ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ನಮ್ಮ ಬದುಕಿನಲ್ಲಿ ಎದುರಾಗುವ ಅನಿಶ್ಚಿತ ಘಟನೆಗಳು, ಅವಘಡಗಳು ಆರ್ಥಿಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ , ಇಲ್ಲವಾದರೆ ಕುಟುಂಬವನ್ನು ನಿರ್ವಹಿಸಲು ಕಷ್ಟವಾಗುತ್ತದೆ, ಇಂತಹ ಸಮಯದಲ್ಲಿ ಜೀವ ವಿಮೆಗಳು ಸಹಕಾರಿಯಾಗುತ್ತವೆ ಎಂದು ಪ್ರಭುಲಿಂಗೇಶ್ವರ ಸೌಹಾರ್ದ ಪತ್ತಿನ ಅಧ್ಯಕ್ಷ ,ನಾಡೋಜ ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಗೃಹ ಕಚೇರಿ ಸಾಕ್ಷಾತ್ಕಾರ ಭವನದಲ್ಲಿ ನಡೆದ ಪ್ರಭುಲಿಂಗೇಶ್ವರ ಸಹಕಾರಿ ಸಂಘದ ವಿವಿಧ ವಿಮಾ ಕಂಪನಿಗಳ ಒಡಬಂಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವ ವಿಮೆಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಬದುಕಿನ ಬಂಡಿಯನ್ನು ಸರಾಗವಾಗಿ ಎಳೆಯಬಹುದು,ಜೀವ ವಿಮೆಯು ದೀರ್ಘಾವಧಿಯ ಉಳಿತಾಯಕ್ಕೆ ನೆರವಾಗುವುದರ ಜೋತೆಗೆ ಬದುಕಿಗೆ ರಕ್ಷಣೆಯನ್ನೂ ನೀಡುತ್ತದೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವಾಗ ಏನಾಗುತ್ತದೆ ಎಂದು ಗೊತ್ತಾಗುವುದಿಲ್ಲ, ಕುಟುಂಬವನ್ನು ನಿರ್ವಹಣೆ ಮಾಡುವ ಯಜಮಾನನಿಗೆ ಆಕಸ್ಮಿಕವಾಗಿ ಏನಾದರೂ ಆದರೆ ಅವನ ಕುಟುಂಬ ಬೀದಿಗೆ ಬರುತ್ತದೆ, ಇಂತಹ ಕೆಟ್ಟ ಸಮಯದಲ್ಲಿ ಇನ್ಸೂರೆನ್ಸ್ ಗಳು ಜೀವನ ನಡೆಸಲು ಸಹಕಾರಿಯಾಗುತ್ತವೆ, ನಾವು ದುಡಿಯುವ ಹಣದಲ್ಲಿ ಸ್ವಲ್ಪ ಪ್ರಮಾಣದಲ್ಲಿ ವಿಮೆ ಮಾಡಿಸಿದರೆ ನಮ್ಮ ಮುಂದಿನ ಜೀವನಕ್ಕೆ ಅನುಕೂಲವಾಗುತ್ತದೆ.
ಇಂದು ಸಾಲ ಕೊಡುವ ಬ್ಯಾಂಕಿನವರು ಸಹ ಸಾಲಗಾರರ ಮೇಲೆ ವಿಮೆಯನ್ನು ಮಾಡಿ ಸಾಲ ನೀಡುತ್ತಾರೆ, ವ್ಯಾಪಾರಸ್ಥರು, ಉದ್ದಿಮೆದಾರರು, ರೈತರು ಧನಕರುಗಳ ಮೇಲೆ, ವಾಹನಗಳ ಮೇಲೆ ಇನ್ಸೂರೆನ್ಸ್ ಇದೆ, ಪ್ರತಿಯೊಬ್ಬರು ಜೀವ ವಿಮೆಯನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಭುಲಿಂಗೇಶ್ವರ ಪತ್ತಿನ ಸಂಘ 15 ಶಾಖೆಗಳನ್ನು ಹೊಂದಿದ್ದು ಇನ್ನು ಕೆಲವು ದಿನಗಳಲ್ಲಿ ನೂತನವಾಗಿ ಮೂಡಲಗಿ, ರಾಮದುರ್ಗ ಹಾಗೂ ಯರಗಟ್ಟಿಯಲ್ಲಿ ಶಾಖೆಗಳನ್ನು ತೆರೆದು , ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಹೋಬಳಿಗಳಲ್ಲಿ ಶಾಖೆಗಳನ್ನು ತೆರೆಯುವ ಯೋಜನೆ ಹಾಕಿಕೊಂಡಿದ್ದೇವೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಬಳಸುವ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ, ತ್ವರಿತ ಸಾಲ ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಇದರಿಂದ ಗ್ರಾಹಕರಿಗೆ ಸಾಕಷ್ಟು ಸಹಕಾರಿಯಾಗಿದೆ ಎಂದು ಹೇಳಿದರು.
ಐಸಿಐಸಿಐ, ಇಪ್ಕೋ, ನ್ಯೂ ಇಂಡಿಯನ್ ಇನ್ಸೂರೆನ್ಸ್, ಓರಿಯಂಟಲ್, ಎಲ್ಐಸಿ, ರಿಲಯನ್ಸ್ ನಿಪ್ಪುನ್ ಲೈಫ್ ಇನ್ಸೂರೆನ್ಸ್ ಕಂಪನಿಗಳ ಜೊತೆಗೆ ಒಳಬಂಡಕೆ ಮಾಡಿಕೊಳ್ಳಲಾಯಿತು.
ನಿರ್ದೇಶಕರಾದ ಪಾರ್ವತಿ ಗುಡಗುಂಟಿ, ನಾಗಪ್ಪ ಸನದಿ, ದೇವಲ ದೇಸಾಯಿ ಎಲ್ಲ ಶಾಖೆಯ ವ್ಯವಸ್ಥಾಪಕರು, ಸಿಬ್ಬಂದಿಗಳು ಇದ್ದರು, ಪ್ರಧಾನ ವ್ಯವಸ್ಥಾಪಕ ಮಹೇಶ್ ಮಠಪತಿ ಸ್ವಾಗತಿಸಿ, ವಂದಿಸಿದರು.

