ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲೂಕಿನ ಕಗ್ಗೋಡ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ಸೆ.೨೮ರಂದು ಶನಿವಾರ ವಿಶ್ವ ರೇಬೀಸ್ ದಿನಾಚರಣೆ ಆಚರಿಸಲಾಯಿತು.
ಈ ವೇಳೆ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ. ಬಿ.ಎಸ್.ಕನಮಡಿ ಮಾತನಾಡಿ, ನಾಯಿಯು ಸ್ನೇಹಮಯಿ ಮತ್ತು ಆಜ್ಞಾಪಾಲಕ ಪ್ರಾಣಿಯಾಗಿದ್ದರೂ ಸಹ ಅದಕ್ಕೆ ರೇಬೀಸ್ ರೋಗ ತಗುಲಿದರೆ ಅದರಿಂದ ಮಾನವನ ಜೀವಕ್ಕೆ ಅಪಾಯವಿದೆ. ಕಾರಣ ನಾಯಿ ಸಾಕುವವರು ಮತ್ತು ಸಾರ್ವಜನಿಕರು ಈ ಕುರಿತು ಎಚ್ಚರಿಕೆ ವಹಿಸುವುದು ಅಗತ್ಯ ಎಂದರು.
ಈ ವರ್ಷ ಇಲಾಖೆ ವತಿಯಿಂದ ಗ್ರಾಮೀಣ ಪ್ರದೇಶದ ಪ್ರತಿ ಹಳ್ಳಿಗಳಲ್ಲಿ ನಾಯಿಗಳಿಗೆ ಉಚಿತವಾಗಿ ರೇಬೀಸ್ ಲಸಿಕೆ ಹಾಕಲಾಗಿದೆ. ಅಲ್ಲದೇ ಶಾಲಾ ಮಕ್ಕಳಿಗೆ ರೇಬೀಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಂದು ಡಾ.ಕನಮಡಿ ವಿವರಿಸಿದರು.
ಕುಮಟಗಿ ಗ್ರಾಪಂ ಅಧ್ಯಕ್ಷ ರಮೇಶ ಸಜ್ಜನ, ಹಿರಿಯ ಪಶುವೈದ್ಯಾಧಿಕಾರಿ ಡಾ.ಬಾಳಾಸಾಹೇಬ ಬಂಡಿ ಹಾಗೂ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರಿದ್ದರು.
ಈ ಸಂದರ್ಭದಲ್ಲಿ ಸುಮಾರು ೩೫ ನಾಯಿಗಳಿಗೆ ಉಚಿತವಾಗಿ ರೇಬೀಸ್ ಲಸಿಕೆ ಹಾಕಲಾಯಿತು.

