ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕುಡಿಯುವ ನೀರಿನ ಅಸಮರ್ಪಕ ಪೂರೈಕೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಕೆರೂಟಗಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಕಾಂತು ರಾಠೋಡಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಕೆರೂಟಗಿ ಗ್ರಾಮ ಪಂಚಾಯಿತಿಗೆ ಆಗಮಿಸಿದ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ತಾಂಡಾದ ನೀರು ಪೂರೈಕೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಅಸಮಾಧಾನ ವ್ಯಕ್ರಪಡಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ವಕ್ತಾರ ಚನ್ನಪ್ಪಗೌಡ ಬಿರಾದಾರ ಮಾತನಾಡಿ, ಗ್ರಾಮದ ತಾಂಡಾದಲ್ಲಿ ನೀರು ಇದ್ದರೂ ವಾಟರ್‌ಮ್ಯಾನ್ ಇಲ್ಲದ ಕಾರಣ ಸಮಯಕ್ಕೆ ಸರಿಯಾಗಿ ನೀರು ಪೂರೈಸುತ್ತಿಲ್ಲ. ಇನ್ನೂ ಗ್ರಾಮ ಪಂಚಾಯಿತಿಯ ಪಿಡಿಓ ಹಾಗೂ ಕಾರ್ಯದರ್ಶಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಇದರಿಂದ ತಾಂಡಾದ ಚರಂಡಿಗಳು ಸರಿಪಡಿಸದೇ ಮಲೀನವಾಗಿ ಗಬ್ಬು ನಾರುತ್ತಿವೆ. ಜೊತೆಗೆ ಪ್ರಾಥಮಿಕ ಶಾಲೆಯ ಕಟ್ಟಡ ಕಾಮಗಾರಿಗಳಿಗೆ ಕೇಳುವವರೇ ಇಲ್ಲದೇ ಕಳಪೆಯಾಗಿ ತೋರುತ್ತಿವೆ. ಈ ಬಗ್ಗೆ ದೂರವಾಣಿ ಮೂಲಕ ಅಧ್ಯಕ್ಷರಿಗೆ ಹೇಳಿದರೂ ಸ್ಪಂದನೆಯಿಲ್ಲ. ಸಂಘಟನೆ ಹಾಗೂ ಗ್ರಾಮಸ್ಥರ ಮನವಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೇ ಇದ್ದಲ್ಲಿ ಪಂಚಾಯಿತಿ ಕಾರ್ಯಾಲಯದ ಮುಂದೆ ಉಗ್ರಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿ, ಮನವಿ ಸಲ್ಲಿಸಿದರು.
ಸಂಘಟನೆಯ ರಮೇಶ ರಾಠೋಡ, ಬಸವರಾಜ ಇಂಗಳಗಿ, ಸಂತೋಷ ಅಂಗಡಿ, ಸುಭಾಸ ಚಟ್ಟರಕಿ, ಶಿವಕಾಂತ ರಾಠೋಡ, ಬಾಬು ಚವ್ಹಾಣ, ಅಪ್ಪು ಚಟ್ಟರಕಿ, ನಿಂಗರಾಜ ಚವ್ಹಾಣ, ಬಾಬು ರಾಠೋಡ, ದೇವಸಿಂಗ್ ರಾಠೋಡ, ಮೋಹನ ಚವ್ಹಾಣ, ಮಲ್ಲನಗೌಡ ಬಿರಾದಾರ ಇದ್ದರು.

