ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಶನಿವಾರ ಇಕೋ ಕ್ಲಬ್ ಅಡಿಯಲ್ಲಿ ಗೋ ಗ್ರೀನ್ ಕಾರ್ಯಕ್ರಮ ಹಾಗೂ ಪಶುಪಾಲನೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಂತರರಾಷ್ಟ್ರೀಯ ರೇಬಿಸ್ ದಿನಾಚರಣೆ ಅಂಗವಾಗಿ ರೇಬಿಸ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯಕ ಅನಿಲಕುಮಾರ ರಾಠೋಡ ಪ್ರಾಸ್ತಾವಿಕ ಮಾತನಾಡಿ, ಲಸಿಕೆ ಕಂಡುಹಿಡಿದು ಅನೇಕ ಜೀವಗಳನ್ನು ಉಳಿಸಿದ ಲೂಯಿಸ್ ಫ್ಯಾಶ್ಚರನಂತೆ ಮಕ್ಕಳು ಸಾಧನೆ ಮಾಡುವಂತೆ ಪ್ರೇರೇಪಿಸಿದರು.
ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಾನಂದ ಮೇಟಿ, ತಾಲೂಕಿನ ಮುಖ್ಯ ಪಶುವೈದ್ಯಧಿಕಾರಿ ಸುರೇಶ ಭಜಂತ್ರಿ ಪಶುಗಳಿಂದ ಹರಡುವ ರೋಗಗಳು, ಅವುಗಳ ಲಕ್ಷಣಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ರೇಬಿಸ್ ಲಸಿಕೆ ಕಂಡು ಹಿಡಿದಂತಹ ವಿಜ್ಞಾನಿ ಲೂಯಿಸ್ ಫ್ಯಾಶ್ಚರ ಹಾಗೂ ರೇಬಿಸ್ ಕುರಿತು ಬಸವರಾಜ ಸಜ್ಜನ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಗೋಗ್ರೀನ್ ಕಾರ್ಯಕ್ರಮದಲ್ಲಿ ಮಕ್ಕಳಿಂದ ೨೫ ವರ್ಷಗಳಿಗಿಂತ ಹಳೆಯದಾದ ಮರಗಳ ಬೀಜಗಳ ತರಿಸಿ, ಸಾವಯವ ಗೊಬ್ಬರ ಹಾಗೂ ಮಣ್ಣಿನಿಂದ ಬೀಜದ ಉಂಡೆ ತಯಾರಿಸಿ ತಮ್ಮ ನೆರೆಹೊರೆಯಲ್ಲಿ ಅಥವಾ ರಸ್ತೆಗಳ ಪಕ್ಕದಲ್ಲಿ ಹರಡುವ ಪ್ರಕೃತಿಯನ್ನು ಹಸಿರಾಗಿಸುವಂತೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

