“ಸಿನಿ ತಿರುಳು”
– ವೀಣಾ ಹೇಮಂತಗೌಡ ಪಾಟೀಲ್. ಮುಂಡರಗಿ-ಗದಗ
ಉತ್ತರ ಭಾರತದ ಸೂರಜ್ ಮುಖಿ ಎಂಬ ಗ್ರಾಮದ ಯುವಕ ದೀಪಕ್ ಕುಮಾರ್ ಮದುವೆಯಾಗಿ ತನ್ನ ಪತ್ನಿ ಪೂಲ್ ಕುಮಾರಿ ಯೊಂದಿಗೆ ತನ್ನೂರಿಗೆ ಮರಳಿ ಬರುತ್ತಿದ್ದನು. ರೈಲಿನಲ್ಲಿ ಮತ್ತೂ ಎರಡು ಜೋಡಿ ವಧು ವರರು ಇದ್ದು, ಇಳಿ ಸಂಜೆಯ ಹೊತ್ತಿನಲ್ಲಿ ಎಲ್ಲರೂ ನಿದ್ರಾವಶರಾಗಿದ್ದಾಗ ಮುಸುಗು ಹಾಕಿಕೊಂಡು ಮಲಗಿದ್ದ ವಧುಗಳಲ್ಲಿ ತನ್ನ ಪತ್ನಿ ಎಂದು ಬೇರೊಬ್ಬ ಹೆಣ್ಣುಮಗಳನ್ನು ಎಬ್ಬಿಸಿ ಕರೆದುಕೊಂಡು ಬಂದದ್ದು ಮನೆಗೆ ಬಂದ ನಂತರ ಎಲ್ಲರಿಗೂ ನಡೆದ ತಪ್ಪಿನ ಅರಿವಾಗುತ್ತದೆ. ಈತನ ಜೊತೆಗೆ ಬಂದ ಮಹಿಳೆ ತನ್ನ ಉದ್ದೇಶ ಸಾಧನೆಗಾಗಿ ಬಂದಿದ್ದು ಆಕೆಯ ನಡಾವಳಿ ತುಸು ಸಂಶಯದಿಂದ ಕೂಡಿರುತ್ತದೆ. ಇತ್ತ ಆತನ ಪತ್ನಿ ಫೂಲ್ ಕುಮಾರಿ ಕೊನೆಯ ಸ್ಟೇಷನ್ ನಲ್ಲಿ ಇಳಿದು ಜೊತೆಯಲ್ಲಿ ತನ್ನ ಪತಿ ಇಲ್ಲದೆಯಿದ್ದದ್ದು ನೋಡಿ ಗಾಬರಿಯಾಗುತ್ತಾಳೆ. ಸ್ಟೇಷನ್ ನಲ್ಲಿ ತನಗೆ ಪರಿಚಯವಾದ ಅನಾಥ ವ್ಯಕ್ತಿಯ ಜೊತೆಗೆ ಹೋಗಿ ಸ್ಟೇಷನ್ ಮಾಸ್ಟರ್ ರಲ್ಲಿ ಆಕೆ ದೂರನ್ನು ನೀಡುತ್ತಾಳೆ. ಸ್ಟೇಷನ್ ನಲ್ಲಿ ಚಹಾದ ಅಂಗಡಿ ಇಟ್ಟುಕೊಂಡಿದ್ದ ಮಂಜು ತಾಯಿ, ಓರ್ವ ಅಂಗವಿಕಲ ವ್ಯಕ್ತಿ ಮತ್ತು ಓರ್ವ ಅನಾಥ ವ್ಯಕ್ತಿ ಆಕೆಗೆ ಆಸರೆಯಾಗಿ ದೊರೆತು ಅವರೊಂದಿಗೆ ಕೆಲಸ ಮಾಡುತ್ತಾ ಆಕೆ ತನ್ನ ಪತಿಯ ಬರವಿಗಾಗಿ ನಿರೀಕ್ಷೆ ಮಾಡುತ್ತಾಳೆ.
ಇತ್ತ ದಿಲೀಪ್ ಕುಮಾರ್ ನ ಜೊತೆ ಬಂದ ವ್ಯಕ್ತಿ ತನ್ನ ಹೆಸರು ಜಯ ಎಂದು ಹೇಳಿಕೊಂಡು ಮದುವೆಯಲ್ಲಿ ತನ್ನ ಪತಿಗೆ ತನ್ನ ತವರಿನವರಿಂದ ವರದಕ್ಷಿಣೆಯ ಭಾಗವಾಗಿ ದೊರೆತ ಮೊಬೈಲ್ ಫೋನನ ಸಿಮ್ ಕಾರ್ಡ್ ಅನ್ನು ಸುಟ್ಟುಹಾಕಿ ಮತ್ತೊಂದು ಸಿಮ್ ಹಾಕಿಕೊಳ್ಳುತ್ತಾಳೆ. ದಿಲೀಪ್ ಕುಮಾರ್ ಮತ್ತು ಆರಕ್ಷಕ ಠಾಣೆಯ ಅಧಿಕಾರಿಗಳ ಒತ್ತಾಯದ ಮೇರೆಗೆ ದೂರು ದಾಖಲಿಸುವ ಆಕೆ ಮುಸುಗು ತೆಗೆದ ತನ್ನ ಭಾವಚಿತ್ರವನ್ನು ತೆಗೆಯಲು ಅನುವು ಮಾಡಿಕೊಡುವುದಿಲ್ಲ. ಆಕೆಯ ಮೇಲೆ ನಿಗಾ ಇರಿಸಿ ಬೆಂಬತ್ತಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಆಕೆ ಚಿನ್ನದ ಅಂಗಡಿಯಲ್ಲಿ ಚಿನ್ನವನ್ನು ಮಾರಿ ಆ ಹಣವನ್ನು ಹೇಮಾ ಎಂಬ ವ್ಯಕ್ತಿಗೆ ಮನಿ ಆರ್ಡರ್ ಮೂಲಕ ನಾಲ್ಕು ಬಾರಿ ಕಳುಹಿಸಿರುವುದು ಗೊತ್ತಾಗುತ್ತದೆ, ಅದರ ಜೊತೆಗೆ ಆಕೆ ಟ್ರಾವೆಲ್ ಏಜೆನ್ಸಿಯಲ್ಲಿ ದೆಹಲಿ ಮೂಲಕ ಡೆಹರಾಡೂನ್ಗೆ ಪ್ರಯಾಣ ಬೆಳೆಸುತ್ತಿರುವುದು ಗೊತ್ತಾಗುತ್ತದೆ. ಇತ್ತ ಮನೆಯವರೊಂದಿಗೆ ಆತ್ಮೀಯ ಸಂಬಂಧವನ್ನು ಬೆಳೆಸಿಕೊಂಡ ಜಯ ಮನೆಯ ಹೆಣ್ಣು ಮಕ್ಕಳಲ್ಲಿ ನಮ್ಮ ಪ್ರತಿಭೆಯನ್ನು ನಾವು ಹತ್ತಿಕ್ಕಬಾರದು, ನಮಗಾಗಿಯೂ ನಾವು ಬದುಕಬೇಕು ಎಂಬ ಅರಿವನ್ನು ಮೂಡಿಸುತ್ತಾಳೆ. ದುಡಿಮೆಗಾಗಿ ದೂರದ ಊರಿನಲ್ಲಿರುವ ಪತಿಯ ನೆನಪಿನಲ್ಲಿ ಕಾಲ ಕಳೆಯುವ ದಿಲೀಪ್ ಕುಮಾರನ ಅತ್ತಿಗೆಯ ಚಿತ್ರರಚನಾ ಶಕ್ತಿಯನ್ನು ಪ್ರೋತ್ಸಾಹಿಸಿ ಆಕೆಗೆ ಬದುಕಿನಲ್ಲಿ ಆಸಕ್ತಿ ಮೂಡಿಸುತ್ತಾಳೆ. ಹೊಲದ ಫಸಲಿಗೆ ಕೀಟಗಳು ಮುಕುರಿದಾಗ ಅವುಗಳ ನಿವಾರಣೆಗೆ ಆಕೆ ಪಡುವ ಪ್ರಯತ್ನವನ್ನು ಕಂಡು ಕೃಷಿಯನ್ನು ಕುರಿತ ಆಕೆಯ ಆಸಕ್ತಿ ಮತ್ತು ತಿಳುವಳಿಕೆಗೆ ಎಲ್ಲರೂ ಬೆರಗಾಗುತ್ತಾರೆ. ಈ ಮಧ್ಯದಲ್ಲಿ ದಿಲೀಪ್ ಪತ್ನಿಯನ್ನು ಕಳೆದುಕೊಂಡು ಒದ್ದಾಡುತ್ತಿರುವುದನ್ನು ಗಮನಿಸಿ ಆತನ ಪತ್ನಿಯ ರೇಖಾ ಚಿತ್ರವನ್ನು ದಿಲೀಪನ ಅತ್ತಿಗೆಯಿಂದ ರಚಿಸಿ ಅದರ ಕಂಪ್ಯೂಟರ್ ಪ್ರತಿ ತೆಗೆದು ಪೂಲ್ ಕುಮಾರಿ ಯನ್ನು ಹುಡುಕಲು ಅವಶ್ಯಕ ಕ್ರಮಗಳನ್ನು ದಿಲೀಪ್ ನ ಸ್ನೇಹಿತನ ಸಹಾಯದಿಂದ ಕೈಗೊಳ್ಳುತ್ತಾಳೆ.
ಮುಂದಿನ ಎರಡೇ ದಿನಗಳಲ್ಲಿ ಜಯಾಳನ್ನು ಬಂಧಿಸಿ ಠಾಣೆಗೆ ಕರೆದೊಯ್ಯುವ ಪೊಲೀಸ್ ಅಧಿಕಾರಿ, ದಿಲೀಪ್ ಮತ್ತು ಸ್ನೇಹಿತರಿಗೆ ಜಯ ತನ್ನ ಪ್ರವರವನ್ನು ಬಿಚ್ಚಿಡುತ್ತಾಳೆ ಜಯಾ.
ಈಗಾಗಲೇ ಪಿಯುಸಿ ಓದಿರುವ ಆಕೆ ಕೃಷಿಯಲ್ಲಿ ಆಸಕ್ತಿ ಹೊಂದಿದ್ದು ಡೆಹರಾಡೂನ್ ಗೆ ಹೋಗಿ ಕೃಷಿಯಲ್ಲಿ ಪದವಿಯನ್ನು ಪಡೆಯುವ ತನ್ನ ಆಸಕ್ತಿಯನ್ನು ತಾಯಿಗೆ ಹೇಳಿದಾಗ ಇನ್ನೊಂದು 15 ದಿನಗಳಲ್ಲಿ ಮದುವೆ ಇದ್ದು, ಹೊಲವನ್ನು ಮಾರಿ ಒಡವೆ ವಸ್ತ್ರಗಳನ್ನು ಹೊಂದಿಸಿದ್ದು ಯಾವುದೇ ನಖರೆ ಮಾಡದೇ ಮದುವೆಯಾಗಬೇಕು ಇಲ್ಲದಿದ್ದರೇ ನಮ್ಮ ಹೆಣ ನೋಡಬೇಕಾಗುತ್ತದೆ ಎಂಬ ತಾಯಿಯ ಬೆದರಿಕೆಗೆ ಹೆದರಿ ವಿವಾಹವಾಗಿ ಗಂಡನ ಮನೆಗೆ ತೆರಳುವ ಸಮಯದಲ್ಲಿ ಆಕೆ ರೈಲಿನಲ್ಲಿ ದಿಲೀಪ್ ಕುಮಾರ್ ದಂಪತಿಗಳನ್ನು ಆಕಸ್ಮಿಕವಾಗಿ ನೋಡುತ್ತಾಳೆ. ಈಗಾಗಲೇ ತನ್ನ ಪತಿಗೆ ಮೊದಲ ಮದುವೆಯಾಗಿದ್ದು ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡು ಸತ್ತುಹೋಗಿದ್ದಳು ಎಂಬ ಗುಸು ಗುಸು ಮಾತುಗಳನ್ನು ಮದುವೆಯ ಮನೆಯಲ್ಲಿ ಕೇಳಿದ ಆಕೆ ಉದ್ದೇಶಪೂರ್ವಕವಾಗಿ ದಿಲೀಪ್ ಕುಮಾರನನ್ನು ಹಿಂಬಾಲಿಸಿ ಬರುತ್ತಾಳೆ. ಇಲ್ಲಿಗೆ ಬಂದ ನಂತರ ತನ್ನನ್ನು ಅರ್ಥ ಮಾಡಿಕೊಳ್ಳುವ ತನ್ನ ಹಿರಿಯ ಸಹೋದರಿ ಹೇಮಾಳೊಂದಿಗೆ ಸಂಪರ್ಕದಲ್ಲಿದ್ದು ತನ್ನ ಕೈಬಳೆಯನ್ನು ಮಾರಿ ಆ ಹಣವನ್ನು ಮನಿ ಆರ್ಡರ್ ಮೂಲಕ ತನ್ನ ಸಹೋದರಿಗೆ ತಲುಪಿಸಿ ಡೆಹ್ರಾಡೂನ್ ನ ಕೃಷಿ ಕಾಲೇಜಿನಲ್ಲಿ ಪ್ರವೇಶ ಪಡೆದಿರುತ್ತಾಳೆ.
ಈ ವಿಷಯವನ್ನು ಮೊದಲೇ ಹೇಳಬೇಕಿತ್ತು ಎಂಬ ಪೊಲೀಸ್ ಅಧಿಕಾರಿ ಮತ್ತು ದಿಲೀಪ್ ಕುಮಾರನ ಮಾತಿಗೆ ಆಕೆ ನನ್ನ ತಂದೆ ತಾಯಿಯೇ ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ ಅಂತದ್ದರಲ್ಲಿ ಒಂದೆರಡು ದಿನ ಪರಿಚಯವಾದ ನೀವುಗಳು ನನ್ನನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೀರಿ? ಮುಸುಗಿನ ಒಳಗೆ ಒದ್ದಾಡುವ ನಮ್ಮ ನೋವು ನಿಮಗೆ ಹೇಗೆ ಅರಿವಾಗುತ್ತದೆ ಎಂದು ಮರು ಪ್ರಶ್ನಿಸಿದಳು. ಅದೇ ಸಮಯಕ್ಕೆ ಪೂಲ್ ಕುಮಾರಿಗೆ ತನ್ನ ಭಾವಚಿತ್ರವಿರುವ ಪ್ರಕಟಣೆಯ ಪತ್ರ ದೊರೆತು ತನ್ನ ಪತಿಯ ಊರಿನ ಪತ್ತೆಯಾಗುತ್ತದೆ. ಆಕೆಯನ್ನು ಸ್ಟೇಷನ್ ಮಾಸ್ಟರ್, ಮಂಜು ತಾಯಿ, ಚೋಟು ಮತ್ತು ಅಂಗವಿಕಲ ವ್ಯಕ್ತಿ ಆಕೆಯ ಪತಿಯ ಊರಿಗೆ ರೈಲು ಹತ್ತಿಸಿ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯವನ್ನು ಮುಟ್ಟಿಸುತ್ತಾರೆ.
ಇತ್ತ ಈಗಾಗಲೇ ಪೊಲೀಸ್ ಹಿರಿಯ ಅಧಿಕಾರಿ ಯಿಂದ ವಿಷಯವನ್ನು ಅರಿತ ಜಯಾಳ ಗಂಡ ಪೊಲೀಸ್ ಠಾಣೆಯಲ್ಲಿ ತನ್ನ ಪತ್ನಿಯ ಕೆನ್ನೆಗೆ ಹೊಡೆದು ದೌರ್ಜನ್ಯ ತೋರುವುದನ್ನು ಕಂಡ ಪೊಲೀಸ್ ಅಧಿಕಾರಿ ಕೂಡಲೇ ಆತನನ್ನು ಗದರಿಸಿ, ಇನ್ನೊಮ್ಮೆ ಆಕೆಯ ತಂಟೆಗೆ ಹೋಗದಿರುವಂತೆಯೂ, ಹಾಗೇನಾದರೂ ಆಕೆಗೆ ತೊಂದರೆ ನೀಡಿದಲ್ಲಿ ಆತನ ಮೊದಲ ಹೆಂಡತಿಯ ಸಾವಿನ ಕೇಸಿನ ಫೈಲ್ ಅನ್ನು ಮತ್ತೆ ಓಪನ್ ಮಾಡುವುದಾಗಿ ಎಚ್ಚರಿಸಿ ಕಳುಹಿಸುತ್ತಾರೆ. ಜಯಕುಮಾರಿಗೆ ಆಕೆಯ ತಾಯಿಯಿಂದ ಉಡುಗೊರೆಯಾಗಿ ಬಂದ ಒಡವೆಗಳೆಲ್ಲವನ್ನು ನೀಡಿ ಚೆನ್ನಾಗಿ ಓದಿ ಒಳ್ಳೆಯ ಬದುಕು ನಡೆಸುವಂತೆ ಆಶೀರ್ವದಿಸಿ ಕಳುಹಿಸುತ್ತಾರೆ. ರೈಲ್ವೆ ಸ್ಟೇಷನ್ ಗೆ ಬಂದ ದಿಲೀಪ್ ಕುಮಾರನನ್ನು ಪತ್ನಿ ಪೂಲ್ ಕುಮಾರಿ ಹೆಸರು ಹಿಡಿದು ಕರೆಯುವುದರ ಮೂಲಕ ಮಂಜು ತಾಯಿ ಹೇಳಿದ ಮೊದಲ ಸ್ವಾವಲಂಬಿತನವನ್ನು ಕಲಿಯುತ್ತಾಳೆ. ಮುಂದಿನ ಒಂದೆರಡು ದಿನಗಳಲ್ಲಿ ಎಲ್ಲರೂ ಸೇರಿ ಜಯಳನ್ನು ಆಕೆಯ ಗಮ್ಯಸ್ಥಾನಕ್ಕೆ ಕಳುಹಿಸುತ್ತಾರೆ.
ಮೊದಲರ್ಧ ಭಾಗ ತುಸು ಎಳೆದಂತೆ ತೋರುವ ನಂತರದ ಭಾಗದಲ್ಲಿ ಅತ್ಯಂತ ಚುರುಕಾಗಿ ಓಡುವ ಕಥೆ ಹೃದಯಸ್ಪರ್ಶಿಯಾಗಿದೆ. 21ನೇ ಶತಮಾನದಲ್ಲಿ ಇದ್ದರೂ ಹೆಣ್ಣು ಮಕ್ಕಳು ಕೇವಲ ಅಡುಗೆ ಮನೆಗೆ ಮಾತ್ರ ಮೀಸಲು ಎಂಬ ಪುರುಷಾಹಂಕಾರ ಪ್ರಜ್ಞೆಗೆ ಮಣಿಯುವ ಸಮಾಜದ ಮೌಢ್ಯಗಳನ್ನು, ತಥಾ ಕಥಿತ ಸಂಪ್ರದಾಯಗಳನ್ನು ಪ್ರಶ್ನಿಸುವಲ್ಲಿ ಈ ಚಿತ್ರ ಯಶಸ್ವಿಯಾಗಿದೆ. ಅತ್ಯಂತ ಹೃದಯಸ್ಪರ್ಶಿಯಾಗಿ ಮೂಡಿಬಂದಿರುವ ಅಂತಿಮ ದೃಶ್ಯಗಳು ನೋಡುಗರ ಕಣ್ಣಲ್ಲಿ ನೀರು ತರಿಸುವುದಂತು ನಿಜ. ಭಾವನಾತ್ಮಕವಾಗಿ ಹೆಣ್ಣು ಅನುಭವಿಸುವ ನೋವು ಸಂಕಟ ಅತಂತ್ರ ಸ್ಥಿತಿಗಳನ್ನು ಹೃದಯ ಸ್ಫರ್ಶಿಯಾಗಿ ಬಿಚ್ಚಿಟ್ಟಿರುವ ಕಥೆ ಎರಡು ದಶಕಗಳ ಹಿಂದೆ ನಡೆದಿದೆ ಎನ್ನಲಾಗುತ್ತದೆ.
ಕಿರಣ್ ರಾವ್ ನಿರ್ದೇಶನದ ಈ ಚಿತ್ರ ಪ್ರಸ್ತುತ ಸಮಾಜದಲ್ಲಿ ಹಾಸು ಹೊಕ್ಕಾಗಿರುವ ಮೂಢ ನಂಬಿಕೆಗಳ ವಿರುದ್ಧ, ಸಂಪ್ರದಾಯಗಳ ವಿರುದ್ಧ ಧ್ವನಿ ಎತ್ತುವುದರ ಜೊತೆ ಜೊತೆಗೆ ಸಮಾಜದಲ್ಲಿ ನೆಲೆಯಾಗಿರುವ ಪ್ರೀತಿ ಅಂತಃಕರಣ ಮತ್ತು ಮಾನವೀಯ ಸೆಲೆ ಗಳನ್ನು ಕೂಡ ಹೊರಹೊಮ್ಮಿಸುತ್ತದೆ.
ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಇಂದಿಗೂ ಕೂಡ ಹೆಣ್ಣು ಮಕ್ಕಳನ್ನು ಹೀನಾಯವಾಗಿ ನಡೆಸಿಕೊಳ್ಳುವ ಪ್ರವೃತ್ತಿಗೆ ಹಿಡಿದ ಕನ್ನಡಿ ಯಾಗಿದೆ. ಈ ಚಲನಚಿತ್ರ ಲಾಪತಾ ಲೇಡೀಸ್
– ವೀಣಾ ಹೇಮಂತಗೌಡ ಪಾಟೀಲ್. ಮುಂಡರಗಿ-ಗದಗ