ಮೆ:ಡಬ್ಲೂಆರ್‌ಎಸ್‌ಆರ್ ಪಾವರ್ ಟ್ರಾನ್ಸಮಿಶನ್ ದಿಂದ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ
ವಿಜಯಪುರ: ಜಿಲ್ಲೆಯ ಕೊಲ್ಹಾರ, ಬಸವನಬಾಗೇವಾಡಿ, ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನ ಒಟ್ಟು ೧೭೭ ಸ್ಥಳಗಳಲ್ಲಿ ವಿದ್ಯುತ್ ಗೋಪುರಗಳನ್ನು ಅಳವಡಿಸಲು ಏಕಾಏಕಿ ಹೋಗಿ ಕಾಮಗಾರಿ ಆರಂಭಿಸದೇ ಸಂಬಂಧಿಸಿದ ಜಮೀನಿನ ಭೂಮಾಲೀಕರಿಗೆ-ರೈತರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಸೂಕ್ತ ತಿಳುವಳಿಕೆ ನೀಡಿದ ನಂತರ ಕಾಮಗಾರಿ ಆರಂಭಿಸುವಂತೆ ಕಂಪನಿಯವರಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.
ಅದಾನಿ ಗ್ರೂಪ್‌ನ ಮೆ: ಡಬ್ಲೂಆರ್‌ಎಸ್‌ಆರ್ ಪಾವರ್ ಟ್ರಾನ್ಸಮಿಶನ್ ಲಿ. ವತಿಯಿಂದ ೭೬೫ ಕೆ.ವಿ. ಪ್ರಸರಣ ಮಾರ್ಗವನ್ನು ಕೂಡಗಿ ವಿದ್ಯುತ್ ಸ್ಥಾವರದ (ನರೇಂದ್ರ-ಹೊಸ) ಸ್ವೀಕರಣಾ (ಕೂಡಗಿ) ಕೇಂದ್ರದಿಂದ ಪುಣೆ(ಜಿಐಎಸ್) ಸ್ವೀಕರಣಾ ಕೇಂದ್ರದವರೆಗೆ ನಿರ್ಮಿಸಲಾಗುತ್ತಿದ್ದು, ಸದರಿ ಕಂಪನಿಯವರು ಸರಿಯಾದ ಮಾಹಿತಿ ನೀಡದೇ ಹಾಗೂ ಪರಿಹಾರ ಸಿಗುವ ನೋಟಿಸ್ ರೈತರಿಗೆ ನೀಡದೇ ಏಕಾಏಕಿ ಹೊಲದಲ್ಲಿ ಕಾಮಗಾರಿ ಆರಂಭಿಸಿರುವ ಕುರಿತು ಸಂಬಂಧಿಸಿದ ಜಮೀನಿನ ರೈತರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಈ ದೂರಿನ ಹಿನ್ನಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸದರಿ ಕಂಪನಿಯೊಂದಿಗೆ ಸಭೆ ನಡೆಸಿ ಸೂಚನೆ ನೀಡಿದ ಅವರು, ಅಡಿಪಾಯ ಪರಿಹಾರ, ಕೃಷಿ ಬೆಳೆ, ಗಿಡ-ಮರ ಮತ್ತು ತೋಟಗಾರಿಕೆ ಬೆಳೆ ಪರಿಹಾರ ಕುರಿತು ದಿನಾಂಕ : ೧೨-೦೩-೨೦೨೪ರಂದು ನಡೆದ ಸಭೆಯಲ್ಲಿ ಸಂಬಂಧಿಸಿದ ಜಮೀನಿನ ಮಾಲೀಕರು-ರೈತರೊಂದಿಗೆ ನಡೆದ ಸಭೆಯ ನಿರ್ಣಯದಂತೆ ಪರಿಹಾರ ಒದಗಿಸುವುದು ಹಾಗೂ ಕಾಮಗಾರಿ ಆರಂಭಿಸುವ ಮುಂಚೆ ಸಂಬಂಧಿಸಿದ ಜಮೀನಿನ ಮಾಲೀಕರಿಗೆ ಮಾಹಿತಿ ನೀಡಿ, ರೈತರೊಂದಿಗೆ ಸೌಜನ್ಯಯುತವಾಗಿ ನಡೆದುಕೊಂಡು ಕಾರ್ಯನಿರ್ವಹಿಸುವಂತೆ ಸೂಚಿಸಿದ ಅವರು ಯಾವುದೇ ಲೋಪಗಳಾಗದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

