ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ವಶಪಡಿಸಿಕೊಂಡ ಜಮೀನಿಗೆ ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡದ ಕಾರಣ, ಯುಕೆಪಿಯ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಾರ್ಯಾಲಯದ ಜೀಪ್, ಕಂಪ್ಯೂಟರ್ ಗಳನ್ನು ಸೋಮವಾರ ಜಪ್ತಿ ಮಾಡಲಾಯಿತು.
ವಿಜಯಪುರ ತಾಲ್ಲೂಕಿನ ಮದಭಾವಿ ಗ್ರಾಮದ ರೈತ ಜಕ್ಕಪ್ಪಗೌಡ ಧರೆಪ್ಪಾ ಬಿರಾದಾರ ಅವರಿಗೆ ಸೇರಿದ ಒಂದು ಎಕರೆ ಜಮೀನು ಯುಕೆಪಿಯ ಕಾಲುವೆ ನಿರ್ಮಾಣಕ್ಕೆ ವಶಪಡಿಸಿಕೊಳ್ಳಲಾಗಿತ್ತು.
ವಿಜಯಪುರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪರಿಹಾರ ನಿಗದಿಗೊಳಿಸಿ ಆದೇಶಿಸಿತ್ತು.
ಅಲ್ಲದೇ ಹೈಕೋರ್ಟ್ ಕೂಡಾ ಪರಿಹಾರ ಮೊತ್ತದ ಅರ್ಧದಷ್ಟನ್ನು ತಕ್ಷಣವೇ ನೀಡುವಂತೆ ಮಧ್ಯಂತರ ಆದೇಶ ನೀಡಿತ್ತು.
ಹೈಕೋರ್ಟ್ ಮಧ್ಯಂತರ ತೀರ್ಪಿನಂತೆ ನೀಡಬೇಕಾದ ಪರಿಹಾರ ಹಣ ೨,೨೬,೪೭,೪೫೨ ರೂ ನೀಡಲು ಯುಕೆಪಿಯ ವಿಶೇಷ ಭೂಸ್ವಾಧೀನಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನ್ಯಾಯಾಲಯ ನಿಗದಿಗೊಳಿಸಿದ ಪರಿಹಾರದ ಶೇ ೨೫ ರಷ್ಟು ಹಣವನ್ನಾದರೂ ತಕ್ಷಣ ನೀಡಿ ಎಂಬುದು ರೈತರ ಬೇಡಿಕೆಯಾಗಿತ್ತು. ಆದರೂ ಪರಿಹಾರ ನೀಡಿರಲಿಲ್ಲ. ಅದಕ್ಕಾಗಿ ವಿಜಯಪುರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶದಂತೆ ಕಚೇರಿಯ ವಸ್ತುಗಳನ್ನು ಜಪ್ತಿ ಮಾಡಲಾಯಿತು ರೈತನ ಪರ ವಕೀಲರಾದ ಆನಂದ ದೊಡಮನಿ ಹಾಗೂ ಎಸ್.ಎಸ್. ಡೋಂಗರಗಾವಿ ತಿಳಿಸಿದರು.
ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯ ಒಂದು ಬುಲೆರೋ ಜೀಪ್, ೧೦ ಮಾನಿಟರ್, ೮ ಸಿಪಿಯು ನ್ಯಾಯಾಯದ ಸಿಬ್ಬಂದಿ ಜಪ್ತಿ ಮಾಡಿದರು.

