ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ
ಬಸವನಬಾಗೇವಾಡಿ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚಂದ್ರಶೇಖರ ಸೋಮನಗೌಡ ಪಾಟೀಲ, ಉಪಾಧ್ಯಕ್ಷರಾಗಿ ಶಿವಪ್ಪ ಬಸಪ್ಪ ಬಂಚೋಡಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಎಸ್.ಎಂ.ಹಂಗರಗಿ ಘೋಷಿಸಿದರು.
ಈ ಸಂಘದ ೧೪ ನಿರ್ದೇಶಕರ ಸ್ಥಾನಕ್ಕೆ ಜೂನ್ ೨೯ ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿ ಜುಲೈ ೬ ನಾಮಪತ್ರ ಸಲ್ಲಿಕೆ ಕೊನೆ ದಿನ ನಿಗದಿಯಾಗಿತ್ತು. ಜುಲೈ ೭ ರಂದು ನಾಮಪತ್ರ ಪರಿಶೀಲನೆ,ಜುಲೈ ೮ ನಾಮಪತ್ರ ಹಿಂಪಡೆಯಲು ಅವಕಾಶವಿತ್ತು. ಚುನಾವಣೆ ಜುಲೈ ೧೪ ರಂದು ನಿಗದಿಯಾಗಿತ್ತು. ೧೩ ಸ್ಥಾನಗಳಿಗೆ ೧೪ ನಾಮಪತ್ರ ಸಲ್ಲಿಕೆಯಾಗಿದ್ದವು. ಪ್ರೇಮಕುಮಾರ ಮ್ಯಾಗೇರಿ ಅವರು ತಮ್ಮ ನಾಮಪತ್ರ ಹಿಂದೆ ಪಡೆದುಕೊಂಡಿದ್ದರಿಂದ ೧೩ ಸ್ಥಾನಗಳಿಗೆ ಅವಿರೋಧವಾಗಿ ನಿರ್ದೇಶಕರು ಆಯ್ಕೆಯಾಗಿದ್ದರು. ಬ ತರಗತಿ ಸದಸ್ಯರ(ರೈತರು-ಕೃಷಿಕ ಸದಸ್ಯರಿಂದ) ಪರಿಶಿಷ್ಟ ಪಂಗಡ ಕ್ಷೇತ್ರಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗದೇ ಇರುವದರಿಂದಾಗಿ ಈ ಸ್ಥಾನ ಖಾಲಿ ಇದೆ. ಇಂದು ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಎರಡು ಸ್ಥಾನಗಳಿಗೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಎರಡು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಯಿತು ಎಂದು ಸಹಕಾರ ಅಭಿವೃದ್ಧಿ ಅಧಿಕಾರಿ ಹಾಗೂ ಚುನಾವಣಾಧಿಕಾರಿ ಎಸ್.ಎಂ.ಹಂಗರಗಿ ಹೇಳಿದರು.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗುತ್ತಿದ್ದಂತೆ ಅವರ ಬೆಂಬಲಿಗರು ಪಟಾಕ್ಷಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಂತರ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಜರುಗಿದ ಸನ್ಮಾನ ಸಮಾರಂಭದಲ್ಲಿ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರು ಸರ್ವ ನಿರ್ದೇಶಕರನ್ನು, ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಪ್ರಗತಿಗೆ ಶ್ರಮಿಸಬೇಕು. ಕಳೆದ ಮೂರು ದಶಕಗಳಿಂದ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಮಾದರಿ ಸಂಘ ಎನಿಸಿಕೊಂಡಿದೆ ಎಂದರು.
ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ, ಸಂಘದ ನಿರ್ದೇಶಕ ಲೋಕನಾಥ ಅಗರವಾಲ ಮಾತನಾಡಿ, ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಸಹಕಾರ ಸಂಘ-ಸಂಸ್ಥೆಗಳು ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ ಎಂದರು.
ರಾಜ್ಯ ಸಹಕಾರ ವಿಮಾ ಸಂಘದ ಅಧ್ಯಕ್ಷ, ಸಂಘದ ನಿರ್ದೇಶಕ ಶಿವನಗೌಡ ಬಿರಾದಾರ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ನಾನು ಏಳು ಅವಧಿಗೆ ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಮೂಲಕ ಪ್ರಗತಿಗೆ ಶ್ರಮಿಸಿದ್ದೇನೆ. ಸಂಘವು ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರು ಶ್ರಮಿಸಬೇಕೆಂದರು.
ಈ ಸಂದರ್ಭದಲ್ಲಿ ಮುಖಂಡರಾದ ಶೇಖರ ಗೊಳಸಂಗಿ, ಸುರೇಶಗೌಡ ಪಾಟೀಲ, ಬಸವರಾಜ ಗೊಳಸಂಗಿ, ಶಂಕರಗೌಡ ಪಾಟೀಲ, ಸಂಕನಗೌಡ ಪಾಟೀಲ, ಸುಭಾಸ ಗಾಯಕವಾಡ, ಶಂಕರಗೌಡ ಚಿಕ್ಕೊಂಡ, ಎಂ.ಜಿ.ಆದಿಗೊಂಡ, ಈರಣ್ಣ ವಂದಾಲ, ಪಿಂಟುಗೌಡ ಪಾಟೀಲ, ಸಚೀನಗೌಡ ಪಾಟೀಲ, ಸಂಗಮೇಶ ಪಟ್ಟಣಶೆಟ್ಟಿ, ಕರಿಯಪ್ಪ ಬಂಚೋಡಿ, ಜಗದೇವಿ ಗುಂಡಳ್ಳಿ, ಸಂಘದ ನಿರ್ದೇಶಕರಾದ ರವಿ ರಾಠೋಡ, ಹಣಮಂತ ಯರಂತೇಲಿ, ಸಿದ್ದಪ್ಪ ಕೋರಿ, ಸೋಮನಗೌಡ ಪಾಟೀಲ, ಗುರುಪಾದಪ್ಪ ಬೀಳಗಿ, ಕಲಾವತಿ ಚಿಕ್ಕೊಂಡ, ರೇಣುಕಾ ಪಾಟೀಲ ಸೇರಿದಂತೆ ಇತರರು ಇದ್ದರು.

