ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹುಬ್ಬಳ್ಳಿಯ ನೀಲಮ್ಮ ಹಂಪಣ್ಣ ಹಡಪದ ಇವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವದನ್ನು ಖಂಡಿಸಿ ವಿಜಯಪುರ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ (ರಿ) ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿಗಳ ಮುಖಾಂತರ ಘನತೆವೆತ್ತ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಹಡಪದ ಸಮಾಜದ ಮುಖಂಡರು, ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಮ್ಮ ಹಿಂದುಳಿದ ಹಡಪದ ಸಮಾಜಕ್ಕೆ ಸೇರಿದ ಶ್ರೀಮತಿ ನೀಲಮ್ಮ ಹಡಪದ ಇವರ ಮೇಲೆ ದುಷ್ಕರ್ಮಿಯೊಬ್ಬ ಮಾರಣಾಂತಿಕ ಹಲ್ಲೆಯನ್ನು ನಡೆಸಿ ಹತ್ಯೆಗೆ ಪ್ರಯತ್ನ ಪಟ್ಟಿದ್ದು, ದುಷ್ಕರ್ಮಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಹಿಂದುಳಿದ ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡಬೇಕು. ಕ್ಷೌರಿಕ ವ್ರತ್ತಿಯ ಆಧಾರದ ಮೇಲಿರುವ ಈ ಸಮುದಾಯಕ್ಕೆ ಸಾಮಾಜಿಕ ಜೀವನದಲ್ಲಿ ಅಗೌರವ ಮೇಲಿಂದ ಮೇಲೆ ನಡೆಯುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಕಾರಣ ಹಲ್ಲೆಗೊಳಗಾದ ಮಹಿಳೆಯ ಕುಟುಂಬಕ್ಕೆ ಭದ್ರತೆ ನೀಡಿ ಹಲ್ಲೆ ನಡೆಸಿದ ದುಷ್ಕರ್ಮಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಮತ್ತು ಸಾಮಾಜಿಕ ನ್ಯಾಯದ ಅಡಿಯಲ್ಲಿ ಮಹಿಳೆಗೆ ಜೀವನೋಪಾಯಕ್ಕೆ ಅರ್ಥಿಕ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಆಗ್ರಹಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಎಂ.ಬಿ. ಅರ್ಜುಣಗಿ, ಜಿಲ್ಲಾಧ್ಯಕ್ಷ ವಿರೂಪಾಕ್ಷಿ ಜಿ. ಕತ್ನಳ್ಳಿ, ಜಿಲ್ಲಾ ಉಪಾಧ್ಯಕ್ಷ ಶಾಂತಾನಂದ ದೇವೂರ, ಬಾಬು ಹಡಪದ, ಜಿಲ್ಲಾ ಕಾರ್ಯಧ್ಯಕ್ಷ ಶಿವಾನಂದ ಆರ್. ನಾವಿ, ಜಿಲ್ಲಾ ಕೋಶಾಧ್ಯಕ್ಷ ನಿಂಗಪ್ಪ ಎ. ನಾವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್ ಉತ್ನಾಳ, ಜಿಲ್ಲಾ ಸಂಚಾಲಕ ಮಲ್ಲೇಶಿ ನಾವಿ, ನಗರ ಸಂಚಾಲಕ ಬಸವರಾಜ ಬೆಕಿನಾಳ, ಸಿಂದಗಿ ಪುರಸಭೆಯ ಮಾಜಿ ಸದಸ್ಯ ಚಂದ್ರಶೇಖರ ಅಮಲಿಹಾಳ, ಬಸವರಾಜ ಬ್ಯಾಲ್ಯಾಳ, ಈರಣ್ಣ ಹಡಪದ, ಚಿದಾನಂದ ತೊರವಿ, ಧರೆಪ್ಪ ನಾವಿ, ಓಂಕಾರ ನಾವಿ, ರಾಜು ಯಂಕಂಚಿ, ಶರಣು ಹಡಪದ, ಶರಣಬಸು ಮಾಶ್ಯಾಳ. ರವಿ ಹಂಜಗಿ ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.

