ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಿಕ್ಷಕರೊಬ್ಬನನ್ನು ಅಪ್ಪಿ, ನೀವು ನಮ್ಮ ಶಾಲೆ ಬಿಟ್ಟು ಹೋಗಬೇಡಿ ಎಂದು ಅತ್ತು ಗೋಗರೆಯುತ್ತಿದ್ದರು. ಗುರುವಾರ ಬೆಳಿಗ್ಗೆಯಿಂದಲೂ ಸಂಜೆ ಅವರು ಶಾಲೆಯ ಆವರಣ ಬಿಟ್ಟು ಕದಲಲು ವಿದ್ಯಾರ್ಥಿಗಳು ಬಿಡಲಿಲ್ಲ, ವಿದ್ಯಾರ್ಥಿಗಳ ಭಾವುಕ ಕ್ಷಣಗಳಿಗೆ ಹಲವಾರು ಶಿಕ್ಷಕರ ಕಣ್ಣೀರಿನ ಹನಿಗಳೇ ಸಾಕ್ಷಿಗಳಾದವು.
ಹೌದು, ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ಆಲಮಟ್ಟಿ ಆರ್.ಎಸ್. ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ.
ಅಲ್ಲಿಯ ವಿಜ್ಞಾನ ಶಿಕ್ಷಕ ರಾಘವೇಂದ್ರ ವಂದಗನೂರ ಈಚೆಗೆ ವರ್ಗಾವಣೆಗೆ ಕೌನ್ಸಲಿಂಗ್ ನಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಹಿರೇಮಾಗಿ ಶಾಲೆಗೆ ಆಯ್ಕೆ ಮಾಡಿಕೊಂಡಿದ್ದರು. ಗುರುವಾರ, ಅವರು ಶಾಲೆಯಿಂದ ರಿಲೀವ್ ಆಗಿ ಇಂದು ಬೀಳ್ಕೊಡುವಾಗ ವಿದ್ಯಾರ್ಥಿಗಳ ರೋಧನ, ಆಪ್ತತೆ ನೆರೆದ ಎಲ್ಲರ ಮನಸ್ಸು ಭಾವುಕಗಳಾದವು.
ಅವರು ಕಳೆದ ಮೂರು ವರ್ಷಗಳಿಂದ ವಿಜ್ಞಾನ ಶಿಕ್ಷಕರಾಗಿ ವಿಶಿಷ್ಟವಾಗಿ ಸೇವೆ ಸಲ್ಲಿಸಿದ್ದ ರಾಘವೇಂದ್ರ ವಂದಗನೂರ ಅವರ ಸೇವೆ ಅನನ್ಯ. ಅವರು ಹೋಗಬಾರದು ಎಂಬುದೇ ಅಲ್ಲಿ ನೆರೆದಿದ್ದ ಶಾಲೆಯ ೨೦೦ ಕ್ಕೂ ಅಧಿಕ ಮಕ್ಕಳ ಮುಗ್ಧ ಭಾವನೆಗಳು ಶಿಕ್ಷಕರ ಸೇವೆ ಸ್ಮರಿಸಿತ್ತು.
ಸುಮಾರು ೧೦೦ ಕ್ಕೂ ಅಧಿಕ ವಿದ್ಯಾರ್ಥಿನಿಯರು- ವಿದ್ಯಾರ್ಥಿಗಳಂತೂ ಅವರಿಗೆ ಹೊರಡಲು ಅಡ್ಡಿಯಾದರು. ಅಪ್ಪಿಕೊಂಡು ಅಳುತ್ತಿರುವ ದೃಶ್ಯ ಕಂಡು ಬಂತು. ಅವರನ್ನು ಬೀಳ್ಕೊಡಲು ಬಂದಿದ್ದ ಸುತ್ತಲಿನ ನಾನಾ ಶಾಲೆಯ ಶಿಕ್ಷಕರು ಈ ದೃಶ್ಯ ನೋಡಿ ಅವರ ಕಣ್ಣಾಲಿಗಳು ಕೂಡಾ ಒದ್ದೆಯಾಗಿದ್ದವು. ಬಹುತೇಕ ವಿದ್ಯಾರ್ಥಿಗಳು ಶಿಕ್ಷಕ ರಾಘವೇಂದ್ರ ಅವರ ಬೋಧನಾ ಶೈಲಿ, ಎಲ್ಲರನ್ನು ಪ್ರೋತ್ಸಾಹಿಸುವ ರೀತಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ಆಸಕ್ತಿ, ಎಲ್ಲರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮ ಸಂಘಟಿಸುವುದು ಸೇರಿ ನಾನಾ ಕಾರ್ಯಗಳ ಕಾರಣ ಮಕ್ಕಳಲ್ಲಿ ರಾಘವೇಂದ್ರ ಅವರ ಬಗ್ಗೆ ಅವ್ಯಕ್ತ ಪ್ರೀತಿ ಇತ್ತು. ಅದು ಗುರುವಾರ ವ್ಯಕ್ತವಾಯಿತು.
ಸ್ವತಃ ಶಾಲೆಯ ಮುಖ್ಯ ಶಿಕ್ಷಕ ಬಿ.ಡಿ. ಚಲವಾದಿ ಅವರ ಆದಿಯಾಗಿ ಶಾಲೆಯ ಬಹುತೇಕ ಶಿಕ್ಷಕರು, ಶಿಕ್ಷಕಿಯರು, ಬಿಸಿಯೂಟ ಅಡುಗೆ ಸಿಬ್ಬಂದಿ, ನೌಕರರ ಸಂಘಟನೆಯ ಸಂಘಟನಾ ಕಾರ್ಯದರ್ಶಿ ಎಂ.ಎಂ. ಮುಲ್ಲಾ ಸೇರಿದಂತೆ ಎಲ್ಲರೂ ಭಾವುಕರಾಗಿ ಅಳುತ್ತಿದ್ದ ದೃಶ್ಯ ಕಂಡು ಬಂತು.
ಎಂ.ಎಂ. ಮುಲ್ಲಾ, ಸಲೀಂ ದಡೆದ, ಆರ್.ಎಸ್. ಗಂಟಿ, ಎಲ್.ಸಿ. ಚಲವಾದಿ ಮತ್ತೀತರರು ಮಾತನಾಡಿ, ರಾಘವೇಂಧ್ರ ವಂದಗನೂರ ಅವರ ಕಾರ್ಯಶೈಲಿ, ಬುದ್ಧಿಮತ್ತೆ, ಕಾರ್ಯಕ್ರಮ ಸಂಘಟನೆ, ಸಹಾಯ ಮತ್ತೀತರ ವಿಷಯಗಳನ್ನು ವಿವರಿಸಿದರು.
ಹತ್ತಾರು ಶಾಲೆಯ ವತಿಯಿಂದ ಹಲವರು ರಾಘವೇಂದ್ರ ಅವರನ್ನು ಸನ್ಮಾನಿಸಿದರು. ಬಿ.ಎಸ್. ಯರವಿನತೆಲಿಮಠ, ಪಿ.ಎಲ್. ಕುಲಕರ್ಣಿ, ಬಿರಾದಾರ, ಆರ್.ಜಿ. ಬುಲಾತಿ, ಹನುಮಂತಪ್ಪ, ಎಂ.ಎಸ್. ಗೋಡಿಹಾಳ ಮತ್ತೀತರರು ಇದ್ದರು.

