ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಶೀಘ್ರ ಪರಿಹಾರ ಕಲ್ಪಿಸುವ ಉದ್ದೇಶದಿಂದ “ಮೀಡಿಯೇಶನ್ ಫಾರ್ ದ ನೇಶನ್ ೨.೦” ಎಂಬ ರಾಷ್ಟ್ರಮಟ್ಟದ ವಿಶೇಷ ಮಧ್ಯಸ್ಥಿಕೆ ಅಭಿಯಾನವನ್ನು ಜ.೨ ೨೦೨೬ ರಿಂದ ರಾಜ್ಯದಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ಆರಂಭಿಸಲಾಗುತ್ತಿದೆ.
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಕರ್ನಾಟಕ ಹೈಕೋರ್ಟ್, ಬೆಂಗಳೂರು ಇವರ ನಿರ್ದೇಶನದಂತೆ ಈ ಅಭಿಯಾನವನ್ನು ೯೦ ದಿನಗಳ ಅವಧಿಗೆ ಹಮ್ಮಿಕೊಳ್ಳಲಾಗಿದ್ದು, ಪರಸ್ಪರ ರಾಜಿ ಸಂಧಾನದ ಮೂಲಕ ವಿವಾದಗಳನ್ನು ಬಗೆಹರಿಸುವುದಕ್ಕೆ ಒತ್ತು ನೀಡಲಾಗುತ್ತದೆ.
ಈ ಅಭಿಯಾನದಡಿ ಜ.೩೧ ೨೦೨೬ ರವರೆಗೆ ಮಧ್ಯಸ್ಥಿಕೆಗೆ ಯೋಗ್ಯವಾದ ಪ್ರಕರಣಗಳನ್ನು ಗುರುತಿಸಲಾಗುತ್ತದೆ. ಗುರುತಿಸಲಾದ ಪ್ರಕರಣಗಳನ್ನು ಸಂಬಂಧಿತ ನ್ಯಾಯಾಲಯಗಳ ಅನುಮೋದನೆಯೊಂದಿಗೆ ಮಧ್ಯಸ್ಥಿಕೆ ಕೇಂದ್ರಗಳಿಗೆ ರವಾನಿಸಲಾಗುವುದು. ವಕೀಲರು, ನ್ಯಾಯಾಲಯದ ಸಿಬ್ಬಂದಿ, ಕಾನೂನು ಪ್ರಾಧ್ಯಾಪಕರು ಹಾಗೂ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳ ಸಹಕಾರದಿಂದ ಪ್ರಕರಣಗಳ ಗುರುತಿಸುವ ಕಾರ್ಯ ನಡೆಯಲಿದೆ.
ಕುಟುಂಬ ವ್ಯಾಜ್ಯಗಳು, ನಾಗರಿಕ ವಿವಾದಗಳು, ಚೆಕ್ ಬೌನ್ಸ್ ಪ್ರಕರಣಗಳು, ಹಣಕಾಸು ಸಂಬಂಧಿತ ವ್ಯಾಜ್ಯಗಳು ಸೇರಿದಂತೆ ಮಧ್ಯಸ್ಥಿಕೆಗೆ ಸೂಕ್ತವಾದ ಪ್ರಕರಣಗಳನ್ನು ಈ ಅಭಿಯಾನದಲ್ಲಿ ಪರಿಗಣಿಸಲಾಗುತ್ತದೆ. ಪಕ್ಷಗಾರರು ಮತ್ತು ವಕೀಲರು ಮಧ್ಯಸ್ಥಿಕೆಗೆ ಯೋಗ್ಯವಿದ್ದ ತಮ್ಮ ಪ್ರಕರಣಗಳನ್ನು ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿರುವ ತಾಲೂಕು ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಿ ನೀಡಬಹುದು.
ನ್ಯಾಯಾಲಯಗಳ ಮೇಲಿನ ಭಾರ ಕಡಿಮೆ ಮಾಡಿ, ವಿವಾದಗಳಿಗೆ ಶಾಂತಿಯುತ ಹಾಗೂ ವೇಗವಾದ ಪರಿಹಾರ ಒದಗಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ವಿಶೇಷ ಮಧ್ಯಸ್ಥಿಕೆ ಅಭಿಯಾನದಲ್ಲಿ ಪಕ್ಷಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ರವೀಂದ್ರಕುಮಾರ ಕಟ್ಟಿಮನಿ ಮತ್ತು ಸದಸ್ಯ ಕಾರ್ಯದರ್ಶಿಗಳಾದ ರಾಮಮೂರ್ತಿ ಎನ್ ರವರು ಪ್ರಕಟಣೆಯಲ್ಲಿ ಕೋರಿದ್ದಾರೆ.
