ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಕಾರ್ಖಾನೆ ಮಾಲೀಕರು ದರ ನಿಗದಿ ಮಾಡದೆ ರೈತರನ್ನು ದಾರಿ ತಪ್ಪಿಸುವ, ದ್ವಂದ್ವ ನೀತಿ ಅನುಸರಿಸಿ ರೈತರ ಮದ್ಯೆ ಒಡಕು ಮೂಡಿಸುವ ಕೆಲಸ ಮಾಡುತ್ತಾರೆ ಈ ಯಾವ ಕಾರ್ಯಗಳಿಗೂ ಕಿವಿಗೊಡದೆ ಸರ್ವ ರೈತರು ಒಂದುಗೂಡಿ ಕಾರ್ಖಾನೆಯವರಿಗೆ ಸರಿಯಾದ ಪಾಠ ಕಲಿಸಬೇಕಿದೆ ಎಂದು ರೈತ ಸಂಘದ ಮುಖಂಡರಾದ ಟಿ.ಟಿ. ಹಗೇದಾಳ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ರೈತ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಸಕ್ಕರೆ ಕಾರ್ಖಾನೆಗಳು ಬೆಲೆ ಘೋಷಣೆ ಮಾಡುವವರೆಗೂ ಕಬ್ಬು ಕಟಾವು ಮಾಡಬಾರದು ಎಂದು ರೈತರಲ್ಲಿ ಮನವಿ ಮಾಡಿದರು.
ಯುವ ರೈತ ಮಂಜುನಾಥ ಸೊನ್ನದ ಮಾತನಾಡಿ, ಮಾರುಕಟ್ಟೆಯಲ್ಲಿ ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಹವಾಮಾನ ಬದಲಾವಣೆ ಸಹ ರೈತರ ಜೀವನಕ್ಕೆ ದೊಡ್ಡ ಆಘಾತವಾಗಿದೆ. ಮಳೆ ಹೆಚ್ಚು ಕಡಿಮೆ ಬಂದರೆ ಎರಡೂ ರೈತರಿಗೆ ಹಾನಿ ಉಂಟುಮಾಡುತ್ತವೆ. ಮಳೆ ಅತಿಯಾಗಿರುವುದರಿಂದ ಹಲವೆಡೆ ಬೆಳೆ ನಷ್ಟ ಉಂಟಾಗಿದೆ. ಸರಕಾರಗಳು ರೈತರು ಬೆಳೆದ ಕಬ್ಬಿಗೆ ನ್ಯಾಯಯುತವಾದ ಬೆಲೆ ನಿಗದಿ ಮಾಡಿ ಕಾರ್ಖಾನೆಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ನವೆಂಬರ್ 1 ರೊಳಗೆ ಎಲ್ಲ ಸಕ್ಕರೆ ಕಾರ್ಖಾನೆಗಳ ಮಾಲೀಕರು ಒಂದು ಟನ್ ಕಬ್ಬಿಗೆ 3500 ದರ ನಿಗದಿಪಡಿಸಿ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು. ಇಲ್ಲದಿದ್ದರೆ ದರ ನಿಗದಿಪಡಿಸದೆ ಕಬ್ಬು ಕಟಾವು ಮಾಡಿ ಸಾಗಾಣೆ ಮಾಡುವ ಸಂದರ್ಭದಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಲಾಗುವುದು ಎಂದರು.
ನಮ್ಮ ರೈತರು ದರ ನಿಗದಿ ಪಡಿಸುವವರೆಗೆ ತಾವು ಬೆಳೆದ ಕಬ್ಬಿನ ಕಟಾವುವನ್ನು ಮಾಡಬೇಡಿ ಎಂದು ಮನವಿ ಮಾಡಿದರು.
ರೈತರಿಗೆ ಕಬ್ಬು ದರ ನಿಗದಿ ಮಾಡದೆ ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಪ್ರಾರಂಭಿಸಿದ್ದು ರೈತರಿಗೆ ಅನ್ಯಾಯ ಮಾಡುತ್ತಿವೆ. ಸಕ್ಕರೆ ಕಾರ್ಖಾನೆಗಳು ದರ ನಿಗದಿ ಪಡಿಸದೆ ಕಬ್ಬು ನುರಿಸುವುದು ಪ್ರಾರಂಭಿಸಿದಲ್ಲಿ ಆಯಾ ಕಾರ್ಖಾನೆಗಳ ಮುಂಭಾಗ “ರೈತ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.
ಕೊಲ್ಹಾರ ತಾಲೂಕು ವ್ಯಾಪ್ತಿಯಲ್ಲಿ ಮೆಕ್ಕೆಜೋಳಕ್ಕೆ ಹಾಗೂ ಉಳ್ಳಾಗಡ್ಡಿ (ಈರುಳ್ಳಿ) ಬೆಳೆಗೆ ಬೆಂಬಲ ಬೆಲೆ ನಿಗಧಿ ಮಾಡಿ ಖರೀದಿ ಕೇಂದ್ರ ಪ್ರಾರಂಭ ಮಾಡಬೇಕು, ಸಕ್ಕರೆ ಕಾರ್ಖಾನೆ ಮುಂದೆ ಸರ್ಕಾರದಿಂದ ವೇಬ್ರೀಜ (ತುಕು ಕೇಂದ್ರ) ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಟಿ.ಟಿ. ಹಗೇದಾಳ, ರೈತ ಸಂಘದ ತಾಲೂಕ ಅಧ್ಯಕ್ಷರಾದ ಸೋಮು ಬಿರಾದಾರ, ಕಲ್ಲಪ್ಪ ಗಿಡ್ಡಪ್ಪಗೋಳ, ಶಶಿಕಾಂತ ಬಿರಾದಾರ, ಮುದಕಣ್ಣ ಚಲವಾದಿ, ಧೂಳಪ್ಪ ಸಿಂಧೆ, ನೀಲನಗೌಡ ಬಿರಾದಾರ , ರವಿಕಾಂತ ಪಾಟೀಲ, ಬಸವರಾಜ ಗಿಡಗಂಟಿ, ಮಲ್ಲು ಗಾಣಿಗೇರ ಹಾಗೂ ರೈತ ಸಂಘದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

