ಮನಸ್ಸನ್ನು ಇನ್ನೆಷ್ಟು ಹತೋಟಿಗೆ ತರಲಿ, ಆಗುತ್ತಿಲ್ಲ ನನಗೆ. ಹೌದು ನನ್ನಲ್ಲಿ ಏನೋ ಬದಲಾವಣೆ ಆಗುತ್ತಿದೆ. ಇದು ಸರಿಯಲ್ಲ.ದೇವರು ನನ್ನನ್ನು ಗಂಡು ಹುಡುಗನ ಶರೀರ ಕೊಟ್ಟು ಹುಟ್ಟಿಸಿದ್ದಾನೆ.ಆದರೆ ಇಂದೇಕೆ ನನಗೆ ಆ ಹುಡುಗಿಯ ಬಳೆ ಕುಂಕುಮ, ಜುಮುಕಿಯ ಮೇಲೆ ಎಲ್ಲಿಲ್ಲದ ಆಸೆ?
ಅಮ್ಮ ನನಗೆ ಅಕ್ಕನ ಚಿಕ್ಕ ಫ್ರಾಕ್ ಹಾಕಿ ಫೋಟೋ ತೆಗೆಸಿದ್ದಳಂತೆ. ಆ ದಿನ ಫ್ರಾಕ್ ಹಾಕಬೇಡ ಎಂದು ತುಂಬಾ ಅತ್ತಿದ್ದೆನೆಂದು ಅಕ್ಕ ಹೇಳುತ್ತಲಿರುತ್ತಾಳೆ. ಇಂದು ನನಗೆ ಅದೇ ಅಕ್ಕನ ಬಟ್ಟೆಯ ಮೇಲೆ ಎಲ್ಲಿಲ್ಲದ ವ್ಯಾಮೋಹ.ಆಹಾ! ಅಕ್ಕ ಹಾಕಿಕೊಳ್ಳುವ ಜುಮುಕಿ ಎಷ್ಟು ಸುಂದರ.ಒಮ್ಮೆಯಾದರೂ ಆ ಜುಮುಕಿ ಹಾಕಿಕೊಳ್ಳಬೇಕೆಂಬ ತುಡಿತ. ಅಬ್ಬಾ….ಸುಂದರ ಮಾಲೆ,ತಲೆ ತುಂಬಾ ಕೂದಲು,ಉದ್ದ ಜಡೆ ಇದೆಲ್ಲವನ್ನೂ ಅನುಭವಿಸಬೇಕೆಂಬ ಹಂಬಲ ಯಾಕೆ?? ಇವೆಲ್ಲ ನನ್ನ ಬದುಕಲ್ಲಿ ಇರದೇ ಇದ್ದರೆ ಎಲ್ಲಿ ನನ್ನ ಉಸಿರೇ ನಿಲ್ಲುತ್ತದೋ ಎನ್ನುವ ಮಟ್ಟದ ಸಂಕಟ.
ಏಯ್.. ಹುಚ್ಚ! ನಿನ್ನ ಚಿಗುರು ಮೀಸೆ ನೋಡು.ನಿನ್ನ ಮೈ ಕಟ್ಟು ನೋಡು. ನೋಡಲು ನಾನು ಗಂಡು.ಆದರೆ ಭಾವನೆಗಳು ಹೆಣ್ಣಿನದ್ದು.ಮೊದಲೆಲ್ಲ ನನ್ನಲ್ಲಿ ಈ ರೀತಿಯ ಭಾವಗಳು ಇದ್ದಿರಲಿಲ್ಲ. ಆದರೆ ಈಗ ಹೆಣ್ಮನದ ಭಾವಗಳು ಉಕ್ಕುಕ್ಕಿ ಹರಿಯುತ್ತಿವೆ. ಹಾಗಾದರೆ ನಾನ್ಯಾರು????
ಅತ್ತ ಗಂಡೂ ಅಲ್ಲದೆ ಇತ್ತ ಹೆಣ್ಣು ಅಲ್ಲದ ಇದ್ಯಾವ ಮನುಷ್ಯ ಜಾತಿ? ಹೌದು ನಾನು ಈ ಸಮಾಜದಲ್ಲಿ ಬೇರೆಯೇ! ನಾನು ಬೇರೆಯೋ ಅಥವಾ ಈ ಸಮಾಜವೇ ನಮ್ಮನ್ನು ಬೇರೆಯೇ ಇಟ್ಟಿದೆಯೋ ಅರಿಯೆ.
ಮೊನ್ನೆ ಅಪ್ಪನೊಂದಿಗೆ ಕಾರಲ್ಲಿ ಹೋಗುತ್ತಿರುವಾಗ ಆ ಸಿಗ್ನಲ್ ಇದೆಯಲ್ಲ ಅಲ್ಲಿ ಕೆಲವು ಮಂದಿ ಚಪ್ಪಾಳೆ ತಟ್ಟಿ ದುಡ್ಡಿಗಾಗಿ ಕೈ ಚಾಚುತ್ತಿದ್ದರು. ಯಾಕೋ ಅವರೆಲ್ಲ ನನ್ನ ಬಂಧುಗಳೇನೋ ಅನ್ನಿಸಿ ಬಿಟ್ಟು ಎದೆ ಧಸಕೆಂದಿತು. ನಾನೂ ಅವರಂತೆ ಎಂಬ ಸತ್ಯದರಿವಾಗಿ ಕಣ್ತುಂಬಿ ಕೊಂಡಿತು.
ನನ್ನೆದೆಯಲ್ಲಿ ಈಗ ನೂರು ಪ್ರಶ್ನೆಗಳು.ಯಾಕೆ ನಾವುಗಳು ಇದೇ ಕಸುಬು ಮಾಡುವುದು. ಹೊಟ್ಟೆಪಾಡಿಗಾಗಿ ನಮಗಿರುವುದು ಇದೊಂದೇ ಮಾರ್ಗವೇ?
ನಾವು ಹೀಗೆಯೇ ಬದುಕಬೇಕೆಂದು ಸಂವಿಧಾನದಲ್ಲಿ ಉಲ್ಲೇಖವಿದೆಯೇ?
ಮನುಷ್ಯ ಬಹಳ ಭಾವನಾ ಜೀವಿ ಭಾವನೆಗಳಿಗೆ ಬೆಲೆ ಕೊಡುವಂಥಹ ಪ್ರಾಣಿ. ಹಾಗಾದರೆ ನಮ್ಮ ಶರೀರಕ್ಕೆ, ಹಾಗೆಯೇ ನಮ್ಮಲ್ಲಿನ ಭಿನ್ನವಾದ ಭಾವನೆಗಳಿಗೆ ಯಾಕೆ ಬೆಲೆ ಕೊಡುತ್ತಿಲ್ಲ! …….ಇದು ನಮ್ಮ ತಪ್ಪಾ? ನಾವು ಬಯಸಿ ಪಡೆದಿದ್ದೆ??
ನಾವು ಅದೇ ತಾಯಿಯ ಗರ್ಭದಿಂದ ಜನಿಸಿ ಲ್ಲವೇ!
ನಾವು ಅದೇ ತಾಯಿಯ ಎದೆಹಾಲನ್ನು ಕು ಡಿದಿಲ್ಲವೇ! ಅದೇ
ಲಾಲಿ ಹಾಡಿನಿಂದ ಮಲಗಿಸಿದ ಮುದ್ದುಗಳು ನಾವಲ್ಲವೇ!….
ಬೆಳೆದ ಹಾಗೆ ನಮ್ಮಲ್ಲಾದ, ನಮಗರಿವಿಲ್ಲದೆ ಬದಲಾದ ನಮ್ಮ
ಭಾವನೆಗಳಲ್ಲಿ ನಮ್ಮ ತಪ್ಪೇನು?
ಮುಂಜಾನೆಯಾದರೆ ಸಾಕು,ಯಾರ
ತಲೆ ಉರುಳಿಸಲಿ, ಯಾರ ಆಸ್ತಿನುಂಗಿ ನೀರು ಕುಡಿಯಲಿ ಅನ್ನುವ ಈ ಸಮಾಜದಲ್ಲಿ ನಮ್ಮವರ ಒಗ್ಗಟ್ಟು ,ನಮ್ಮ ಕೂಡಿ ಬದುಕುವ ಬದುಕು ಬರೆಯವರಿಗೆ ಮಾದರಿಯಲ್ಲವೇ.
ನಾನು ಅವನಲ್ಲ ಅವಳು ಎನ್ನುವ ಅರಿವಾದಾಗ ನಮ್ಮವರ ಬದುಕನ್ನು ತೀರಾ ಹತ್ತಿರದಿಂದ ನೋಡಲು ಒಮ್ಮೆ ನಮ್ಮ ಜನಾಂಗದ ಬೀಡಿಗೆ ಹೋಗಿದ್ದೆ.ಆ ಪೂಜೆ ಕ್ಲಿಷ್ಟಕರವಾದ ಆಚರಣೆ, ತಿಂಗಳುಗಟ್ಟಲೆ ಮಾಡುವ ವೃತ, ಭಗವಂತನಲ್ಲಿ ನಮ್ಮವರು ಇಟ್ಟ ನಂಬಿಕೆ,ಆ ಸಮರ್ಪಣಾ ಭಾವ ಆ ಭಕ್ತಿಯ ಪರಾಕಾಷ್ಟೇ ನೋಡಿ ನನ್ನ ಮೈ ಜುಮ್ಮ್ ಎಂದಿತು.
ಅಲ್ಲಿಂದ ಬಂದವನು ನಾನು ಮನೆ ತೊರೆಯಲೇ ಬೇಕೆಂಬ ನಿರ್ಧಾರಕ್ಕೆ ಬಂದೆ. ಎಷ್ಟು ದಿನ ಕಳ್ಳಾಟ ನಡೆದೀತು? ಇಂದಲ್ಲ ನಾಳೆ ಸತ್ಯ ತಿಳಿದು ಸಮಾಜದ ಮುಂದೆ ಬೆತ್ತಲಾಗಲೇ ಬೇಕಿತ್ತು.ನನ್ನ ಬದಲಾದ ರೂಪ ಹೆತ್ತವರಿಗೆ ಸಮಾಜಕ್ಕೆ ಗೊತ್ತಾಗಲೇ ಬೇಕಿತ್ತು. ಸತ್ಯದರಿವಾದೊಡನೆ ಮರ್ಯಾದೆಗಂಜಿ,ಅವರದ್ದೇ ರಕ್ತ ಮಾಂಸ ಹಂಚಿಕೊಂಡು ಬಂದ ಕೂಸೆಂಬುದನ್ನೂ ಮರೆತು ಬೀದಿಗೆ ತಳ್ಳುತ್ತಾರೆಂಬ ಕಹಿ ಸತ್ಯದರಿವು ನನಗಿತ್ತು.ಅವರಾದರೂ ಏನು ಮಾಡಿಯಾರು? ಈ ದುಷ್ಟ ಸಮಾಜದ ಮುಂದೆ ಹೆತ್ತವರೂ ಕೂಡ ಅಸಹಾಯಕರು ತಾನೇ? ಒಂದೊಮ್ಮೆ ಹೆತ್ತವರು ನಮ್ಮ ಪರ ನಿಂತರೂ ಕೂಡ ಅವನಲ್ಲ ಅವಳು ಎಂದು ಗೊತ್ತಾದ ಮೇಲೆ ಶಾಲಾ ಕಾಲೇಜುಗಳಿಗೆ ಸೇರಿಸಿಕೊಳ್ಳುವರೇ?ಹಾಸ್ಟೆಲ್ಗಳಲ್ಲಿ ಇರಲು ಬಿಡುವರೇ?, ಈ ಎಲ್ಲಾ ಅಗ್ನಿ ಪರೀಕ್ಷೆ ದಾಟಿ ಉನ್ನತ ಶಿಕ್ಷಣ ಪಡೆದು ಬಂದರೂ ನೌಕರಿ ದೊರೆಯುತ್ತದೆಯೇ? ಉನ್ನತ ಸ್ಥಾನಮಾನ ಸಿಗುವುದೇ? ಗೊತ್ತು ಇದೆಲ್ಲ ಬರಿ ಹಗಲುಗನಸು.
ಆದರೆ ನಮಗೂ ಎಲ್ಲರಂತೆ ಹೊಟ್ಟೆ ಎಂಬುದು ಇದೆ. ತೃತೀಯ ಲಿಂಗಿಯೋ ಮತ್ತೊಂದೊ ನಾವೂ ಹೊತ್ತು ಹೊತ್ತಿಗೆ ತುತ್ತಿನ ಚೀಲ ತುಂಬಿಸಬೇಕಲ್ಲ. ಅದಕ್ಕಾಗಿ ನಾವು ಬೀದಿಗಿಳಿಯಲೇ ಬೇಕು.ಒಂದೋ ರಾತ್ರಿ ಗಾಳ ಹಾಕಲೇ ಬೇಕು.ಇಲ್ಲಾ ಚಪ್ಪಾಳೆ ತಟ್ಟಿ, ಓಡಾಡುವ ಮಂದಿ ಮುಂದೆ ಕೈ ಚಾಚ ಬೇಕು. ಮನಸ್ಸು ಹಿಂಡಿ ಬಿಡುತ್ತದೆ. ಯಾಕೆಂದರೆ ನಾವು ಹೆಣ್ಣು. ಹೆಣ್ಣಿಗೆ ಮಾನ ಮರ್ಯಾದೆ ಎಷ್ಟು ಮುಖ್ಯ ಎಂಬ ಅರಿವು ನಮಗೂ ಇದೆ. ಆದರೆ ಪರಿಸ್ಥಿತಿಯ ಕೈ ಗೊಂಬೆಗಳು ನಾವು…..
ಇದು ವಿಧಿಯಾಟಕ್ಕೆ ಬಲಿಯಾಗಿ ಪ್ರತಿ ದಿನ ತನ್ನೊಳಗೆ ತಾನೇ ಬೇಯುತ್ತಿರುವ ಹೆಚ್ಚಿನ ತೃತೀಯ ಲಿಂಗಿಗಳ ಮನದ ರೋಧನ. ಕಾಲ ಬದಲಾಗಿದೆ. ಬದಲಾದ ಈ ಕಾಲಮಾನಕ್ಕೆ ತಕ್ಕಂತೆ ನಮ್ಮ ಆಲೋಚನಾ ಧಾಟಿ ಕೂಡ ಬದಲಾಗಲೇ ಬೇಕು.ಒಂದು ಚಂದದ ಬದುಕನ್ನು ಬದುಕುವ ಹಕ್ಕು ಪ್ರತಿ ಮನುಷ್ಯನಿಗೂ ಇದೆ. ಅವರ ಈ ಬದುಕುವ ಹಕ್ಕು ಖುಷಿ ಕಸಿದುಕೊಳ್ಳುವುದು ಮನುಷತ್ವಕ್ಕೆ ಅವಮಾನ. ಇಂತಹ ಕೃತ್ಯ ನಮ್ಮಿಂದ ನಡೆಯಬಾರದು.
ಬಾಳಿ ಬದುಕಲು ಅವರಿಗೂ ಶಿಕ್ಷಣದ ಅವಕಾಶ, ಉದ್ಯೋಗದ ಅವಕಾಶವನ್ನು ಕೊಟ್ಟು,ಆ ದೈವ ಸೃಷ್ಠಿಯನ್ನು ಗೌರವಿಸಿ ಮಾನವೀಯತೆ ಮೆರೆಯೋಣ.