೨೬೦ ರೈತ ಕುಟುಂಬಕ್ಕೆ ಬರಬೇಕಿರುವ ೩ ಕೋಟಿ ಬಾಕಿ ಹಣ ಬಿಡುಗಡೆಗೆ ರೈತಸಂಘ ಆಗ್ರಹ
ವಿಜಯಪುರ: ಇಂಡಿ ತಾಲೂಕಿನ ಹಿರೇಬೇವನೂರಿನ ಜ್ಞಾನಯೋಗಿ ಶಿವಕುಮಾರ ಸ್ವಾಮೀಜಿ ಸಕ್ಕರೆ ಕಾರ್ಖಾನೆಯಲ್ಲಿಯ ೨೦೧೮-೧೯ ನೇ ಸಾಲಿನಲ್ಲಿ ಕಬ್ಬು ಕಟಾವು ಹಾಗೂ ಸಾಗಾಣಿಕೆಗೆ ಮಾಡಿರುವ ಸುಮಾರು ೩ ಕೋಟಿಗಿಂತಲೂ ಅಧಿಕ ಬಾಕಿ ಇರುವ ಹಣವನ್ನು ಕೂಡಲೇ ಹಾಕಿಸಬೇಕೆಂದು ಜಿಲ್ಲಾಧಿಕಾರಿಗಳಾದ ಟಿ. ಭೂಬಾಲನ ಅವರಿಗೆ ಕೃಷಿ ಕಾರ್ಮಿಕರು ಮತ್ತು ಟ್ರಾಕ್ಟರ್ ಮಾಲಿಕರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಗುರುವಾರ ಮನವಿ ಸಲ್ಲಿಸಲಾಯಿತು.
ಈ ವೇಳೆ ಹಿರೇಬೇವನೂರಿನ ಗಿರಮಲ್ಲಗೌಡ ಬಿರಾದಾರ ಮಾತನಾಡಿ, ಹಿಂದಿನ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ನಮ್ಮೆಲ್ಲರಿಗೂ ಭರವಸೆ ನೀಡಿ ಆತ್ಮಸ್ಥೈರ್ಯ ತುಂಬಿ ಯಾವುದೇ ಜೀವಹಾನಿ ಮಾಡಿಕೊಳ್ಳಬಾರದೆಂದು ಧೈರ್ಯ ತುಂಬಿದ್ದರು. ಆದರೆ ಈಗ ಸಕ್ಕರೆ ಕಾರ್ಖಾನೆ ದಿವಾಳಿಯಾಗಿದೆ, ಮುಂದೆ ಯಾರು ಕಾರ್ಖಾನೆ ಪ್ರಾರಂಭಿಸುತ್ತಾರೋ ಅವರಿಂದ ಸುಮಾರು ೨೬೦ ಕುಟುಂಬಗಳಿಗೆ ಬರಬೇಕಿರುವ ಹಣ ಕೊಡಿಸುವುದಾಗಿ ಹೇಳಿದ್ದರು, ಆದರ ಪ್ರಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯಿಂದ ಬಾಕಿ ಇರುವ ಹಣವನ್ನು ಕೃಷಿ ಕಾರ್ಮಿಕರು ಹಾಗೂ ಟ್ರಾಕ್ಟರ್ ಮಾಲಿಕರ ಖಾತೆಗಳಿಗೆ ಜಮಾ ಮಾಡುವಂತೆ ಆದೇಶಿಸಬೇಕು. ಆದರೆ ಸಕ್ಕರೆ ಕಾರ್ಖಾನೆಯವರು ಕೋರ್ಟನಿಂದ ನೋಟಿಸ್ ಕಳಿಸಿ ನಮ್ಮೆಲ್ಲರಿಗೂ ಲಕ್ಷಕ್ಕೆ ನೂರರಂತೆ ಚೆಕ್ ಕಳುಹಿಸಿದ್ದಾರೆ ಎಂದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಸುಬೇದಾರ ಮಾತನಾಡುತ್ತಾ, ಈ ವಿಷಯವನ್ನು ಗಂಭೀರವೆಂದು ಪರಿಗಣಿಸಿ ಈ ರೀತಿ ರೈತರಿಗೆ ಅನ್ಯಾಯ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಇಂತಹ ವಿಚಾರವನ್ನೆ ಮುಂದಿಟ್ಟುಕೊಂಡು ಬೇರೆ ಬೇರೆ ಸಕ್ಕರೆ ಕಾರ್ಖಾನೆಯವರು ರೈತರಿಗೆ ಅನ್ಯಾಯ ಮಾಡುವರು, ಆದ್ದರಿಂದ ಕಠಿಣವಾದ ಆದೇಶ ಮಾಡಬೇಕು ಹಾಗೆ ಸಕ್ಕರೆ ಆಯುಕ್ತರಿಗೂ ಒಂದು ಸಲ್ಲಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು, ಇದು ಕೋರ್ಟ್ ಆರ್ಡರ್ ಆಗಿದೆ, ನೀವೂ ಇದಕ್ಕೆ ತಡೆಯಾಜ್ಞೆ ತಂದು, ಅಲ್ಲಿಂದಲೇ ಪರಿಹಾರ ಪಡೆದುಕೊಳ್ಳಬೇಕಾಗುವುದು, ಅದೇರೀತಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸಕ್ಕರೆ ಆಯುಕ್ತರಿಗೂ ಮತ್ತು ಕಾರ್ಮಿಕ ಆಯುಕ್ತರಿಗೂ ಒಂದು ವರದಿ ಕಳುಹಿಸುತ್ತೆವೆ ಎಂದರು.
ಈ ವೇಳೆ ಇಂಡಿ ಉಪ ವಿಭಾಗಾಧಿಕಾರಿ ಆಭೀದ ಗದ್ಯಾಳ, ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ಮಾಹಾಂತೇಶ ಮಮದಾಪುರ, ತಾ ಅಧ್ಯಕ್ಷ ಮಹಾದೇವಪ್ಪ ತೇಲಿ ಸೇರಿದಂತೆ ಕೃಷಿ ಕಾರ್ಮಿಕರು ಹಾಗೂ ಟ್ರಾಕ್ಟರ್ ಮಾಲಿಕರಾದ ಅಣ್ಣಪ್ಪ ಗುರುಪಾದ ವಾಡಿ, ಶಾಂತಪ್ಪ ಶಂಕ್ರಪ್ಪ ಹಿರೇಕುರುಬರ, ಕಾಶಿನಾಥ ಚೌಗಲೆ, ಶಿವಶರಣ ನಾಟಿಕಾರ, ಗಿರಿಮಲ್ಲ ಬಿರಾದಾರ, ವಿಠ್ಠಲ ಅರ್ಜುಣಗಿ, ಸಾಹೇಬಲಾಲ ಚಪ್ಪರಬಂದ, ಜಗದೇವಪ್ಪ ಬಬಲಾದ, ಅಮೋಘಸಿದ್ದ ಬೇವನೂರ, ಸಿದ್ದರಾಮ ಭೀಸೆ, ಮಲ್ಲಿಕಾರ್ಜುನ ತಡಲಗಿ, ಶಶಿಕಾಂತ ಬಿರಾದಾರ, ಭೈರಪ್ಪ ಚೌಗಲೆ, ರಮೇಶ ದಯಗೋಡೆ ಸೇರಿದಂತೆ ಅನೇಕರು ಇದ್ದರು.

