ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಇಂದಿನ ಮಕ್ಕಳು ಭವಿಷ್ಯದ ಪ್ರಜೆಗಳು ಆದ್ದರಿಂದ ಅಂಗನವಾಡಿ ಶಿಕ್ಷಣ ಮಕ್ಕಳಿಗೆ ಅಗತ್ಯ ಹಾಗೂ ಅಡಿಪಾಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕೆ.ಕೆ.ಚವ್ಹಾಣ ಹೇಳಿದರು.
ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಗುರುವಾರ ಜರುಗಿದ ರಾಷ್ಟ್ರೀಯ ಪೋಷಣಾ ಅಭಿಯಾನದಲ್ಲಿ ಪಾಲ್ಗೊಂಡು ಪೋಷಣಾ ಮಾಸಾಚರಣೆ ಮಹತ್ವವನ್ನು ಉದ್ದೇಶಿಸಿ ಮಾತನಾಡಿದರು.
ಮಕ್ಕಳಲ್ಲಿ ತಾರತಮ್ಯ ತೋರದೆ ಹೆಣ್ಣುಮಕ್ಕಳ ರಕ್ಷಣೆ, ಶಿಕ್ಷಣಕ್ಕೆ ಒತ್ತು ನೀಡಲು ಜೊತೆಗೆ ತಾಯಿ ಮತ್ತು ಮಗುವಿನ ಆರೋಗ್ಯದ ಕುರಿತು ಕಾಳಜಿ ವಹಿಸಲು ಅವರು ಕರೆ ನೀಡಿದರು.
ಸಿಂದಗಿ ತಾಲ್ಲೂಕು ಸಿಡಿಪಿಓ ಎಸ್.ಎನ್.ಹಿರೇಮಠ ಮಾತನಾಡಿ, ಮಹಿಳೆ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗದಿರಲು ಸಲಹೆ ನೀಡಿದರು.
ಪೋಷಣಾ ಮಾಹ ಅಂಗವಾಗಿ ಗರ್ಭಿಣಿಯರಿಗೆ ಸೀಮಂತ ಕಾರ್ಯ ಕೈಗೊಂಡು ಸಸಿ ವಿತರಿಸಿ ಮಕ್ಕಳಂತೆ ಪೋಷಿಸಲು ಹೇಳಲಾಯಿತು. ಮಕ್ಕಳಿಗೆ ಅನ್ನಪ್ರಾಶನ, ಹೆಣ್ಣುಮಕ್ಕಳ ಜನ್ಮದಿನಾಚರಣೆ, ಹಾಗೂ ಹಳ್ಳಿಜೀವನ ಸೊಗಡನ್ನು ಪ್ರದರ್ಶಿಸಲಾಯಿತು.
ಪೋಷಣಾ ಅಭಿಯಾನ ತಾಲ್ಲೂಕು ಸಂಯೋಜಕ ಪ್ರಮೋದ ಬೆಳಗಾವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೈನಾಬಿ ಬ್ಯಾಕೋಡ, ಸದಸ್ಯರಾದ ರಾಜಶೇಖರ ಛಾಯಾಗೋಳ, ಮಲ್ಲಪ್ಪ ಪಟ್ಟಣ, ಲಕ್ಷ್ಮೀ ಪಾಟೀಲ, ಉಜ್ವಲ ಸಂಸ್ಥೆ ಸಂಯೋಜಕ ಸಾಗರ ಘಾಟಗೆ, ರೈತಸಂಘದ ತಾಲ್ಲೂಕು ಅಧ್ಯಕ್ಷ ಈರಣ್ಣ ಕುಳೇಕುಮಟಗಿ, ಹಿರಿಯ ಮೇಲ್ವಿಚಾರಕಿಯರಾದ ಸುಧಾ ಭಾವಿಕಟ್ಟಿ, ಎಸ್.ಎಚ್.ಕಾಗಲ್, ಎಸ್.ಆರ್.ನಾಯಿಕ್, ಕಾರ್ಯಕರ್ತೆ ಪ್ರೇಮಾ ಕುಳೇಕುಮಟಗಿ, ಬಾಪುಗೌಡ ನಂದಗೌಡರ, ಶಶಿಕಾಂತ ಸುಂಗಠಾಣ ಗ್ರಾಮದ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ತಾಯಂದಿರು ಇದ್ದರು.

