ನವದೆಹಲಿಯ ಸಿಸಿಐಎಂ ಮಾಜಿ ಸದಸ್ಯ, ಗದಗ ಡಿ. ಜಿ. ಎಂ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಜಿ.ಬಿ.ಪಾಟೀಲ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆಯುರ್ವೇದ ಪ್ರಾಚೀನ ಕಾಲದ ಶಾಸ್ತ್ರೀಯ ವಿದ್ಯೆಯಾಗಿದೆ. ವೈದ್ಯಕೀಯ ಚಿಕಿತ್ಸೆಗೆ ನಾವಿನ್ಯತೆಯ ಸ್ಪರ್ಶನೀಡುವುದರ ಮೂಲಕ ಆಯುರ್ವೇದವನ್ನು ಉಳಿಸಬೇಕು ಹಾಗೂ ಬೆಳೆಸಬೇಕು ಎಂದು ನವದೆಹಲಿಯ ಸಿಸಿಐಎಂ ಮಾಜಿ ಸದಸ್ಯ ಮತ್ತು ಗದಗ ಡಿ. ಜಿ. ಎಂ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಜಿ. ಬಿ. ಪಾಟೀಲ ಹೇಳಿದ್ದಾರೆ.
ನಗರದ ಬಿಎಲ್‌ಡಿಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮಾಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಶ್ವಾದ್ಯಂತ ಜನರು ಈಗ ಆಯುರ್ವೇದ ಕಡೆಗೆ ಒಲವು ತೋರಿಸುತ್ತಿರುವುದು ಸಂತಸದ ವಿಷಯವಾಗಿದೆ. ನಿಖರವಾದ ಆಯುರ್ವೇದ ಚಿಕಿತ್ಸೆಯನ್ನು ಸಂಶೋಧನೆಯ ಮೂಲಕ ನೀಡಿ ಸಮಾಜದ ಸ್ವಾಸ್ಥ್ಯ ಕಾಪಾಡುವುದು ಆಯುರ್ವೇದ ವೈದ್ಯರ ಕರ್ತವ್ಯವಾಗಿದೆ. 77 ವರ್ಷಗಳ ಇತಿಹಾಸವಿರುವ ಈ ಮಹಾವಿದ್ಯಾಲಯವು ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿರುವುದು ಸಂತಸ ತಂದಿದೆ. ಕಾಲೇಜಿನ ಅನೇಕ ಶಿಕ್ಷಕರು ಆಯುರ್ವೇದ ವೈದ್ಯ ಪದ್ಧತಿಯನ್ನು ಬೆಳೆಸುವ ಉದ್ದೇಶದಿಂದ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದಾರೆ. ಶಿಕ್ಷಕ ವೃತ್ತಿಯಲ್ಲಿರುವವರಿಗೆ ಕಲಿಕೆಗೆ ಅಂತ್ಯವಿಲ್ಲದ ವಿಷಯವಾಗಿದೆ. ಆಯರ್ವೇದ ವೈದ್ಯ ವಿದ್ಯಾರ್ಥಿಗಳಿಗೆ ಕಲಿಕೆ ಹಾಗೂ ಚಿಕಿತ್ಸೆಯ ಮಹತ್ವವನ್ನು ಮನದಟ್ಟು ಮಾಡುವಲ್ಲಿ ಶಿಕ್ಷಕರ ಕೊಡುಗೆ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಜ್ಞಾನಯೋಗಾಶ್ರಮದ ಡಾ. ಶ್ರದ್ಧಾನಂದ ಮಹಾಸ್ವಾಮೀಜಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ಸಲಹೆ ನೀಡುವ ಉದ್ದೇಶದಿಂದ ಈ ಸಮಾಗಮ ಆಯೋಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ಸಂಸ್ಥೆಯ ಅಭಿವೃದ್ಧಿಗೆ ತಮ್ಮ ಅಮೂಲ್ಯ ಸಲಹೆ ನೀಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಬಿ. ಎ. ಎಂ. ಎಸ್ ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿನಿ ಡಾ. ವೋಸಮಿ ಸಾಮಂತ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿನಿ ಡಾ. ಪೂರ್ಣಿಮಾ ಪಾಟೀಲ ಅವರನ್ನು ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಕಲಾವಿದ ರವಿ ಕೋರಿ ಮತ್ತು ನೀತಾ ಇವರು ನೃತ್ಯ ಪ್ರದರ್ಶಿಸಿದರು. ವಿರೇಶ ವಾಲಿ ಮತ್ತು ಅನಿತಾ ಅಯ್ಯರ ಗಾಯನದಿಂದ ಪ್ರೇಕ್ಷಕರನ್ನು ರಂಜಿಸಿದರು. ಖ್ಯಾತ ಹಾಸ್ಯ ಕಲಾವಿದ ಶರಣು ಯಮನೂರ ಎಲ್ಲರನ್ನು ನಗೆ ಚಟಾಕಿಯಿಂದ ನಗೆಗೆಡಲಲ್ಲಿ ತೇಲಿಸಿದರು.
ಕಾರ್ಯಕ್ರಮದಲ್ಲಿ 300 ಕ್ಕೂ ಹೆಚ್ಚು ವ್ಯದ್ಯರುಗಳು ಉಪಸ್ತಿತರಿದ್ದರು.
ಸಂಘದ ಉಪಾಧ್ಯಕ್ಷ ಡಾ. ಡಿ. ಎನ್. ಧರಿ ಸ್ವಾಗತಿಸಿದರು. ಡಾ. ರೇಣುಕಾ ತೆನಹಳ್ಳಿ ನಿರೂಪಿಸಿದರು. ಡಾ. ಸುನೀಲ ಹುಂಡೇಕಾರ ವಂದಿಸಿದರು.

