ಸರಕಾರಿ ಪ್ರೌಢಶಾಲೆ ಕುಂಬಾರಹಳ್ಳದಲ್ಲಿ ರಾಷ್ಟ್ರೀಯ ಗಣಿತ ದಿನೋತ್ಸವ ಹಾಗೂ ರಾಷ್ಟ್ರೀಯ ರೈತ ದಿನಾಚರಣೆ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಗಣಿತ ವಿಷಯಕ್ಕೆ ಭಾರತದ ಕೊಡುಗೆ ಅದ್ವಿತೀಯವಾಗಿದ್ದು ಆರ್ಯಭಟರಿಂದ ಹಿಡಿದು ಶ್ರೀನಿವಾಸ ರಾಮಾನುಜನ್ ರವರೆಗೆ ಅದು ಹಬ್ಬಿದೆ. ಶ್ರೀನಿವಾಸ ರಾಮಾನುಜನ್ ಅವರು ಗಣಿತಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅವರು *ಗಣಿತದ ಅಗುಣಿತ ವಿನ್ಯಾಸವಾಗಿದ್ದಾರೆ ಮತ್ತು ಪ್ರತಿ ಧನ ಪೂರ್ಣಾಂಕದಲ್ಲೂ ಅವರ ವಿಳಾಸವಿದೆ ಎಂದು ಗಣಿತ ಶಿಕ್ಷಕ ಸಂಗನಬಸವ ಉಟಗಿ ಅಭಿಪ್ರಾಯಪಟ್ಟರು.
ಅವರು ಕುಂಬಾರಹಳ್ಳ ಸರಕಾರಿ ಪ್ರೌಢಶಾಲೆಯ ಗಣಿತ ದಿನೋತ್ಸವದ ಹಾಗೂ ರೈತ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಂಗನಬಸವ ಉಟಗಿ ಮಾತನಾಡಿ, ಗಣಿತ ಅತ್ಯಂತ ಸುಲಭದ ವಿಷಯವಾಗಿದೆ. ಜೀವನದ ಎಲ್ಲಾ ವಿಭಾಗದಲ್ಲೂ ಗಣಿತ ಹಾಸುಕೊಕ್ಕಾಗಿದೆ. ಗಣಿತಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನವನ್ನು ಗಣಿತ ದಿನವಾಗಿ ಆಚರಿಸಲಾಗುವುದು. ಮಕ್ಕಳು ಸಹ ಗಣಿತ ವಿಷಯವನ್ನು ಪ್ರೀತಿಸಬೇಕು ರಾಮಾನುಜನ್ ಅವರ ಆದರ್ಶವನ್ನು ಪಾಲಿಸಬೇಕು.ಅವರು ನೀಡಿದ ಕೊಡುಗೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ನುಡಿದರು. ರೈತ ದೇಶದ ಬೆನ್ನೆಲುಬು ಅವರು ಸುಖವಾಗಿದ್ದರೆ ಮಾತ್ರ ಜಗತ್ತು ಸುಖವಾಗಿರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳಾದ ಭವಾನಿ ಗುಣದಾಳ, ಕೃತಿಕಾ ಬಣಕಾರ, ಸನ್ಮತಿ ಶಿರಹಟ್ಟಿ, ಸಹನಾ ನ್ಯಾಮಗೌಡ, ಪೂಜಾ ಕುರಣಿ, ಶಾಹಿನ ನದಾಫ್ , ಸೂಫಿಯಾ ನದಾಫ್, ನಿಂಗವ್ವ ಮರನೂರ, ಶ್ರಾವ್ಯ ಎಂಟೆತ್ತ, ರಾಗಿಣಿ ಚಿಕ್ಕಲಕಿ, ದೀಪಾ ಪಕಾಲಿ, ಮುಂತಾದವರು ಗಣಿತ ದಿನಾಚರಣೆ ಕುರಿತು ಮಾತನಾಡಿದರು.
ಗಣಿತ ದಿನೋತ್ಸವದ ಅಂಗವಾಗಿ ಮಕ್ಕಳು ತಾವೇ ತಯಾರಿಸಿದ್ದ ಗಣಿತ ಕಲಿಕೋಪಕರಣಗಳ ಪ್ರದರ್ಶನ ನಡೆಸಲಾಯಿತು.
ಮಕ್ಕಳಾದ ಲಕ್ಷ್ಮಣ ನಾವಿ, ಸಾಗರ್ ಕುರಣಿ, ಪ್ರಶಾಂತ್ ಕುರಣಿ, ಪ್ರಜ್ವಲ್ ಕುರುಣಿ, ವೀರೇಶ್ ಸೊನ್ನದ್, ಚಂದು ಮಾಂಗ, ಕರೆಪ್ಪ ಹೆಗಡೆ, ಸಮ್ಮೇದ ಮಟ್ಟಿ ಮೊದಲಾದವರು ಪ್ರದರ್ಶನವನ್ನು ಚೆಂದಗಾಣಿಸಿಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಮುಖ್ಯೋಪಾಧ್ಯಾಯರಾದ ಸಂಜೀವ ಝಂಬುರೆಯವರು ಮಾತನಾಡಿ, ನಮ್ಮಶಾಲೆಯಿಂದಲೂ ಶ್ರೀನಿವಾಸ ರಾಮಾನುಜನ್ ಅವರಂಥ ಪ್ರತಿಭೆಗಳು ಮೂಡಿ ಬರಲಿ.ನಮ್ಮ ಗಣಿತಶಿಕ್ಷಕರ ಪ್ರತಿಭೆಯನ್ನು ಶ್ರಮವನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಶಿಕ್ಷಕಿಯರಾದ ಮಂಜುಳಾ ಕಡಕೋಳ, ಆಶಿಫಾ ಭಾನು ಮೋಮಿನ್ ಕಾರ್ಯಕ್ರಮದ ಕುರಿತು ಮಾತನಾಡಿದರು.
ಕುಮಾರ್ ಪ್ರೀತಮ್ ಮಾಂಗ್ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಕ ಬಾಹುಬಲಿ ಮುತ್ತೂರ ವಂದಿಸಿದರು.

