಾಡಿನ ಜನತೆಗೆ ಮುಟ್ಟಿಸುವಲ್ಲಿ ಶರಣ ಸಾಹಿತ್ಯ ಪರಿಷತ್ತು ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಶರಣ ಸಂಸ್ಕ್ರತಿಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣಕ್ಕೆ ಪೂರಕವಾಗುತ್ತದೆ ಎಂದು ನಂದಿ ಪ್ರಾಥಮಿಕ, ಪ್ರೌಢಶಾಲೆಯ ಮುಖ್ಯಗುರುಮಾತೆ ವೀಣಾ ಪೂಜಾರಿ ಹೇಳಿದರು.
ಪಟ್ಟಣದ ಮಸಬಿನಾಳ ರಸ್ತೆಯಲ್ಲಿ ನಂದಿ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಲಿಂ.ಶಾಂತಾಬಾಯಿ ಮಲ್ಲಪ್ಪ ಕೊಟ್ಲಿ, ಮಲ್ಲಪ್ಪ ಸದಾಶಿವಪ್ಪ ಕೊಟ್ಲಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಹೆಚ್ಚು ಯುವಜನಾಂಗ ಭಾಗವಹಿಸುವ ಮೂಲಕ ಶರಣ ಸಂಸ್ಕ್ರತಿಯನ್ನು ಉಳಿಸಿಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ಯುವಜನಾಂಗ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡರೆ ಅವರ ಜೀವನ ಉಜ್ವಲವಾಗುತ್ತದೆ ಎಂದರು.
ಜನಪದರು ಕಂಡ ಶರಣರು ಕುರಿತು ಕನ್ನಡ ಜಾನಪದ ಪರಿಷತ್ತಿನ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ ಮಾತನಾಡಿ, ಶರಣ ಸಾಹಿತ್ಯ, ಜನಪದ ಸಾಹಿತ್ಯ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಎರಡು ಸಾಹಿತ್ಯಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ಶರಣರ ಅನುಭಾವವನ್ನು ಜನಪದರು ತಮ್ಮ ಕಾಯಕ ಮಾಡುವಾಗ ಶರಣರನ್ನು ಸ್ಮರಿಸಿಕೊಂಡು ಲಾವಣಿ, ಗೀತೆ, ಜೋಗುಳ ಪದ ಸೇರಿದಂತೆ ವಿವಿಧ ರೀತಿಯಲ್ಲಿ ಹಾಡಿರುವದನ್ನು ನೋಡುತ್ತೇವೆ ಎಂದರು.
ಶರಣರದ್ದು ಕಾಯಕ, ದಾಸೋಹ ಸಂಸ್ಕ್ರತಿಯಾದರೆ, ಜನಪದರದ್ದು ಶ್ರಮ ಸಂಸ್ಕ್ರತಿಯಾಗಿದೆ. ಜನಪದರು ತಮ್ಮ ಹೆಸರು ಬಯಸದೇ ಶರಣರ ಸಂಸ್ಕ್ರತಿ ಮೌಲ್ಯಗಳನ್ನು ಮೌಖಿಕವಾಗಿ ನಿರಂತರವಾಗಿ ಸಮಾಜದಲ್ಲಿ ಇಟ್ಟುಕೊಂಡು ಬಂದಿರುವುದನ್ನು ಕಾಣುತ್ತೇವೆ. ಜನಪದ ಸಾಹಿತ್ಯದಲ್ಲಿ ಎಲ್ಲ ಶರಣರ ಸಂದೇಶ, ಜೀವನ ಇರುವುದು ಕಂಡುಬರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರಾಗುವ ಜೊತೆಗೆ ದತ್ತಿ ನಿಧಿ ನೀಡುವ ಮೂಲಕ ಶರಣ ಸಾಹಿತ್ಯ ಪರಿಷತ್ತಿಗೆ ಸಹಕಾರ ನೀಡಬೇಕೆಂದರು.
ಕಾರ್ಯಕ್ರಮದಲ್ಲಿ ದತ್ತಿ ದಾನಿ ಬಸವರಾಜ ಕೊಟ್ಲಿ, ಪ್ರೊ.ಪಿ.ಎಲ್.ಹಿರೇಮಠ, ಆರ್.ಜಿ.ಅಳ್ಳಗಿ, ರವಿಗೌಡ ಚಿಕ್ಕೊಂಡ, ಸಂಗಪ್ಪ ಬಶೆಟ್ಟಿ, ಶ್ರೀಶೈಲ ಶಿರಗುಪ್ಪಿ, ಸಾವಿತ್ರಿ ಕಲ್ಯಾಣಶೆಟ್ಟಿ, ವಿವೇಕಾನಂದ ಕಲ್ಯಾಣಶೆಟ್ಟಿ, ಸಿ.ಎಲ್.ಮುರಾಳ, ಅಶೋಕ ಗುಡದಿನ್ನಿ ಇತರರು ಇದ್ದರು.
ಕದಳಿ ವೇದಿಕೆಯ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು.
ವಿವೇಕಾನಂದ ಕಲ್ಯಾಣಶೆಟ್ಟಿ ಸ್ವಾಗತಿಸಿದರು. ಶಾಂತಾಬಾಯಿ ನಿರೂಪಿಸಿ, ವಂದಿಸಿದರು.

