–ಶೈಲಾ ಇಂದುಶೇಖರ
ವಿಜಯಪುರ: ತಾನು ಇಷ್ಟಪಡುವ ರಾಜಕಾರಣಿಯೋರ್ವ ಈ ಬಾರಿಯ ವಿದಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಶಾಸಕನಾಗಬೇಕೆಂದು ದೇವರಿಗೆ ಹರಕೆ ಹೊತ್ತು ಕೂಲಿ ಕಾರ್ಮಿಕನೋರ್ವ ಕಠಿಣ ವ್ರತ ಕೈಗೊಂಡ ವಿನೂತನ ಸಂಗತಿ ಇದೀಗ ಬೆಳಕಿಗೆ ಬಂದಿದೆ.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಇಂಗಳಗಿ ಎಂಬ ಪುಟ್ಟ ಗ್ರಾಮದ 21 ವರ್ಷದ ತರುಣ ಆಕಾಶ ಸಣ್ಣಪ್ಪ ಪೂಜಾರಿ ಹರಕೆ ಹೊತ್ತ ಯುವಕ. ಇವನು ಆರಾಧಿಸುವ ರಾಜಕಾರಣಿ ಸಿಂದಗಿಯ ಕಾಂಗ್ರೆಸ್ ನೇತಾರ ಅಶೋಕ ಮನಗೂಳಿ.
ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ಆಕಾಶ್ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸುವ ಅರ್ಹತೆ ಹೊಂದಿದ್ದಾನೆ. ಇವನಿಗೆ ತಾನು ಆರಾಧಿಸುವ ಅಶೋಕ ಮನಗೂಳಿ ಅವರಿಗೆ ಮತ ಹಾಕಲು ಸಾಧ್ಯವಾಗದು. ಕಾರಣ ಇವನದು ದೇವರಹಿಪ್ಪರಗಿ ಮತಕ್ಷೇತ್ರ. ತನ್ನ ಮತಕ್ಷೇತ್ರಕ್ಕೆ ಸಂಬಂಧಿಸಿರದಿದ್ದರೂ ಆಕಾಶ್ ಪೂಜಾರಿ ತಾನು ಆರಾಧಿಸುವ ನಾಯಕ ಅಶೋಕ ಮನಗೂಳಿ ಈ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ವಿಧಾನಸೌಧ ಪ್ರವೇಶಿಸಬೇಕೆಂದು ಗ್ರಾಮದ ಆರಾಧ್ಯ ಧೈವಗಳಾದ ಅಮೋಘಸಿದ್ದೇಶ್ವರ ಮತ್ತು ಸನಗೊಂಡ ಸಿದ್ದೇಶ್ವರ ದೇವರಿಗೆ ಹರಕೆ ಹೊತ್ತಿದ್ದಾನೆ.
ಏನಿದು ಹರಕೆ..?

ತನ್ನ ಹರಕೆ ಫಲಿಸಲೆಂದು ಐದು ಬುಧವಾರಗಳಂದು ಸ್ನಾನದ ನಂತರ ಅದೇ ಒದ್ದೆಬಟ್ಟೆಯಿಂದಲೇ ಇಂಗಳಗಿ ಕ್ರಾಸಿನಿಂದ ಅಮೋಘಸಿದ್ದೇಶ್ವರ ಗುಡಿಯವರಿಗೆ ಉರುಳು ಸೇವೆ ಸಲ್ಲಿಸುವುದಾಗಿ ದೇವರಿಗೆ ಹರಕೆ ಹೊತ್ತಿದ್ದಾನೆ. ಈ ಪ್ರಕಾರ ಈತ ಈಗಾಗಲೇ ಎರಡು ಬುಧವಾರ (ನಿನ್ನೆ ಏಪ್ರಿಲ್ 5 ಸೇರಿ) ಸುಮಾರು 1.5 ಕಿ.ಮಿ ದೂರ ಕಚ್ಚಾ ರಸ್ತೆಯಲ್ಲಿ ಬೆಳಗ್ಗೆ ಏಳು ಗಂಟೆಗೆ ಉರುಳು ಸೇವೆ ಪ್ರಾರಂಭಿಸಿದರೆ ದೇವಸ್ಥಾನ ತಲುಪಲು ಎರಡೂವರೆಯಿಂದ ಮೂರು ಗಂಟೆಗಳ ಕಾಲಾವಧಿ ಬೇಕು. ಸೇವೆ ಆರಂಭಿಸಿದ ಬಳಿಕ ಶರೀರಕ್ಕೆ ಅದೆಷ್ಟೇ ನೋವಾದರೂ ಲೆಕ್ಕಿಸದೆ, ಒಂದು ಕ್ಷಣ ವಿರಾಮ ಪಡೆಯದೇ ತನ್ನ ಹರಕೆಯನ್ನು ಪೂರ್ಣಗೊಳಿಸುವ ದಿಸೆಯಲ್ಲಿ ದೃಢ ನಿರ್ಧಾರದಿಂದ ಉರುಳು ಸೇವೆ ಮಾಡುತ್ತಿದ್ದಾನೆ. ಇವನ ಹರಕೆ ಪೂರ್ಣಗೊಳ್ಳಲು ಇನ್ನೂ ಮೂರು ಬುಧವಾರ ಬಾಕಿ ಇದೆ.
ಈ ಕುರಿತು ಪತ್ರಿಕೆ ಪ್ರಶ್ನೆಗಳೊಂದಿಗೆ ಆಕಾಶನನ್ನು ಸಂಪರ್ಕಿಸಿದಾಗ ಅವನು ಹೇಳಿದ್ದಿಷ್ಟು..
“ಅಶೋಕ ಮನಗೂಳಿ ಅವರೊಂದಿಗೆ ನನ್ನ ಸಂಪರ್ಕವಿಲ್ಲ. ನಮ್ಮ ಮನೆಯವರೆಲ್ಲ ಅವರ ತಂದೆ, ಮಾಜಿ ಸಚಿವ ಎಂ ಸಿ ಮನಗೂಳಿ ಅವರ ಅಭಿಮಾನಿಗಳು. ಸಿಂದಗಿ-ದೇವರಹಿಪ್ಪರಗಿ ಅವಿಭಜಿತ ಮತಕ್ಷೇತ್ರವಿದ್ದಾಗ ಈ ಭಾಗದ ಅಭಿವೃದ್ಧಿಗೆ ಅವರು ಸಾಕಷ್ಟು ಶ್ರಮಿಸಿದ್ದಾರೆ. ಹೀಗಾಗಿ ನನಗೆ ತಿಳುವಳಿಕೆ ಬಂದಾಗಿನಿಂದ ನಾನು ಅಶೋಕ ಮನಗೂಳಿ ಅವರ ಅಭಿಮಾನಿಯಾಗಿರುವೆ. ಅವರು ಶಾಸಕರಾಗಲೇಬೇಕೆಂಬ ನನ್ನ ಮಹಾ ಹಂಬಲ ನನ್ನನ್ನು ದೇವರಿಗೆ ಮೊರೆ ಇಡುವಂತೆ ಮಾಡಿತು. ಇದು ಕಷ್ಟದ ವೃತ ಎಂದು ಗೊತ್ತಿದ್ದರೂ ಅಶೋಕ ಮನಗೂಳಿ ಅವರು ಶತಾಯಗತಾಯ ಶಾಸಕರಾಗಲೇಬೇಕೆಂದು ಈ ಹರಕೆ ಕೈಗೊಂಡಿರುವೆ” ಎಂದರು.
ಸಾಮಾಜಿಕ ಜಾಲತಾಣದ ಮೂಲಕ ವಿಷಯ ಅರಿತ ಅಶೋಕ ಮನಗೂಳಿ ಅವರು ನಿನ್ನೆ ನನ್ನೊಂದಿಗೆ ಫೋನ್ ನಲ್ಲಿ ಮಾತನಾಡಿ, “ಇಷ್ಟು ತ್ರಾಸ್ ಮಾಡಿಕೊಂಡು ಯಾಕೆ ಇಂತಹ ವ್ರತ ಮಾಡುತ್ತಿದ್ದಿ?, ನನ್ನ ಹಣೆದಾಗ ಬರದಂಗ ಆಗ್ತದ ಬಿಡು. ನೀನು ನನಗಾಗಿ ತೊಂದರೆ ತಗೋಬೇಡ. ನಿನ್ನ ಪ್ರೀತಿಯ ಅಭಿಮಾನಕ್ಕೆ ನಾನು ಋಣಿ” ಅಂತ ಭಾಳ ಕಾಳಜಿಯಿಂದ ಹೇಳಿದ್ರು ಅನ್ನುತ್ತಾನೆ ಆಕಾಶ್.
ನನ್ನ ಈ ಹರಕೆ ಕುರಿತು ನನ್ನ ಹಿಂದೆ ಯಾರು ಏನೇ ಅಂದ್ರೂ ನಾನು ತಲೆಕೆಡಿಸಿಕೊಳ್ಳಲ್ಲ. ನನ್ನ ಹರಕೆಯನ್ನು ಶ್ರದ್ಧಾಭಕ್ತಿಯಿಂದ, ನಿಷ್ಠೆಯಿಂದ ಪೂರ್ಣಗೊಳಿಸುವೆ. ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್ ಅಂತಹ ಮಹಾ ನಾಯಕರಿಗೇ ಅನ್ನುವುದು ಬಿಟ್ಟಿಲ್ಲ ನಮ್ಮ ಜನ. ಇನ್ನು ನಾನೆಷ್ಟರವನು? ಎಂದು ವೇದಾಂತಿಯಂತೆ ಉತ್ತರಿಸಿದ ಆಕಾಶ್ ಪೂಜಾರಿ.