“ನವೆಂಬರ್ ಕ್ರಾಂತಿ”ಯ ಚರ್ಚೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಮಿಕ ಹೇಳಿಕೆ
ಮಂಗಳೂರು: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತಾದ “ನವೆಂಬರ್ ಕ್ರಾಂತಿ”ಯ ಬಗ್ಗೆ ವ್ಯಾಪಕ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವಂತೆಯೇ ಇತ್ತ ಸಿಎಂ ಸಿದ್ದರಾಮಯ್ಯ ಈ ಚರ್ಚೆಗೆ ಮತ್ತೊಂದು ಟ್ವಿಸ್ಟ್ ನೀಡುವ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ನವೆಂಬರ್‌ನಲ್ಲಿ ತನ್ನ ಐದು ವರ್ಷಗಳ ಅವಧಿಯ ಅರ್ಧಭಾಗ ತಲುಪಿರುವಂತೆಯೇ ನಾಯಕತ್ವದಲ್ಲಿ ಸಂಭವನೀಯ ಬದಲಾವಣೆಯ ಬಗ್ಗೆ ಊಹಾಪೋಹಗಳೆದ್ದಿವೆ.
ಇದನ್ನು ಕೆಲವರು “ನವೆಂಬರ್ ಕ್ರಾಂತಿ” ಎಂದು ಕರೆಯುತ್ತಿದ್ದು, ಈ ಕುರಿತ ಚರ್ಚೆಗಳು ವ್ಯಾಪಕವಾಗಿವೆ. ಆದಾಗ್ಯೂ, ಸಿಎಂ ಸಿದ್ದರಾಮಯ್ಯ ಕೂಡ ಐದು ವರ್ಷಗಳ ಪೂರ್ಣ ಅವಧಿಯನ್ನು ಪೂರ್ಣಗೊಳಿಸುವುದಾಗಿ ನಿರಂತರವಾಗಿ ಪುನರುಚ್ಚರಿಸುತ್ತಿದ್ದಾರೆ.
ಆದರೆ ಇದೀಗ ಮೊದಲ ಬಾರಿಗೆ ಸಿಎಂ ಸ್ಥಾನದ ಬದಲಾವಣೆ ಕುರಿತು ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ನತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.
ಸಿದ್ದರಾಮಯ್ಯ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬ ಅವರ ಆಪ್ತ ಮತ್ತು ಮಾಜಿ ಸಚಿವ ಕೆ ಎನ್ ರಾಜಣ್ಣ ಅವರ ಹೇಳಿಕೆಯ ಬಗ್ಗೆ ಕೇಳಿದಾಗ, “ಅದು ಅವರ ವೈಯಕ್ತಿಕ ಅಭಿಪ್ರಾಯ” ಎಂದು ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್‌ನಲ್ಲಿರುವ ಬಹು ಮುಖ್ಯಮಂತ್ರಿ ಆಕಾಂಕ್ಷಿಗಳ ಕುರಿತು ಮಾತನಾಡಿದ ಸಿದ್ದರಾಮಯ್ಯ, “ಪ್ರಜಾಪ್ರಭುತ್ವದಲ್ಲಿ, ಸ್ಪರ್ಧೆಯಲ್ಲಿರುವವರಿಗೆ ಸ್ಪರ್ಧಿಸಬೇಡಿ ಎಂದು ನಾವು ಹೇಳಲು ಸಾಧ್ಯವಿಲ್ಲ. ಅದು ಅವರ ಹಕ್ಕು. ಯಾರಾದರೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿಕೊಳ್ಳಬಹುದು, ಆದರೆ ಅಂತಿಮವಾಗಿ, ಹೈಕಮಾಂಡ್ ನಿರ್ಧರಿಸುತ್ತದೆ.”
ನಾಯಕತ್ವ ಬದಲಾವಣೆಯ ವಿಷಯ ಏಕೆ ನಿರಂತರವಾಗಿ ಹೊರಹೊಮ್ಮುತ್ತಿದೆ ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, “ನೀವು (ಮಾಧ್ಯಮ) ಕೇಳುತ್ತಲೇ ಇರುವುದರಿಂದ” ಈ ಪ್ರಶ್ನೆಗಳು ಉದ್ಭವಿಸುತ್ತಿವೆ ಎಂದು ಉತ್ತರಿಸಿದರು.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಒಳಪಟ್ಟು ಐದು ವರ್ಷಗಳ ಪೂರ್ಣ ಅವಧಿಗೆ ಅಧಿಕಾರದಲ್ಲಿ ಮುಂದುವರಿಯುವುದಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ.
ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಉಳಿಯುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಹೈಕಮಾಂಡ್ ನಿರ್ಧರಿಸಿದರೆ” ಎಂದು ಮಾರ್ಮಿಕವಾಗಿ ಹೇಳಿದರು.
ಅಧಿಕಾರ ಹಂಚಿಕೆ ಒಪ್ಪಂದ?
ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಊಹಾಪೋಹಗಳು ಕೆಲವು ಸಮಯದಿಂದ ಮುಂದುವರೆದಿದ್ದು, ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಒಪ್ಪಂದ ನಡೆದಿದೆ ಎಂದು ವರದಿಗಳು ಸೂಚಿಸುತ್ತವೆ.
ಮೇ 2023 ರಲ್ಲಿ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಉನ್ನತ ಹುದ್ದೆಗೆ ಇಬ್ಬರು ನಾಯಕರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಳ್ಳುವಂತೆ ಮನವೊಲಿಸಿತ್ತು.
ಆ ಸಮಯದಲ್ಲಿ, “ಪರ್ಯಾಯ ಮುಖ್ಯಮಂತ್ರಿ” ವ್ಯವಸ್ಥೆಗೆ ಒಪ್ಪಿಗೆ ನೀಡಲಾಗಿತ್ತು. ಒಪ್ಪಂದದ ಅನ್ವಯ ಡಿಕೆ ಶಿವಕುಮಾರ್ ಎರಡೂವರೆ ವರ್ಷಗಳ ನಂತರ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದು ವರದಿಯೊಂದು ಹೇಳಿದೆ. ಆದಾಗ್ಯೂ, ಪಕ್ಷ ಇದನ್ನು ಎಂದಿಗೂ ಅಧಿಕೃತವಾಗಿ ದೃಢಪಡಿಸಿಲ್ಲ.

