ಇವಣಗಿ ಗ್ರಾಮದಲ್ಲಿ ತಾಲೂಕು ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದ ಆರಾಧ್ಯದೈವ ಲಕ್ಕಮ್ಮದೇವಿ ದೇವಸ್ಥಾನ ಆವರಣದಲ್ಲಿ ಗುರುವಾರ ಸಂಜೆ ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆ, ಸಿದ್ಧತೆ ಕುರಿತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ, ಗ್ರಾಮದ ಮುಖಂಡರ, ಗ್ರಾಮಸ್ಥರ ಪೂರ್ವಭಾವಿ ಸಭೆ ಜರುಗಿತು. ಸಭೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನವೆಂಬರ್ ೧೩ ರಂದು ನಡೆಸಲು ತೀರ್ಮಾನಿಸಲಾಯಿತು.
ಸಭೆಯ ಉದ್ದೇಶಿಸಿ ಗ್ರಾಮದ ವಕೀಲ ಚಂದ್ರಶೇಖರ ಸುಭಾನಪ್ಪನವರ ಮಾತನಾಡಿ, ಬರುವ ನವೆಂಬರ್ ೧೩ ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ನಮ್ಮ ಗ್ರಾಮದಲ್ಲಿ ನಡೆಯುತ್ತಿರುವದು ಈ ಭಾಗದ ಜನರಿಗೆ ತುಂಬಾ ಸಂತಸ ಉಂಟು ಮಾಡಿದೆ. ಈ ಸಮ್ಮೇಳನದ ಯಶಸ್ವಿಗೆ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸಹಕಾರ ನೀಡುತ್ತಾರೆ. ಕನ್ನಡ ಭುವನೇಶ್ವರಿ ತೇರು ನಮ್ಮ ಗ್ರಾಮದಲ್ಲಿ ಎಳೆದರೆ ಅದು ನಮ್ಮ ಗ್ರಾಮದ ಆರಾಧ್ಯದೈವ ಲಕ್ಕಮ್ಮದೇವಿಯ ತೇರು ಎಳೆದಂತೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಿರುವುದು ಔಚಿತ್ಯಪೂರ್ಣವಾಗಿದೆ. ಈ ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆ ಪಾರದರ್ಶಕವಾಗಿ ಮಾಡುವ ಜೊತೆಗೆ ಸಮ್ಮೇಳನವನ್ನು ತುಂಬಾ ಯಶಸ್ವಿಗೆ ಎಲ್ಲರೂ ತುಂಬಾ ಸಹಕಾರ ನೀಡುವದು ತುಂಬಾ ಅಗತ್ಯವಿದೆ ಎಂದರು.
ಕನ್ನಡ ಜಾನಪದ ಪರಿಷತ್ತಿನ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ ಮಾತನಾಡಿ, ತಾಲೂಕು ಸಮ್ಮೇಳನವು ಇವಣಗಿ ಗ್ರಾಮದಲ್ಲಿ ನಡೆಯುತ್ತಿರುವುದು ಒಂದು ಸೌಭಾಗ್ಯವೇ ಸರಿ. ಇದನ್ನು ಎಲ್ಲರೂ ಸೇರಿಕೊಂಡು ಅರ್ಥಪೂರ್ಣವಾಗಿ ಮಾಡುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸುವ ಅಗತ್ಯವಿದೆ ಎಂದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಮಾತನಾಡಿ, ಸಮ್ಮೇಳನದ ಯಶಸ್ವಿಗೆ ನಮ್ಮ ಎಲ್ಲ ಸರ್ಕಾರಿ ನೌಕರ ಬಾಂಧವರು ತನು-ಮನ-ಧನದಿಂದ ಸಹಕಾರ ನೀಡುತ್ತಾರೆ ಎಂದರು.
ಸಭೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಡೋಣೂರ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ವಿ.ಬಿ.ಮರ್ತುರ, ಮುಖಂಡರಾದ ಶಿವಯ್ಯ ಹಿರೇಮಠ, ಬಸವರಾಜ ಕಳ್ಳಿಗುಡ್ಡ, ನಿಂಗಣ್ಣ ಬಾಗೇವಾಡಿ, ಮಲ್ಲಿಕಾರ್ಜುನ ಶೇಬಗೊಂಡ ಇತರರು ಮಾತನಾಡಿದರು.
ಸಭೆಯಲ್ಲಿ ತಾಲೂಕು ಕಸಾಪ ಪದಾಧಿಕಾರಿಗಳಾದ ಯಮನಪ್ಪ ಮಿಣಜಗಿ, ಕೊಟ್ರೇಶ ಹೆಗ್ಡಾಳ, ಬಸವರಾಜ ಮೇಟಿ, ಬಸವರಾಜ ಚಿಂಚೋಳ್ಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಗನಗೌಡ ಬಿರಾದಾರ, ಲಾಯಪ್ಪ ಮುತ್ಯಾ, ಎಸ್.ಐ.ಬಿರಾದಾರ, ಶರಣು ದಳವಾಯಿ, ಎಸ್.ಕೆ.ಸೋಮನಕಟ್ಟಿ, ಸುಭಾಸ ಹಡಪದ, ಸಿದ್ದಪ್ಪ ಅವಜಿ, ಶ್ರೀಶೈಲ ಶಿರಗುಪ್ಪಿ, ರಮೇಶ ಕನಸೆ, ಶಾಂತಾ ಪಾಟೀಲ, ಪುಷ್ಪಾ ಕುಲಕರ್ಣಿ, ನಿರ್ಮಲಾ ಅಂಗಡಿ, ಚಂದ್ರು ಹದಿಮೂರ, ಸಿದ್ದು ಬಾಗೇವಾಡಿ ಇತರರು ಇದ್ದರು.
ಕಾಳಪ್ಪ ಬಡಿಗೇರ ಪ್ರಾರ್ಥಿಸಿದರು. ಶಿವು ಮಡಿಕೇಶ್ವರ ಸ್ವಾಗತಿಸಿ,ನಿರೂಪಿಸಿದರು. ಎಚ್.ಬಿ.ಬಾರಿಕಾಯಿ ವಂದಿಸಿದರು.

