ಉದಯರಶ್ಮಿ ದಿನಪತ್ರಿಕೆ
– ಮಹಾಂತೇಶ ನೂಲಾನವರ
ಸಿಂದಗಿ: ಅವರೊಬ್ಬ ಸಾಮಾಜಿಕ ಸೇವಾ ಕಾರ್ಯಕರ್ತ, ಸದಾ ಸಮಾಜ ಸೇವೆಗೆ ಕಂಕಣಬದ್ದವಾದ ವ್ಯಕ್ತಿ, ತಾವಿರುವಷ್ಟು ದಿನ ಶಿಕ್ಷಣ, ಧಾರ್ಮಿಕ, ಸಮಾಜ ಸೇವೆ, ರಾಜಕೀಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ದುಡಿದು ಜನತೆಯ ಮನೆ ಮಾತಾದ ವ್ಯಕ್ತಿ ಅವರೇ ಡಾ.ಎಸ್.ಜಿ.ಬಮ್ಮಣ್ಣಿ. ಅಂತವರ ಹೆಸರಿನಿಂದ ನಿರ್ಮಾಣವಾದ ರಸ್ತೆಯ ನಾಮಫಲಕ ಪುರಸಭೆಯ ನಿರ್ಲಕ್ಷದಿಂದ ಮಾಯವಾಗಿರುವುದು ಖೇದಕರ. ಹೀಗಾಗಿ ಪಟ್ಟಣದ ಜನತೆ ಪುರಸಭೆ ಅಧಿಕಾರಿಗಳ ಕಾರ್ಯಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಡಾ.ಸಿದ್ದಲಿಂಗಪ್ಪ ಜಿ. ಬಮ್ಮಣ್ಣಿ ಅವರು ವೃತ್ತಿಯಲ್ಲಿ ಒಬ್ಬ ವೈದ್ಯನಾಗಿ ಅವರು ಮಾಡಿದ ಸಾಮಾಜಿಕ ಸೇವೆ ನಿಜಕ್ಕೂ ಸಿಂದಗಿಯ ಜನತೆ ಇಂದಿಗೂ ಮರೆಯುವಂತಿಲ್ಲ. ಸಿಂದಗಿ ಸಾಂಸ್ಕೃತಿಕ ಕ್ಷೇತ್ರವಾಗಲು ಡಾ. ಎಸ್.ಜಿ.ಬಮ್ಮಣ್ಣಿ ಅವರ ಸೇವೆ ಅನನ್ಯ. ಕನ್ನಡ ನಾಡಿನ ಖ್ಯಾತ ಕವಿಗಳಾದ ನರಸಿಂಹಯ್ಯ, ದೇ.ಜವರೇಗೌಡರು, ಸಿದ್ದಯ್ಯ ಪುರಾಣಿಕ, ಪ್ರೋ ಸಂಗಮ, ಚಂಪಾ ಅವರಂತ ಅನೇಕ ಕವಿಗಳನ್ನು, ಸ್ವಾಮಿಜಿಗಳನ್ನು, ಕಲಾವಿದರನ್ನು ಸಿಂದಗಿಗೆ ಕರೆತಂದು ಸಿಂದಗಿಯ ಜನತೆಗೆ ಪರಿಚಯಿಸಿದವರು.
೧೯೬೮ರಲ್ಲಿ ಸಿಂದಗಿಯಲ್ಲಿ ಬಸವ ಸಮಿತಿಯನ್ನು ಸ್ಥಾಪಿಸಿ ಅದರ ಕಾರ್ಯಧ್ಯಕ್ಷರಾಗಿ ಅದರಡಿಯಲ್ಲಿ ಬಸವ ಪ್ರಜ್ಞೆ, ಕಲ್ಯಾಣ ನಾಡಿನ ಶರಣ ಸಾಹಿತ್ಯ ಸಮ್ಮೇಳನ, ಮೂಡ ನಂಬಿಕೆಗಳನ್ನು ದೂರ ಮಾಡಲು ಜಾಗೃತಿ ಕಾರ್ಯಕ್ರಮ, ಪ್ರತಿ ವರ್ಷ ಬಸವ ಜಯಂತಿ ಮತ್ತು ಅನೇಕ ಶರಣರ ಜಯಂತಿಗಳನ್ನು ಹಾಗೂ ವಚನ ಸುಧೆಗಳಂತ ಅನೇಕ ಕಾರ್ಯಕ್ರಮಗಳನ್ನು ನಾಡಿನ ಸಾಧಕರ ಮುಂದೆ ಮಾಡಿದವರು.
೧೯೬೫-೬೬ರಲ್ಲಿ ಸಿಂದಗಿಯಲ್ಲಿ ನೆಹರು ಯುವ ಕೇಂದ್ರವನ್ನು ಸ್ಥಾಪಿಸಿ ಸಾರ್ವಜನಿಕ ಗ್ರಂಥಾಲಯವನ್ನು ಪ್ರಾರಂಭ ಮಾಡಿದವರು. ಲಾಯನ್ಸ್ ಕ್ಲಬ್‌ನ್ನು ಪ್ರಾರಂಭಿಸಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಅನೇಕ ಉಚಿತ ಆರೋಗ್ಯ ಕಾರ್ಯಕ್ರಮ ಹಮ್ಮಿಕೊಂಡವರು.

೧೯೭೨-೭೩ರಲ್ಲಿ ಬರಗಾಲ ಬಿದ್ದ ಸಂಧರ್ಭದಲ್ಲಿ ಪಟ್ಟಣದ ಊರಿನ ಹಿರಿಯ ಮಠದಲ್ಲಿ ಗದುಗಿನ ಲಿಂ.ಜಗದ್ಗುರು ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಾಗೂ ಮೂರು ಸಾವಿರ ಮಠದ ಆಗಿನ ಪೂಜ್ಯರ ಅಧ್ಯಕ್ಷತೆಯಲ್ಲಿ ಗಂಜಿ ಕೇಂದ್ರವನ್ನು ಸ್ಥಾಪಿಸಿ ಬಡ ಜನತೆಯ ಹಸಿವಿಗೆ ದುಡಿದವರು.
೧೯೮೨ರಲ್ಲಿ ಗೋಕಾಕ ಚಳುವಳಿಯ ಸಂಧರ್ಭದಲ್ಲಿ ಗದುಗಿನ ಲಿಂ.ಜಗದ್ಗುರು ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಸಿಂದಗಿಯ ಪತ್ರಿಕಾ ಭೀಷ್ಮ ದಿ.ರೇ.ಚ.ರೇವಡಿಗಾರ ಅವರ ಜೊತೆಯಾಗಿ ಹೋರಾಟ ಮಾಡಿದವರು. ಊರಿನ ಹಿರಿಯ ಮಠದಲ್ಲಿ ಶ್ರೀಗಳ ಆಶಯದಂತೆ ವಿದ್ಯಾರಣ್ಯ ವಾಚನಾಲಯ ಸ್ಥಾಪಿಸಿ ಅನೇಕರಿಗೆ ಓದುವ ಹವ್ಯಾಸವನ್ನು ಬೆಳೆಸಿದವರು. ಕನ್ನಡ ಬಳಗದ ಹುಟ್ಟಿಗೆ ಕಾರಣರಾದವರು ಡಾ.ಬಮ್ಮಣ್ಣಿ.
ಸಾಮಾಜಿಕ ಸೇವೆಯೊಂದಿಗೆ ಪುರಸಭೆಯ ಅಧ್ಯಕ್ಷರಾಗಿ ಸಿಂದಗಿ ಪಟ್ಟಣದ ಜನತೆಯ ಸೇವೆ ಮಾಡಿದಂತ ಕೀರ್ತಿ ಡಾ.ಎಸ್.ಜಿ.ಬಮ್ಮಣ್ಣಿ ಅವರಿಗೆ ಸಲ್ಲುತ್ತದೆ. ಸಿಂದಗಿ ಶೈಕ್ಷಣಿಕವಾಗಿ ಹೆಮ್ಮರವಾಗಬೇಕು ಎಂಬ ಸಾರಂಗಮಠದ ಲಿಂ.ಚೆನ್ನವೀರ ಮಹಾಸ್ವಾಮಿಗಳ ಕನಸಿಗೆ ಅನೇಕರೊಂದಿಗೆ ಬಲವಾಗಿ ನಿಂತು ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಬೆಳೆಯುವಲ್ಲಿ ಶ್ರೀಗಳೊಂದಿಗೆ ಸದಾ ಸಹಕರಿಸುತ್ತಾ ಸಂಸ್ಥೆಯನ್ನು ಬೆಳೆಸಿ ಪ್ರಾರಂಭದ ಹಂತದಲ್ಲಿ ಕಾರ್ಯಾಧ್ಯಕ್ಷರಾಗಿ ದುಡಿದವರು.
ಇಂತಹ ಮಹಾನ ಚೇತನ ಇರುವಷ್ಟು ದಿನ ಸಮಾಜದ ಬೆಳವಣಿಗೆಗೆ ಕಂಕಣ ಬದ್ದರಾದವರು. ಅವರು ವೈದ್ಯರಾಗಿ ಬಹುಪಾಲು ಉಚಿತ ಆರೋಗ್ಯ ಸೇವೆಯನ್ನೆ ಮಾಡಿದರು.
ಅವರು ೧೯೮೯ರಲ್ಲಿ ನಿಧನದ ನಂತರ ಸಿಂದಗಿಯ ಅನೇಕ ಯುವಕರು ಸೇರಿ ಅವರನ್ನು ಸ್ಮರಿಸುವ ಉದ್ದೇಶದಿಂದ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲು ಸಂಗಮ ಹೊಟೇಲ ಬಲ ಭಾಗದ ರಸ್ತೆಗೆ ಅವರ ಹೆಸರನ್ನು ಪುರಸಭೆಯಲ್ಲಿ ೧೯೮೯ರ ಸಮಯದಲ್ಲಿಯೇ ಅಧಿಕೃತವಾಗಿ ಠರಾವು ಪಾಸ ಮಾಡಿ ಹೆಸರಿಟ್ಟು ನಾಮ ಫಲಕವನ್ನು ಅಳವಡಿಸಿದ್ದರು. ಆದರೆ ಅನೇಕ ವರ್ಷಗಳಿಂದ ಆ ನಾಮಫಲಕ ಕಳೆದು ಹೋಗಿದ್ದರೂ ಪುರಸಭೆ ಯಾವುದೇ ಕ್ರಮ ಕೈಗೊಳ್ಳದಿರುವುದು ನಿಜಕ್ಕೂ ಬೇಸರದ ಸಂಗತಿ.
ಅವರ ಕಾರ್ಯಗಳು, ಹೋರಾಟ, ಸೃಜನಶೀಲತೆ ಮುಂದಿನ ಯುವ ಜನಾಂಗಕ್ಕೆ ಪ್ರೇರಣೆಯಾಗಲು ಅವರ ಹೆಸರು ಉಳಿಯಲೇಬೇಕು. ಹೀಗಾಗಿ ಅವರ ಹೆಸರಿನ ರಸ್ತೆಯ ನಾಮಫಲಕವನ್ನು ಮರು ಸ್ಥಾಪಿಸುವ ಕಾರ್ಯವಾಗಬೇಕು ಎನ್ನುವ ಅಭಿಲಾಷೆ ಸಿಂದಗಿಯ ಹಿರಿಯ ನಾಗರಿಕರದ್ದಾಗಿದೆ.
“ರಸ್ತೆ ಅವರ ಹೆಸರಿನಲ್ಲಿ ಠರಾವು ಪಾಸ್ ಆಗಿರುವ ಬಗ್ಗೆ ನನಗೆ ತಿಳಿದಿಲ್ಲ. ನಾನು ಬಂದಾಗಿನಿಂದಲೂ ಅಲ್ಲಿ ಯಾವುದೇ ನಾಮಫಲಕ ಇರಲಿಲ್ಲ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಎಲ್ಲವನ್ನು ಪರಿಶೀಲನೆ ಮಾಡಿ ರಸ್ತೆಗೆ ನಾಮಫಲಕ ಇತ್ತೋ ಇಲ್ಲವೋ ಎನ್ನುವ ಠರಾವು ನೋಡುತ್ತೇನೆ.
– ಸುರೇಶ ನಾಯಕ
ಪುರಸಭೆ ಮುಖ್ಯಾಧಿಕಾರಿ, ಸಿಂದಗಿ
“ಡಾ.ಬಮ್ಮಣ್ಣಿ ಸಿಂದಗಿ ಪಟ್ಟಣದ ಜನತೆಗೆ ಶಿಕ್ಷಣ, ಆರೋಗ್ಯ, ಧಾರ್ಮಿಕ ಹೀಗೆ ಅನೇಕ ಸಾಮಾಜಿಕ ಸೇವೆ ಮಾಡಿ ಮಡಿದವರು. ಅವರ ಹೆಸರಿನ ರಸ್ತೆಗೆ ಇಂದು ನಾಮಫಲಕ ಇಲ್ಲದಿರುವುದು ನಿಜಕ್ಕೂ ಒಂದು ದೊಡ್ಡ ಅಪಮಾನ. ಪುರಸಭೆ ಮುಂದಿನ ದಿನಗಳಲ್ಲಿ ನಾಮಫಲಕವನ್ನು ಅಳವಡಿಸಿ ಅವರಿಗೆ ಗೌರವ ಸಲ್ಲಿಸಬೇಕು ಎಂದು ಸಾರ್ವಜನಿಕರ ಪರವಾಗಿ ನಾನು ವಿನಂತಿಸುತ್ತೇನೆ.”
– ಮಹಾನಂದ ಬಮ್ಮಣ್ಣಿ
ಕೆಡಿಪಿ ಸದಸ್ಯೆ

