ಇಂಡಿ: ತಾಲೂಕಿನ ನಂದರಗಿ ಗ್ರಾಮದ ರೈತ ಕನ್ನಪ್ಪ ಕುಪಿಂದ್ರಾಯ ಪೂಜಾರಿ ಇವರು 4.00 ಎಕರೆ ಕೃಷಿ ಭೂಮಿಯನ್ನು ಹೊಂದಿರುತ್ತಾರೆ. ಒಣಬೇಸಾಯದಲ್ಲಿ ತೊಗರಿ, ಸಜ್ಜೆ, ಹೆಸರು ಇತ್ಯಾದಿ ಬೆಳೆಗಳನ್ನು ಬೆಳೆದು ತೇವಾಂಶದ ಕೊರತೆಯಿಂದಾಗಿ ಬೆಳೆಗಳು ಒಣಗಿ ಕಡಿಮೆ ಇಳುವರಿ ಬರುತ್ತಿತ್ತು. ಇದರಿಂದ ಕೃಷಿಯಲ್ಲಿ ಎಷ್ಟೆ ಕಷ್ಟಪಟ್ಟರೂ ನಿಗದಿತ ಲಾಭ ಆಗುತ್ತಿರಲಿಲ್ಲ. ಆದ್ದರಿಂದ ಸದರಿ ರೈತರು ಬೇಸತ್ತು ಕೃಷಿ ಇಲಾಖೆಗೆ ಭೇಟಿ ನೀಡಿ ತಮ್ಮ ನೋವನ್ನು ಹೇಳಿಕೊಂಡರು. ಈ ಸಮಯದಲ್ಲಿ ಕೃಷಿ ಇಲಾಖೆಗೆ ಕರ್ನಾಟಕ ಸರ್ಕಾರದಿಂದ ಕೃಷಿ ಭಾಗ್ಯ ಯೋಜನೆ ಬಂದಿತ್ತು. ಇದರ ಸವಲತ್ತನ್ನು ಪಡೆದು ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಕೃಷಿ ಹೊಂಡವನ್ನು ನಿರ್ಮಿಸಿಕೊಂಡರು. ಕಳೆದ ವರ್ಷ ಬರಗಾಲದಿಂದಾಗಿ ಬಸವಳಿದಿದ್ದ ರೈತರಿಗೆ ಈ ವರ್ಷ ಮುಂಗಾರು ಮಳೆ ಉತಮ್ಮವಾಗಿ ಆಗಿದ್ದರಿಂದ ಕೃಷಿ ಹೊಂಡದಲ್ಲಿ ನೀರು ತುಂಬಿಕೊಳ್ಳಲು ಅನುಕೂಲವಾಯಿತು. ಇದರಿಂದ ರೈತರು ಹರ್ಷಗೊಂಡು ಬೆಳೆಗಳ ಬದಲಾವಣೆ ಮಾಡಿಕೊಂಡು ಹತ್ತಿ, ಮೆಕ್ಕೆಜೋಳ ಬಿತ್ತನೆ ಮಾಡಿರುತ್ತಾನೆ. ಕೃಷಿ ಹೊಂಡದಲ್ಲಿ ಸಂಗ್ರಹವಾದ ಮಳೆ ನೀರನ್ನು ಹತ್ತಿ ಬೆಳೆಗೆ ಬಳಸಿಕೊಂಡಿರುತ್ತಾನೆ.
ಮಳೆಯಾಧಾರಿತ ಕೃಷಿ ಮಾಡುತ್ತಿರುವವವರಿಗೆ ನೀರಿನ ಸಮಸ್ಯೆ ನಿವಾರಿಸಲು ಕೃಷಿ ಇಲಾಖೆಯ ಕೃಷಿ ಭಾಗ್ಯ ಯೋಜನೆಯಡಿ ಸಹಾಯಧನದೊಂದಿಗೆ ಜಾರಿಯಾಗಿರುವ ಕೃಷಿ ಹೊಂಡ ನಿರ್ಮಾಣ ಇಂಡಿ ತಾಲ್ಲೂಕಿನಲ್ಲಿ ವರದಾನವಾಗುತ್ತಿದೆ. ತಮ್ಮ ಜಮೀನಿನಲ್ಲಿ ಅನುಕೂಲಕ್ಕೆ ತಕ್ಕಂತೆ ಇಲಾಖೆ ನಿಗದಿ ಪಡಿಸಿದ ರೂಪದಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಸಬ್ಸಿಡಿ ಸಮೇತ ಅನುದಾನ ಈ ಕೃಷಿ ಭಾಗ್ಯ ಯೋಜನೆಯಡಿ ಲಭ್ಯವಾಗುತ್ತಿದೆ.
ಕೃಷಿ ಭಾಗ್ಯ ಯೋಜನೆ : ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿರುವ ಮಳೆಯ ಪ್ರಮಾಣದಿಂದ ಮಳೆಯಾಧಾರಿತ ಕೃಷಿಯನ್ನು ನಂಬಿಕೊಂಡಿರುವ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಕೃಷಿಕರು ಮಳೆ ನೀರನ್ನು ವ್ಯರ್ಥವಾಗಲು ಬಿಡದೆ ಸೂಕ್ತ ಸ್ಥಳದಲ್ಲಿ ಹೊಂಡ ತೆಗೆದು ನೀರನ್ನು ಸಂಗ್ರಹಿಸಿ, ಅದನ್ನು ತಮ್ಮ ಬೆಳೆಗಳಿಗೆ ನೀರಾವರಿ ಒದಗಿಸಲು ಈ ಯೋಜನೆಯ ಉದ್ದೇಶವಾಗಿದೆ. ಕೃಷಿ ಹೊಂಡ ರಚನೆ ನಂತರ ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ ಅಳವಡಿಕೆ, ಹೊಂಡದಿಂದ ನೀರು ಎತ್ತಲು ಡೀಸೆಲ್ ಪಂಪ್‌ಸೆಟ್, ತುಂತುರು ನೀರಾವರಿ ಅಳವಡಿಕೆಗೆ ಈ ಯೋಜನೆಯಡಿ ಅವಕಾಶವಿದೆ. ಕೃಷಿ ಹೊಂಡ ನಿರ್ಮಾಣ ಮಾಡಿದ ರೈತರಿಗೆ ಅಳತೆಗೆ ಅನುಗುಣವಾಗಿ ಸಾಮಾನ್ಯ ವರ್ಗದವರಿಗೆ ಶೇ.80 ಹಾಗೂ ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ಶೇ.90ರಷ್ಟು ಸಹಾಯಧನ (ಸಬ್ಸಿಡಿ) ನೀಡಲಾಗುತ್ತದೆ.
ಕೃಷಿ ಹೊಂಡ ನಿರ್ಮಾಣದ ಬಗ್ಗೆ ಇದೀಗ ಜಿಲ್ಲೆಯಲ್ಲಿ ರೈತರಲ್ಲಿ ಜಾಗೃತಿ ಮೂಡಿದೆ. ಇತ್ತೀಚಿಗೆ ಜಿಲ್ಲೆಯಲ್ಲಿಯೂ ಮಳೆ ಕೈಕೊಡುತ್ತಿರುವ ಕಾರಣ, ಮಳೆ ನೀರನ್ನು ಕೃಷಿ ಹೊಂಡದ ಮೂಲಕ ಸಂಗ್ರಹಿಸಿದರೆ, ರೈತರ ಬೆಳೆಗಳಿಗೆ ಅನುಕೂಲ. ಜೊತೆಗೆ ಅಂತರ್ಜಲ ಮರುಪೂರಣವಾಗುವುದರಿಂದ ಆ ಪ್ರದೇಶದಲ್ಲಿ ನೀರಿನ ಮಟ್ಟ ಸುಧಾರಿಸುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ ರವರು ತಿಳಿಸಿರುತ್ತಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

