ಗ್ರಾಮ ಆಡಳಿತ ಲೆಕ್ಕಾಧಿಕಾರಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದ ರೈತ ಮುಖಂಡರು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗ್ರಾಮ ಲೆಕ್ಕಾಧಿಕಾರಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಿ ರಾಜ್ಯದಲ್ಲಿ ೫೦ ಕ್ಕೂ ಹೆಚ್ಚು ತಲಾಟಿಗಳು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಸಾರ್ವಜನಿಕರಿಗೆ, ರೈತರಿಗೆ ವಿವಿಧ ಸೇವೆಗಳನ್ನು ಒದಗಿಸಬೇಕಾಗಿರುವ ಗ್ರಾಮ ಆಡಳಿತ ಲೆಕ್ಕಾಧಿಕಾರಿಗಳು ಹಾಗೂ ಸಹಾಯಕ ಸಲಹೆಗಾರರಿಗೆ ಕೆಲಸ ಹೆಚ್ಚಾಗಿ ಮಾನಸಿಕವಾಗಿ ನೊಂದುಕೊಳ್ಳುವುದು ಮಾತ್ರವಲ್ಲದೇ ಕೆಲಸದ ಒತ್ತಡದಿಂದ ಸಾರ್ವಜನಿಕರಿಗೆ ಸಿಗದೇ ಜನಸಾಮಾನ್ಯರಿಂದ ಹಿಡಿ ಶಾಪ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆರೋಪಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಕಂದಾಯ ಸಚಿವ ಕೃಷ್ಣ ಭೈರೆಗೌಡ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು, ಸರಕಾರ ವಿವಿಧ ಇಲಾಖೆಗಳ ನಿರ್ಮಾಣಕ್ಕಾಗಿ ಸಾವಿರಾರು ಕೊಟಿ ವಿನಾಃ ಹರಣ ಮಾಡಿ, ಯಾವುದೇ ಕೆಲಸಕ್ಕೆ ಬರದ ಕಟ್ಟಡ ಸೇರಿದಂತೆ ಬೇಕಾಬಿಟ್ಟಿ ಯೋಜನೆಗಳಿಗೆ ಹಣ ವ್ಯಯ ಮಾಡುತ್ತಿದೆ. ಆದರೆ ಇಂದು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸ್ವಂತ ಸೂರು ಇಲ್ಲದೇ ಹಳ್ಳಿ ಹಳ್ಳಿ ತಿರುಗಾಡಿ ಕೊನೆಗೆ ತಾಲೂಕಾ ಕಛೇರಿಗೆ ಅಲೆದಾಡಿ ಕೆಲಸ ಮುಗಿಸಬೇಕಾದ ಅನಿವಾರ್ಯತೆ ಇದೆ. ಅವರಿಗೆ ಕೆಲಸದ ಒತ್ತಡ ಕಡಿಮೆ ಮಾಡಬೇಕು, ಜೊತೆಗೆ ಎಲ್ಲಾ ಸಾಚಾಗಳಲ್ಲಿ ಕಟ್ಟಡದ ವ್ಯವಸ್ಥೆ ಮಾಡಿ, ಅವಶ್ಯವಿರುವ ಕಂಪ್ಯೂಟರ ಹಾಗೂ ಇಂಟರನೆಟ್ ಸೌಲಭ್ಯದ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಕಚೇರಿಯ ಅವಧಿಯಲ್ಲಿ ಸಿಗುವ ಹಾಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಈ ವೇಳೆ ರೈತ ಮುಖಂಡರಾದ ಸುಭಾಸ ಶಿರಬೂರ, ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ಕೋಲ್ಹಾರ ಅಧ್ಯಕ್ಷ ಸೋಮು ಬಿರಾದಾರ, ವಿಜಯಪುರ ಅಧ್ಯಕ್ಷ ಮಹಾದೇವಪ್ಪ ತೇಲಿ, ತಿಕೋಟಾ ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ, ನಜೀರ ನಂದರಗಿ, ಶಾನೂರ ನಂದರಗಿ, ಸಂಗಪ್ಪ ಟಕ್ಕೆ, ಬಸ್ಸು ನ್ಯಾಮಗೊಂಡ, ಮಹಾದೇವ ಕದಂ, ಅಲ್ಲಮಪ್ರಭು ಗದ್ಯಾಳ, ಸುಗೇಂದ್ರ ನಾಲವಡೆ, ರಾಜಕುಮಾರ ಹಿರೇಕುರಬೂರ, ಸಂಗನಬಸಪ್ಪ ಹಡಕ್ಯಾಳ, ಅಶೋಕ ಹಿಪ್ಪರಗಿ, ಮಲ್ಲಪ್ಪ ಹಿಪ್ಪರಗಿ, ಸಂಗೋಂಡ ಹಿಪ್ಪರಗಿ, ಬಸಗೊಂಡ ಹಿಪ್ಪರಗಿ, ಪ್ರಕಾಶ ತಿಕೋಟಾ, ಕುಪ್ಪದ ಹಿಪ್ಪರಗಿ, ಅಶೋಕ ಗದ್ಯಾಳ ಸೇರಿದಂತೆ ಜಿಲ್ಲೆಯ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.

